ಹಿಂದೆಲ್ಲ ಶಿವಮೊಗ್ಗಕ್ಕೆ ಎರಡು ರೈಲುಗಳು ಬರುತ್ತಿದ್ದವು. ಈಗ 20ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ ಇದು ಸಂಸದ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಿಂದೆಲ್ಲ ಶಿವಮೊಗ್ಗಕ್ಕೆ ಎರಡು ರೈಲುಗಳು ಬರುತ್ತಿದ್ದವು. ಈಗ 20ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ ಇದು ಸಂಸದ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಬಂಟರ ಭವನದಲ್ಲಿ ಬಿ.ವೈ. ರಾಘವೆಂದ್ರ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಂಸದರನ್ನು ಅಭಿನಂದಿಸಿ ಮಾತನಾಡಿದ ಅವರು, ರಾಘಣ್ಣ ಶೋ ಪೀಸ್ ರಾಜಕಾರಣಿಯಲ್ಲ. ನಿಜವಾದ ಶಕ್ತಿ ಇರುವಂತಹ ರಾಜಕಾರಣಿ ಎಂದು ವರ್ಣಿಸಿದರು.
ಕೆಲವು ಸಂಸದರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೆ, ರಾಘವೇಂದ್ರ ಅವರು ಪಾದರಸದಂತೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಎಫ್ ಎಂ ರೇಡಿಯೋ, ಸಿಗಂದೂರು ಸೇತುವೆ, ನ್ಯಾಷನಲ್ ಹೈವೆ, ರೈಲ್ವೆ, ಏರ್ ವೇ, ಆರ್ ಎಎಫ್ ಘಟಕ, ಅಡಕೆ ಬೆಳೆಗಾರರಿಗೆ ಸ್ಪಂದನೆ ಹೀಗೆ ಹತ್ತಾರು ಯೋಜನೆಗಳು ಇವರ ಕಾಲದಲ್ಲಿ ಆಗಿರುವ ಪ್ರಮುಖ ಯೋಜನೆಗಳು. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ರಾಘವೇಂದ್ರ ಅವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿದೆ ಎಂದರು.ಕೆಲವರು ಹಾರ ತುರಾಯಿ, ಪ್ಲೆಕ್ಸ್ ಗಳಿಗೆ ಕೆಲವು ರಾಜಕಾರಣಿಗಳು ಸೀಮಿತವಾಗಿರುತ್ತಾರೆ. ಆದರೆ ಸಂಸದ ಬಿ.ವೈ. ರಾಘವೇಂದ್ರ ರಾಜಕೀಯ ಜೀವನ ಹಾಗಿಲ್ಲ. ಎಲ್ಲೆಲ್ಲಿ ಅನುದಾನ ತರಬಹುದು, ಯಾವ ಅಭಿವೃದ್ಧಿ ಕೆಲಸ ಮಾಡಬಹುದೆಂದು ಯೋಚಿಸಿ ಜನಪರ ಯೋಜನೆಯ ನಡೆ ಇಡುತ್ತಿದ್ದಾರೆ. ತಂದೆಯ ರಾಜಕೀಯ ಚಾಣಕ್ಷತನ, ತಾಯಿ ನೀಡಿದ ಸಂಸ್ಕಾರದಿಂದಾಗಿ ಅವರು ಉತ್ತೇಜಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಕೆ. ಜಗದೀಶ್, ಸಿ.ಎಚ್. ಮಾಲತೇಶ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್ ಡಾ.ಸತೀಶ್ ಕುಮಾರ್ ಶೆಟ್ಟಿ, ಗುರುಮೂರ್ತಿ, ಪದ್ಮನಾಭ ಭಟ್, ಶಾಂತಾ ಸುರೇಂದ್ರ, ಸುರೇಖಾ ಮುರಳೀಧರ್, ಟಿ.ಡಿ. ಮೇಘರಾಜ್ ಮೊದಲಾದವರು ಇದ್ದರು.ಇನ್ನಷ್ಟು ಅಭಿವೃದ್ಧಿಗೆ ಶಕ್ತಿ ಕೊಡಿ: ಬಿಎಸ್‌ವೈ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿದೆ ಎಂದರೆ ಅದರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪಾತ್ರವೂ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.ಅವರು ಬಿಜೆಪಿ ಗ್ರಾಮಾಂತರ ಘಟಕದಿಂದ ನಗರದ ಬಂಜಾರ ಕನ್ವೆನ್‌ಶನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಘವೇಂದ್ರ ಅವರು ಹತ್ತಾರು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಜಿಲ್ಲೆಯ ಜನತೆ ಶಕ್ತಿ ನೀಡಬೇಕು ಎಂದರು. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲ ಸಮಾಜದವರಿಗೂ ಸುಸಜ್ಜಿತವಾದ ಸಮುದಾಯ ಭವನಗಳನ್ನು ಮಾಡಿ ಕೊಡಲಾಗಿದೆ. ನಗರದಿಂದ ಬೆಂಗಳೂರಿಗೆ ಹಾರುತ್ತಿದ್ದ ವಿಮಾನ ನಿಂತು ಹೋಗಿದ್ದವು. ಕೆಲವೇ ದಿನಗಳಲ್ಲಿ ಅವುಗಳ ಹಾರಾಟ ಆರಂಭವಾಗಲಿದೆ ಎಂದರು.
ಇಲ್ಲಿ ಹಿರಿಯ ಕಾರ್ಯಕರ್ತರರಿಗೆ ಸನ್ಮಾನ ಮಾಡಿದ್ದು, ನಿಮಗೆ ವಯಸ್ಸಾಗಿದೆ. ನೀವು ಮನೆಯಲ್ಲಿ ಇರಿ ಎಂದಲ್ಲ. 18 ವರ್ಷದ ಹುಡುಗರಂತೆ ಮತ್ತಷ್ಟು ಕೆಲಸ ಮಾಡಿಯೆಂದು. ಹೀಗಾಗಿ ಕ್ಷೇತ್ರದಲ್ಲಿ ಓಡಾಟ ಮಾಡಿ ಸಂಘಟನೆ ಮಾಡಬೇಕು ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾರ್ಯಕರ್ತರು, ಮತದಾರರ ಹಾರೈಕೆ ಮುಂದೆ ನಾನೇನು ಅಲ್ಲ. ನಾನು ಮಾಜಿ ಸಿಎಂ ಮಗ, ಸಂಸದ ಎಂಬುದು ತೃಣ ಸಮಾನ. ನೀವು ಹಾಕಿರುವ ಫ್ಲೆಕ್ಸ್‌ಗಳು, ಹಾರ, ತುರಾಯಿ, ತೋರುತ್ತಿರುವ ಅಭಿಮಾನ ಅತೀ ದೊಡ್ಡದು. ನಿಮ್ಮ ಹೋರಾಟದ ಫಲವಾಗಿ ನಾನು ಸಂಸದನಾಗಿದ್ದೇನೆ. ನಿಮ್ಮ ಹಾರೈಕೆ ಇದ್ದರೆ ಇನ್ನಷ್ಟು ಸೇವೆ ಮಾಡುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಸುರೇಶ್, ಮಲ್ಲೇಶ್, ನಾಗರಾಜ್ ತಮ್ಮಡಿಹಳ್ಳಿ, ವಿರೂಪಾಕ್ಷಪ್ಪ, ಶ್ರೀನಿವಾಸ್, ರವಿಕುಮಾರ್, ಷಣ್ಮುಖಪ್ಪ, ಅಜೇಯ, ಅರುಣ್, ಮಂಜುನಾಥ್ ಮತ್ತಿತರರು ಇದ್ದರು.