ಕನ್ನಡಪ್ರಭ ವಾರ್ತೆ ಹಾಸನ
೮೦ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಹಾಸನಾಂಬಾ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಜಿಲ್ಲಾಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಅಂಗವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸಂವಹನ ಕೌಶಲ್ಯ, ಸಮಯ ನಿರ್ವಹಣೆ, ಸಾಮಾಜಿಕ ಜವಾಬ್ದಾರಿ ಹಾಗೂ ಸೃಜನಶೀಲ ಚಿಂತನೆ ಬೆಳೆಸಿಕೊಳ್ಳುವ ಅಗತ್ಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ, ಉತ್ತಮ ವ್ಯಕ್ತಿತ್ವ, ಸಾಮಾಜಿಕ ಅರಿವು ಹಾಗೂ ಜವಾಬ್ದಾರಿಯುತ ನಾಗರಿಕ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ಕೌಶಲಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಶಿಬಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಹಾಸನಾಂಬ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ವಲಯಾಧ್ಯಕ್ಷ ತಿಮ್ಮರಾಯಶೆಟ್ಟಿ, ಖಜಾಂಚಿ ಧರಣಿ, ಸದಸ್ಯ ಪರಮೇಶ್ವರಯ್ಯ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ಕೆ.ಎಸ್. ಯೋಗೇಶ್, ಸದಸ್ಯ ಸುಬ್ರಮಣ್ಯ, ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕದ ಉಪಾಧ್ಯಕ್ಷ ವಿ.ಎನ್. ರಾಜಶೇಖರ್, ಎಐಡಿಎಸ್‌ಒ ಕರ್ನಾಟಕ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಜಿಲ್ಲಾ ಅಧ್ಯಕ್ಷೆ ಚೈತ್ರ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಸೇರಿದಂತೆ ಇತರರು ಇದ್ದರು.