ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸುತ್ತೂರು ಶಾಖಾ ಮಠದಲ್ಲಿ ಗುರುವಾರ ಜೆಎಸ್‌ಎಸ್ ಮಹಾವಿದ್ಯಾಪೀಠ ಆಯೋಜಿಸಿದ್ದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಸಂವಾದದಲ್ಲಿ ಅವರು ಮಾತನಾಡಿದರು.
ಜಾತಿ ರಾಜಕಾರಣ ಹಾಸುಹೊಕ್ಕಾಗಲು ನಾವೇ ಕಾರಣ. ನಿಮ್ಮ ಜಾತಿಯನ್ನು ರಾಜಕಾರಣಿಗಳಿಗೆ ಹೇಳಿದರೆ, ಅವರು ಜಾತಿಯ ಮೂಲಕ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಹೀಗಾಗಿ, ರಾಜಕಾರಣಿಗಳನ್ನು ದೂರದೇ ನಮ್ಮ ಜಾತಿಗಳನ್ನು ಮರೆಯಬೇಕು ಎಂದರು.ನಾವು ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಅವರ ಕಾರ್ಯವಿಧಾನದ ಆಧಾರದ ಮೇಲೆ ಆಯ್ಕೆ ಮಾಡಬೇಕೇ ಹೊರತು ಜಾತಿಯಿಂದಲ್ಲ. 1942ರಲ್ಲಿ ಅಂತರ್ಜಾತಿ ವಿವಾಹ ನಡೆದಿತ್ತು. ಅಂಬೇಡ್ಕರ್ ಮತ್ತು ಗೋಳ್ವಲ್ಕರ್ ಅವರು ಆ ದಂಪತಿಗೆ ಹರಸಿ ಪತ್ರ ಬರೆದಿದ್ದರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ವೇದಿಕೆ ಎಂದಿದ್ದಾಗಿ ಅವರು ಹೇಳಿದರು.
ಬಳಿಕ ಮಾತನಾಡಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಗತ್ತಿನ ಸಂಸ್ಕೃತಿ ರಕ್ಷಿಸುವ ಗಟ್ಟಿತನ ಹಿಂದೂಧರ್ಮಕ್ಕಿದೆ ಎಂದರು.
ಮನುಷ್ಯ ಅಂತರಂಗ ಬಹಿರಂಗದಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಬೇಕು. ಆತ್ಮನಿರೀಕ್ಷೆ ಮೂಲಕ ತನ್ನನ್ನು ತಾನು ಸರಿಪಡಿಸಿಕೊಂಡರೆ ದೇಶ ಸರಿಯಾಗುತ್ತದೆ. ರಾಗ ದ್ವೇಷ ಬದಿಗಿರಿಸಿ, ಸ್ನೇಹ, ಸೌಹಾರ್ದತೆ, ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಬೇಕು. ಜಗತ್ತು ಬದಲಾಗಿದೆ, ದೇಶ ಕೆಟ್ಟು ಹೋಗಿದೆ ಎಂದು ದೂಷಿಸುವ ಬದಲು ತಮ್ಮ ಆಂತರಿಕ ಬದಲಾವಣೆ ಮಾಡಿಕೊಳ್ಳಬೇಕು. ಅಂತರಂಗವಾಗಿ ಪರಿಶುದ್ಧವಾಗಿದ್ದರೆ ದೇವರ ಸಾಕ್ಷಾತ್ಕಾರವಾಗುತ್ತದೆ ಎಂದು ಅವರು ಹೇಳಿದರು.
ಸಹಸ್ರಮಾನದ ಹಿಂದೆ ಸ್ಥಾಪಿತವಾದ ಶ್ರೀಮಠದ ಎಲ್ಲ ಪೂಜ್ಯರು ಅಂದಿನಿಂದ ಇಂದಿನವರೆಗೆ ಅರ್ಥಪೂರ್ಣವಾಗಿ ಸಾಮಾಜಿಕ ಸೇವೆ ಮಾಡಿದ್ದಾರೆ. ಆ ಸಾಲಿನಲ್ಲಿ ಮಂತ್ರ ಮಹರ್ಷಿಗಳು ಸಮಾಜಕ್ಕೆ ಕಾರುಣ್ಯ ಕರುಣಿಸಿದವರು. ರಾಜೇಂದ್ರ ಶ್ರೀಗಳು ವೈಯಕ್ತಿಕ ಜ್ಞಾನಾರ್ಜನೆ ಬದಿಗಿರಿಸಿ ಸಮಾಜದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಜೆಎಸ್‌ಎಸ್ ವಿದ್ಯಾಪೀಠದ ಸ್ಥಾಪನೆಯಾದ 50ನೇ ವರ್ಷದ ಕಾರ್ಯಕ್ರಮದ ವಿಶೇಷಗಳಲ್ಲಿ ಸುವರ್ಣ ಮಹೋತ್ಸವದ ವಿಶೇಷ ಉಪನ್ಯಾಸವೂ. ಇಂದು ಮೋಹನ್ ಭಾಗವತರು ತಮ್ಮ ಮಹತ್ವಪೂರ್ಣ ಉಪನ್ಯಾಸದ ಮೂಲಕ ಕಾರ್ಯಕ್ರಮದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು.