ಕನ್ನಡಪ್ರಭ ವಾರ್ತೆ ಬೆಂಗಳೂರು
ಒಪ್ಪಂದದ ನಿಯಮ-ನಿಬಂಧನೆಗಳ ಉಲ್ಲಂಘಿಸಿರುವ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ತಕ್ಷಣ ನಿಷೇಧಿಸಬೇಕು, ಶಾಸನ ರಚನೆ ಮುಖಾಂತರ ನೈಸ್ ರಸ್ತೆ ಯೋಜನೆಯನ್ನೇ ರಾಜ್ಯ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಕಳೆದ ತಿಂಗಳಾಂತ್ಯದಲ್ಲಿ ರಾಜ್ಯ ಹೈಕೋರ್ಟ್ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಕ್ರಮಗಳ ಬಗ್ಗೆ ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಈ ಪತ್ರ ಬರೆದಿದ್ದಾರೆ.ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳು ಹಾಗೂ ವಿಧಾನಸಭೆ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿ ದಾಖಲಿಸಿರುವಂತೆ ನೈಸ್ ಸಂಸ್ಥೆಯು ರಸ್ತೆ ಯೋಜನೆ ಅನುಷ್ಠಾನದಲ್ಲಿ ಚೌಕಟ್ಟು ಒಪ್ಪಂದ(ಎಫ್‌ಡಬ್ಲ್ಯೂಎ) ಮತ್ತು ಯೋಜನಾ ತಾಂತ್ರಿಕ ಒಪ್ಪಂದದ (ಪಿಟಿಎ) ನಿಬಂಧನೆ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಷಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠದ ತೀರ್ಮಾನದ ಉಲ್ಲೇಖದಂತೆ 2003 ಮತ್ತು 2009ರಲ್ಲಿ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡಿದ್ದರೂ ಈವರೆಗೂ ರೈತರಿಗೆ ಭೂ ಪರಿಹಾರ ನಿಗದಿಪಡಿಸಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶಗಳಲ್ಲಿ ಭೂಸ್ವಾದೀನ ಮತ್ತು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದ ಅನುಷ್ಠಾನದಲ್ಲಿ ನೈಸ್ ಸಂಸ್ಥೆಯು ಎಸಗಿರುವ ಅನೇಕ ಅಕ್ರಮ ಮತ್ತು ಅವ್ಯವಹಾರಗಳನ್ನು ಬಯಲಿಗೆ ಎಳೆಯಲಾಗಿದೆ ಎಂಬುದನ್ನು ಎಚ್.ಡಿ.ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಜಮೀನು ಅನ್ಯ ಉದ್ದೇಶಕ್ಕೆ ಬಳಕೆ:
ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಂಡ ಜಮೀನುಗಳನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಭೂಸ್ವಾಧೀನ ಕಾಯ್ದೆ ಪ್ರಕಾರ ಒಂದು ಬಾರಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಭೂಮಾಲೀಕರು ಮತ್ತು ರೈತರು ಯಾವುದೇ ರೀತಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಒಂದು ವೇಳೆ ಕೈಗೊಂಡರೆ ಪರಿಹಾರ ಪಡೆಯಲು ಕಾಯ್ದೆಯಲ್ಲಿ ಅವಕಾಶ ಇಲ್ಲ. ರಾಜ್ಯ ಸರ್ಕಾರದ ಈ ರೀತಿಯ ಕಾರ್ಯವೈಖರಿ ಯೋಜನೆ ಭಾದಿತರನ್ನು ತ್ರಿಶಂಕುವಿನಲ್ಲಿ ನಿಲ್ಲಿಸಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಿಬಂಧನೆ-ಷರತ್ತುಗಳ ಉಲ್ಲಂಘನೆ:
