ಬಂಧುಭಾವ ಇಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ಕಷ್ಟ: ಡಾ.ಮೋಹನ್‌ ಭಾಗವತ್

KannadaprabhaNewsNetwork |  
Published : May 08, 2026, 01:15 AM IST
2 | Kannada Prabha

ಸಾರಾಂಶ

ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಮೇಲು- ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು. ದೇಶದ ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕೀಯ ಮತ್ತು ಆರ್ಥಿಕ ಸಮಾನತೆಗಿಂತ ಸಾಮಾಜಿಕ ಸಮಾನತೆ ಮುಖ್ಯ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಸೆಯುವ ಕೊಂಡಿಯೇ ಬಂಧುಭಾವ . ಈ ಬಂಧುಭಾವ ಇಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ಕಷ್ಟ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಡಾ. ಮೋಹನ್‌ ಭಾಗವತ್‌ ಹೇಳಿದರು.

ನಗರದ ಸುತ್ತೂರು ಶಾಖಾ ಮಠದ ಆವರಣದಲ್ಲಿ ಗುರುವಾರ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ - 15 ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ ವಿಷಯ ಕುರಿತು ಅವರು ಮಾತನಾಡಿದರು.

ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಮೇಲು- ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು. ದೇಶದ ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು. ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಇಡೀ ದೇಹ ಆರೋಗ್ಯವಾಗಿದೆ ಎಂದು ಹೇಗೆ ಹೇಳಲು ಆಗುವುದಿಲ್ಲವೋ ಹಾಗೆಯೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಆಗದಿದ್ದರೆ ಅದು ನಿಜವಾದ ಅಭಿವೃದ್ಧಿಯಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಯೂ ಸಾಮರಸ್ಯ, ಸೌಹಾರ್ದತೆಯಿಂದ, ನಾವೆಲ್ಲರೂ ಒಂದು ಎಂದು ಸಂತೋಷದಿಂದ ಇದ್ದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸಮಾಜದಲ್ಲಿ ಸಾಮರಸ್ಯ ಮೂಡಿಸಲು ವಿವಿಧ ಜಾತಿ, ಧರ್ಮ ಮತ್ತು ಭಾಷೆಯ ಜನರ ಮನೆಗಳಿಗೆ ಭೇಟಿ ನೀಡಿ ಸ್ನೇಹ ಬೆಳೆಸಬೇಕು. ದುರ್ಬಲ ವರ್ಗದವರ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಕಟುವಾದ ನುಡಿಗಳನ್ನು ಬಿಟ್ಟು, ಸತ್ಯ ಮತ್ತು ಪ್ರೀತಿಯಿಂದ ಸಂವಹನ ನಡೆಸುವ ಮೂಲಕ ಮನಸ್ಸಿನ ವಿಕಾರಗಳನ್ನು ದೂರ ಮಾಡಬೇಕು ಎಂದು ಅವರು ಹೇಳಿದರು.

ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರೀಕತೆ ಕಟ್ಟಿದ್ದಾರೆ. ನಮ್ಮ ಸಮಾಜವು ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿಯೆಂದು ತಿಳಿದಿದೆ. ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚತ್ಯ ಪರಿಕಲ್ಪನೆ ಎಂದು ಅವರು ತಿಳಿಸಿದರು.

ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಫ್ರೆಂಚ್ ಕ್ರಾಂತಿಯಿಂದ ಬಂದಿದ್ದಲ್ಲ. ಈ ಪರಿಕಲ್ಪನೆ ಭಾರತದ್ದು. ಇದು ತಥಾಗತ ಬುದ್ಧ‌ನೀಡಿದ್ದು. ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣವನ್ನು ಮತ್ತೊಮ್ಮೆ ಓದಿಕೊಳ್ಳಬೇಕು. ಸಾಮಾಜಿಕ ಸ್ವಾತಂತ್ರ್ಯ ನೆಲೆಗೊಳ್ಳದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂದಿದ್ದಾರೆ ಎಂದರು.

ಸರ್ವೇ ಭವಂತು ಸುಖಿನಃ ಎಂಬ ತತ್ವದಡಿ, ಕೇವಲ ಬದುಕುವುದಕ್ಕಲ್ಲ, ಬದಲಾಗಿ ಇತರರಿಗಾಗಿ ಬದುಕುವ ಗುಣವೇ ಭಾರತೀಯ ಸಮಾಜದ ಶಕ್ತಿ. ಸಮಾಜ ಎಂದರೆ ಕೇವಲ ಜನರ ಗುಂಪಲ್ಲ, ಅದೊಂದು ಭಾವನಾತ್ಮಕ ಐಕ್ಯತೆ. ಭಾರತೀಯ ಮತ್ತು ಪಾಶ್ಚಿಮಾತ್ಯ ಸಮಾಜದ ನಡುವಿನ ವ್ಯತ್ಯಾಸವೇ ಇದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಾಜ ಎಂಬುದು ಒಂದು ಸಾಮಾಜಿಕ ಒಪ್ಪಂದ. ಅಲ್ಲಿ ವ್ಯಕ್ತಿಗಳ ನಡುವೆ ಪರಸ್ಪರ ಲಾಭ ಇದ್ದರೆ ಮಾತ್ರ ಸಂಬಂಧವಿರುತ್ತದೆ. ಆದರೆ, ಭಾರತೀಯ ದೃಷ್ಟಿಕೋನದಲ್ಲಿ ಸಮಾಜ ಎಂದರೆ ಸಾಯುಜ್ಯ. ಇದು ಸಾವಿರಾರು ವರ್ಷಗಳಿಂದ ಒಟ್ಟಾಗಿ ಬಾಳಿದ ಜನರ ನಡುವೆ ಉಂಟಾದ ಸ್ವಾಭಾವಿಕ ಆತ್ಮೀಯತೆ ಎಂದು ಅವರು ವ್ಯಾಖ್ಯಾನಿಸಿದರು.

ಸಂಘರ್ಷಗಳನ್ನು ಭಾರತೀಯ ಸಂಸ್ಕೃತಿ ಹೇಗೆ ನಿಭಾಯಿಸುತ್ತದೆ ಎಂಬುದಕ್ಕೆ ಶಿಬಿ ಚಕ್ರವರ್ತಿಯ ಕಥೆಯನ್ನು ಅವರು ಉದಾಹರಿಸಿದರು. ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ, ದಯೆ ನಮಗೆ ಬರಬೇಕು. ಈ ತ್ಯಾಗ, ಕರುಣೆ, ದಯೆಯಲ್ಲಿಯೇ ಸೌಹಾರ್ದವಿದೆ ಎಂದು ಅವರು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು.

ಗಾಯಕಿಯರಾದ ಕೆ.ಜಿ. ವಿನುತಾ, ಅಮೂಲ್ಯ ಅವರು ಪುರುಷೋತ್ತಮ್, ಎಸ್. ನಾಗರಾಜ್ ಅವರ ಪಕ್ಕಾವಾದ್ಯದ ಸಾಂಗತ್ಯದಲ್ಲಿ ವಚನಗಳನ್ನು ಪ್ರಸ್ತುತಪಡಿಸಿದರು. ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಸಹ ಕುಲಾಧಿಪತಿ ಪ್ರೊ.ಬಿ. ಸುರೇಶ್ ಸ್ವಾಗತಿಸಿದರು. ಜೆಎಸ್ಎಸ್ ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್ ಉಪನ್ಯಾಸದ ನಂತರ ಸಂವಾದ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಮಮತೆಯ ಮಡಿಲಿಗಿದು ಗೀತ ನಮನ
ಸಂವಿಧಾನದ ಆಶಯ ಕಗ್ಗೊಲೆ ಮಾಡುತ್ತಿರುವ ಸಿಎಂ