ಬ್ಯಾಡಗಿ: ಗ್ರಾಮೀಣ ಪ್ರದೇಶದ ಶೈಕ್ಷಣಿಕ ವ್ಯವಸ್ಥೆ ಸಮುದ್ರದ ಮಧ್ಯದಲ್ಲಿ ಸಿಲುಕಿರುವ ಮುಳುಗುತ್ತಿರುವ ಹಡಗಿನಂತಾಗಿದೆ. ಅದನ್ನು ಸಂರಕ್ಷಿಸಲು ಮತ್ತೆ ಒಂದಿಷ್ಟು ಹಡುಗುಗಳನ್ನೇ ಅಲ್ಲಿಗೆ ಕಳಿಸಬೇಕಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯದ ಉನ್ನತ ಖಾಸಗಿ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ಭೌತಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಚಿಂತನೆ ನಡೆಸಬೇಕಾಗಿದೆ ಎಂದು ಡಾ. ಬಸವರಾಜ ವೀರಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಭೌಗೋಳಿಕವಾಗಿ ನಗರ ಮತ್ತು ಹಳ್ಳಿ ಎಂದು ಬೇರ್ಪಡಿಸುತ್ತೇವೆ, ಕಲಿಕಾ ಸಾರ್ಮರ್ಥ್ಯದಲ್ಲಿಯೂ ದೊಡ್ಡ ಪ್ರಮಾಣದ ವ್ಯತ್ಯಾಸಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿನ ಮಕ್ಕಳಿಗೆ ಕುಟುಂಬದಲ್ಲಿನ ಒಂದಿಷ್ಟು ಜವಾಬ್ದಾರಿಗಳಿದ್ದು ಅವುಗಳನ್ನು ಪೂರ್ಣಗೊಳಿಸಿ ಶೈಕ್ಷಣಿಕ ಸಿದ್ಧತೆ ಮಾಡಿಕೊಳ್ಳುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಎರಡು ಪಟ್ಟು ಶ್ರಮವನ್ನು ಹಾಕಬೇಕಾತ್ತದೆ ಎಂದರು.
ವಿಭಿನ್ನ ತರಬೇತಿ ಅಗತ್ಯವಿದೆ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಿಕ್ಷಕರು ಕೇವಲ ಶಿಕ್ಷಕರಾಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ ಸಮುದಾಯದ ಆಧಾರ ಸ್ತಂಭಗಳಾಗಿದ್ದು ಗ್ರಾಮದಲ್ಲಿ ಉತ್ತಮ ಮಾರ್ಗದರ್ಶಕರಾಗಿ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರಬೇಕಾಗುತ್ತದೆ. ಬಡತನ ಮತ್ತು ಭೌಗೋಳಿಕ ಪ್ರತ್ಯೇಕತೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸಲು ಶಿಕ್ಷಕರಿಗೆ ವಿಶೇಷ ಮತ್ತು ವಿಭಿನ್ನ ತರಬೇತಿ ಅಗತ್ಯವಿದೆ. ಈ ಕುರಿತು ಸರ್ಕಾರಗಳು ದೀರ್ಘವಾದ ಚಿಂತನೆಗಳನ್ನು ಮಾಡಬೇಕಾಗಿದೆ ಎಂದರು.ಜ್ಞಾನದ ಬಲವುಳ್ಳವರ ಕಾಲ: ಯುವ ಉದ್ಯಮಿ ಉಮೇಶ ಕರಿಗಾರ ಮಾತನಾಡಿ, ಸಮಾಜದ ಬಡ ಮಕ್ಕಳು ಅಧ್ಯಯನ ಸರ್ಕಾರಿ ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಗ್ರಾಮೀಣ ಭಾಗದ ಮಕ್ಕಳು ಜಾಗತಿಕವಾಗಿ ಸಾಧನೆ ಮಾಡಲು ಸಾಧ್ಯವಿದೆ, ಸರ್ಕಾರಿ ಶಾಲೆಗಳ ಮಕ್ಕಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು, ಸರಕಾರಿ ಶಾಲೆಗಳು ಸಮುದಾಯದ ಬಹುದೊಡ್ಡ ಆಸ್ತಿ. ದೇಶಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ಸರ್ಕಾರಿ ಶಾಲೆಗಳು ಬಹುದೊಡ್ಡ ಕೊಡುಗೆ ನೀಡಿವೆ. ಹಿಂದೆ ತೋಳ್ಬಲ, ಹಣಬಲ ಇದ್ದವರು ಆಳ್ವಿಕೆ ಮಾಡುತ್ತಿದ್ದರು. ಇದೀಗ ಜ್ಞಾನದ ಬಲವುಳ್ಳವರು ಆಳುವಂತಹ ಕಾಲವಾಗಿದ್ದು, ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಗಮನವಿಟ್ಟು ಅಧ್ಯಯನ ಮುಂದುವರೆಸಬೇಕು ಎಂದರು.
ಪ್ರಶಾಂತ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರುತಿ ಲಮಾಣಿ, ಸದಸ್ಯರಾದ ಮಲ್ಲಿಕಾರ್ಜುನಗೌಡ ಪಾಟೀಲ, ಕಲವೀರಪ್ಪ ಹುಣಸಿಕಟ್ಟಿ, ಕರಬಸಪ್ಪ ಆನ್ವೇರಿ, ಪ್ರಕಾಶ ಲಮಾಣಿ, ಫಕ್ಕೀರಪ್ಪ ಹೊಂಬರಡಿ, ಯಲ್ಲಪ್ಪ ರ್ಯಾವಣ್ಣನವರ, ಟೋಪಣ್ಣ ಲಮಾಣಿ, ಬಸವರಾಜ ಲಮಾಣಿ, ಮಂಗಳಾ ಶಿಗ್ಗಾವಿ, ನೇತ್ರಾವತಿ ಯತ್ನಳ್ಳಿ, ಶಿಲ್ಪಾ ಆನವಟ್ಟಿ, ಶೋಭಾ ಮಾಳಗಿ, ಈರಮ್ಮ ಮನ್ನಂಗಿ, ಶಾಂತಮ್ಮ ಲಮಾಣಿ, ಮರಿಯಪ್ಪ ಮಾಳಗಿ, ಪ್ರಮುಖರಾದ ಶಿವಾನಂದ ಹಟ್ಟಿ, ಚಂದ್ರಶೇಖರ ತಾವರಗೊಪ್ಪ, ಶಿಕ್ಷಕರಾದ ಗಣೇಶ ಮಾಗಳ, ವಿ.ಡಿ. ಅಕ್ಕೂರ, ಚಂದ್ರಶೇಖರ ಹೊನ್ನಪ್ಪನವರ, ಎನ್.ಬಿ. ಅಬಲೂರು, ಟಿ.ಎಸ್. ಚೈತ್ರರಾವ್, ಡಿ.ಜಿ. ಕಮದೋಡ, ಟಿ. ಸುನಿತಾ, ಹೊನ್ನಪ್ಪ ತಳವಾರ, ಕೆ.ಎಸ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಪ್ಪ ಕರೇಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.