ನೈಸ್ ಸಂಸ್ಥೆಯ ಟೋಲ್ ರೋಡ್ ನಿರ್ಮಾಣಕ್ಕೆ 6,999 ಎಕರೆ ಹಾಗೂ 5 ಟೌನ್‌ಶಿಪ್ ನಿರ್ಮಾಣಕ್ಕೆ 13,237 ಎಕರೆ ಸೇರಿ ಒಟ್ಟು 20,193 ಎಕರೆ ಭೂಮಿಯನ್ನು ಚೌಕಟ್ಟು ಒಪ್ಪಂದದಂತೆ ಸರ್ಕಾರದಿಂದ ಪಡೆಯಬೇಕು. ಆದರೆ ಈ ಸಂಸ್ಥೆ ಸುಪ್ರಿಂ ಕೋರ್ಟ್‌ನಲ್ಲಿ ಹೂಡಿದ ನ್ಯಾಯಾಂಗ ನಿಂದನೆ ಅರ್ಜಿ ಕಾರಣಕ್ಕಾಗಿ ಒಪ್ಪಂದಗಳ ನಡುವೆ ವ್ಯತ್ಯಾಸವಾಗಿ ನಮೂದು ಆಗಿರುವ ವಿಸ್ತೀರ್ಣವನ್ನು ದಾಖಲಿಸಿ ಮಂಜೂರಾತಿ ಕೇಳಿದೆ. ಟೌನ್‌ಶಿಪ್‌ಗಳಿಗೆ ನಿಗದಿಯಾಗಿದ್ದ 13,194 ಎಕರೆಗಳ ಪೈಕಿ 2,469.86 ಎಕರೆ ಭೂಮಿಯನ್ನು ಟೋಲ್ ರಸ್ತೆಗೆ ಸೇರಿಸಿ ಒಟ್ಟು 9,448.86 ಎಕರೆ ಜಮೀನು ಟೋಲ್ ರಸ್ತೆಗೆ ಅವಶ್ಯವೆಂದು ವಾದಿಸಿದೆ. ಸಂಸ್ಥೆಯ ಇಂತಹ ಕ್ರಮಗಳು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದಗಳ ನಿಬಂಧನೆ ಮತ್ತು ಷರತ್ತುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.ಪ್ರಸ್ತಾವನೆ ಸಲ್ಲಿಸದೆ ಟೋಲ್ ದರ ಏರಿಕೆ:
ರಾಜ್ಯ ಸರ್ಕಾರ ನೈಸ್ ಸಂಸ್ಥೆಯೊಂದಿಗೆ 2000 ಸೆ.4ರಂದು ಟೋಲ್ ವಿನಾಯಿತಿ ಒಪ್ಪಂದ ಮಾಡಿಕೊಂಡಿದೆ. ಈ ನಡುವೆ 2008, 2010 ಮತ್ತು 2011ನೇ ಸಾಲಿನವರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಟೋಲ್ ದರಗಳನ್ನು ಪರಿಷ್ಕರಿಸಿದೆ. ನಂತರ ರಾಜ್ಯ ಸರ್ಕಾರದ ಅಧಿಸೂಚನೆ ಇಲ್ಲದೆ, ಸಂಸ್ಥೆಯು ಟೋಲ್ ದರವನ್ನು ಅನಧಿಕೃತವಾಗಿ ಹೆಚ್ಚಿಸುತ್ತ ಹೋಗಿರುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿದ್ದಾರೆ.ಈ ವಿಭಾಗೀಯ ಪೀಠ ಮತ್ತು ಸದನ ಸಮಿತಿ ಸಂಪುಟದ ಉಪ ಸಮಿತಿಯು ಕೆಐಎಡಿಬಿಯು ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ನೀಡಿರುವ 554 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಇದುವರೆಗೂ ಹಿಂಪಡೆಯಲು ಕ್ರಮವಹಿಸಿಲ್ಲ. ನೈಸ್ ಸಂಸ್ಥೆಗೆ ಈ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿರುವುದರಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಕ್ಲಿಷ್ಟವಾಗಿ ವಿಮರ್ಶಿಸಬೇಕು. ಇಲ್ಲವೇ ಈ ಯೋಜನೆ ರದ್ದು ಪಡಿಸಲು ಸೂಚಿಸಿದೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.