ನಾವು ಗೆದ್ದಾಗಿದೆ, ವಿಜಯ ಪತಾಕೆ ಹಾರಿಸೋದಷ್ಟೇ ಬಾಕಿ

KannadaprabhaNewsNetwork |  
Published : Apr 07, 2024, 01:54 AM IST
ಜೆಡಿಎಸ್ ಪಕ್ಷದ ಬೆಂಬಲ ಘೋಷಣೆ ಹಾಗೂ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ  | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಈಗಾಗಲೇ ಗೆದ್ದಿದ್ದು, ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ಇನ್ನೇನಿದ್ದರೂ ವಿಜಯ ಪತಾಕೆ ಹಾರಿಸುವುದೊಂದೇ ಬಾಕಿ ಎಂದು ಹರಿಹರ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದ್ದಾರೆ.

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಈಗಾಗಲೇ ಗೆದ್ದಿದ್ದು, ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ಇನ್ನೇನಿದ್ದರೂ ವಿಜಯ ಪತಾಕೆ ಹಾರಿಸುವುದೊಂದೇ ಬಾಕಿ ಎಂದು ಹರಿಹರ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದ್ದಾರೆ.

ಹರಿಹರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಶನಿವಾರ ಜೆಡಿಎಸ್ ಪಕ್ಷದ ಬೆಂಬಲ ಘೋಷಣೆ ಹಾಗೂ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ನಾವು ಈಗಾಗಲೇ ಗೆದ್ದಿದ್ದು, ಉಭಯ ಪಕ್ಷಗಳ ಕಾರ್ಯಕರ್ತರು ವಿಜಯ ಪತಾಕೆ ಹಾರಿಸಬೇಕಷ್ಟೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯ, ದೇಶ ರಕ್ಷಣೆ, ದೂರದೃಷ್ಟಿ, ದೇಶದ ಬಗ್ಗೆ ಹೊಂದಿರುವ ಬದ್ಧತೆ, ದೇಶವಾಸಿಗಳ ಬಗ್ಗೆ ಇರುವ ಕಾಳಜಿಯನ್ನು ಮೆಚ್ಚಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಗೆ ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವ ಅವರನ್ನು ದಾವಣಗೆರೆ ಕ್ಷೇತ್ರದಿಂದ ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಇಲ್ಲಿ ಸೇರಿಸುವ ಉಭಯ ಪಕ್ಷದ ಮುಖಂಡರು, ಕಾರ್ಯಕರ್ತರ ಉತ್ಸಾಹ, ಜನಸ್ತೋಮ ನೋಡಿದರೆ ನಾವು ಈಗಾಗಲೇ ಗೆದ್ದಿದ್ದು, ವಿಜಯ ದುಂದುಬಿ ಮೊಳಗಿಸುವುದಷ್ಟೇ ಬಾಕಿ ಎನಿಸುತ್ತಿದೆ ಎಂದು ತಿಳಿಸಿದರು.

ನಾನು, ಬಿ.ಪಿ.ಹರೀಶ ಜೋತಿ ಎತ್ತಿನಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರೆ ಅದಕ್ಕೆ ಸಾಕ್ಷಿ. ನಮ್ಮಲ್ಲಿ ಯಾವುದೇ ಭಿನ್ನಮತ, ಅಸಮಾಧಾನ ಇಲ್ಲ. ನಮ್ಮಿಬ್ಬರ ಗುರಿ ಒಂದೇ. ಗಾಯತ್ರಿ ಸಿದ್ದೇಶ್ವರ ಸಂಸತ್ ಪ್ರವೇಶಿಸಿ, ಇತಿಹಾಸ ಬರೆಯಬೇಕೆಂಬುದು. ಇಲ್ಲಿ ಹರಿ(ಹರೀಶ), ಹರ(ಶಿವಶಂಕರ) ಇಬ್ಬರೂ ಒಂದಾಗಿದ್ದು, ಹರಿಹರ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇವೆ. ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹ ಸದಾ ಇರಲಿ. ಲೋಕಸಭೆ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸಿ, ಮೋದಿ ಕೈಗಳನ್ನು ಬಲಪಡಿಸೋಣ ಎಂದು ಶಿವಶಂಕರ ಮನವಿ ಮಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬಿಜೆಪಿ ವರಿಷ್ಟರು ಪತ್ನಿ ಗಾಯತ್ರಿಯವರಿಗೆ ಟಿಕೆಟ್ ನೀಡಿದ್ದು, ಎಚ್ಚೆಸ್ ಶಿವಶಂಕರ, ಬಿ.ಪಿ.ಹರೀಶ ಇಬ್ಬರೂ ಒಂದಾಗಿ ಕೆಲಸ ಮಾಡಿ, ಗಾಯತ್ರಿ ಸಿದ್ದೇಶ್ವರರನ್ನು ಗೆಲ್ಲಿಸಬೇಕು. ನೀವಿಬ್ಬರೂ ನಮಗೆ ಜೋಡಿ ಶಕ್ತಿ ಇದ್ದಂತೆ. ಸಂಸದನಾಗಿ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಬೆಂಬಲಿಸಿದ್ದೇನೆ. ಗಾಯತ್ರಿ ಸಿದ್ದೇಶ್ವರ ಗೆದ್ದು, ನಿಮ್ಮಿಬ್ಬರ ಕನಸಿನ ಹರಿಹರ ಅಭಿವೃದ್ಧಿಗೆ ಸಾಥ್ ನೀಡುತ್ತಾರೆ ಎಂದರು.

ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮಾತನಾಡಿ, ಎಚ್.ಶಿವಶಂಕರ, ಬಿ.ಪಿ.ಹರೀಶ ನನ್ನ ಜೊತೆ ಜೋಡಿ ಎತ್ತುಗಳಂತೆ ನಿಂತಿದ್ದಾರೆ. ನನ್ನನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವವರೆಗೂ ವಿರಾಮಿಸುವುದಿಲ್ಲವೆಂದು ಮಾತುಕೊಟ್ಟು, ನಮ್ಮ ಬೆನ್ನಿಗೆ ನಿಂತಿದ್ದಾರೆ. ನಾನು ಅಡುಗೆ ಮಾಡುವುದಕ್ಕೂ ಸಿದ್ಧ. ಮಾತಾಡುವುದಕ್ಕೂ ಸಿದ್ಧ, ಅಭಿವೃದ್ಧಿ ಮಾಡುವುದಕ್ಕೂ ಸಿದ್ಧ ಎನ್ನುವುದನ್ನು ಸಾಬೀತು ಮಾಡಲು, ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಕಾಂಗ್ರೆಸ್ ಆಡಳಿತದ ವಿರುದ್ಧ ಜನ ರೋಸಿದ್ದಾರೆ. ನಿಮ್ಮದೇ ಹಣ ನಿಮಗೆ ಗ್ಯಾರಂಟಿ ರೂಪದಲ್ಲಿ ಕೊಟ್ಟು ಮರಳು ಮಾಡುತ್ತಿದ್ದಾರಷ್ಟೇ. ಕಾಂಗ್ರೆಸ್‌ನ ನಾಟಕಕ್ಕೆ ನೀವು ಮರಳಾಗಬೇಡಿ. ರಾಜ್ಯದಲ್ಲಿ ಕೊಟ್ಟಿರುವ ಗ್ಯಾರಂಟಿಗಳನ್ನೇ ಈಡೇರಿಸಲಾಗಿಲ್ಲ. ಈಗ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು 25 ಗ್ಯಾರಂಟಿ ನೀಡಿ ದೇಶದ ಜನರಿಗೆ ಮಂಕು ಬೂದಿ ಎರಚಲು ಮುಂದಾಗಿದ್ದಾರೆ. ಜನ ಎಚ್ಚರಿಕೆ ವಹಿಸಬೇಕು. ನರೇಂದ್ರ ಮೋದಿ

ಮತ್ತೊಮ್ಮೆ ಪ್ರಧಾನಿಯಾದರೆ ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಹರಿಹರದಲ್ಲಿ ನಾನು-ಶಿವಶಂಕರ್ ಜೊತೆಯಾಗಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಘೋಷಿಸಿದರು.

ಮುಖಂಡರಾದ ತೇಜಸ್ವಿ ಪಟೇಲ್, ದೇವರಾಜ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಎಸ್.ಎಂ.ವೀರೇಶ ಹನಗವಾಡಿ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಬೂತ್ ಅಧ್ಯಕ್ಷರು, ಮಂಡಲ ಅಧ್ಯಕ್ಷರು, ಜೆಡಿಎಸ್ ಪಕ್ಷದ ಮುಖಂಡರು, ಜೆಡಿಯು ಪಕ್ಷದ ಮುಖಂಡರು ಸೇರಿದಂತೆ ಬಿಜೆಪಿ ಕಾರ್ಯುಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