ಮನದ ಮಾಲಿನ್ಯದ ವಿರುದ್ಧ ಯುದ್ಧ ಮಾಡಬೇಕಿದೆ: ಚಂದ್ರಕಾಂತ ವಡ್ಡು

KannadaprabhaNewsNetwork |  
Published : Jun 10, 2025, 07:53 AM ISTUpdated : Jun 10, 2025, 07:54 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವಕ್ಕೆ ಹಿರಿಯ ಲೇಖಕ ಚಂದ್ರಕಾಂತ ವಡ್ಡು ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಮಾಲಿನ್ಯ ಎಂಬುದು ಕೇವಲ ಪ್ರಕೃತಿಯನ್ನಾವರಿಸಿಕೊಂಡಿರುವ ಸಂಗತಿಯಲ್ಲ.

ಎರಡು ದಿನಗಳ 9ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಬಳ್ಳಾರಿ

ಮಾಲಿನ್ಯ ಎಂಬುದು ಕೇವಲ ಪ್ರಕೃತಿಯನ್ನಾವರಿಸಿಕೊಂಡಿರುವ ಸಂಗತಿಯಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸ್ನೇಹ, ವೃತ್ತಿ ಹೀಗೆ ಬದುಕಿನ ಬಹುತೇಕ ಮಲಿನಗೊಂಡ ಸಂದರ್ಭದಲ್ಲಿ ನಾವಿದ್ದೇವೆ ಎಂದು ಹಿರಿಯ ಲೇಖಕ ಚಂದ್ರಕಾಂತ ವಡ್ಡು ಹೇಳಿದರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 9ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಪರಿಸರ ಮಾಲಿನ್ಯದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ. ಆದರೆ ಮಾಲಿನ್ಯ ಎಂಬುದು ಕೇವಲ ಪ್ರಕೃತಿಯನ್ನಾವರಿಸಿಕೊಂಡಿರುವ ಸಂಗತಿಯಾಗಿ ಉಳಿದಿಲ್ಲ. ಈ ಎಲ್ಲಾ ಪರಿಸರ ನಾಶದ ಮೂಲವಿರುವುದು ನಾಗರಿಕ ಮನುಷ್ಯನ ಮನಸ್ಸಿನಲ್ಲಿ. ಸ್ವಾರ್ಥ, ಲೋಭ, ಲಾಲಸೆ, ನಿಷ್ಕರುಣೆ, ತೋರಿಕೆ, ಸಮಯ ಸಾಧಕತನ ತುಂಬಿಕೊಂಡಿರುವ ಮನಸ್ಸುಗಳನ್ನು ನಿಭಾಯಿಸುವ, ನಿರ್ಮಲಗೊಳಿಸುವ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದರು.

ಮಾಲಿನ್ಯದ ವಿರುದ್ಧವಷ್ಟೇ ಅಲ್ಲ ಜೊತೆ ಜೊತೆಯಲ್ಲಿ ಮನದ ಮಾಲಿನ್ಯದ ವಿರುದ್ಧ ಯುದ್ಧ ಮಾಡಬೇಕಿದೆ. ನಮ್ಮ ಪ್ರಚಲಿತ ರಾಜಕೀಯ, ಸಂಸ್ಕೃತಿ, ಸಮುದಾಯಗಳಿಗೆ ವೈಚಾರಿಕ ನೆಲೆಯಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಸಮಾಜದಲ್ಲಿ ಮಲಿನಗೊಂಡ ಪರಿಸರವನ್ನು ಶುಚಿಗೊಳಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಮನದ ಮಾಲಿನ್ಯ ತೊಲಗಿಸುವ ಕೆಲಸ ವ್ಯಕ್ತಿಗತ ನೆಲೆಯಲ್ಲೂ ಆಗಬೇಕಿದೆ. ಇದು ಕಾರ್ಯಗತವಾದರೆ ಕೇವಲ ಪರಿಸರ ಮಾಲಿನ್ಯವಷ್ಟೇ ಅಲ್ಲ ಎಲ್ಲಾ ಬಗೆಯ ಮಾಲಿನ್ಯಗಳನ್ನು ತೊಲಗಿಸಬಹುದು, ನಿರ್ಮೂಲನೆಗೊಳಿಸಬಹುದು ಎಂದು ತಿಳಿಸಿದರು.

ಆವಿಷ್ಕಾರ ಎಂಬುದು ತುಂಬಾ ಅರ್ಥಪೂರ್ಣವಾದ ಪದ. ಆದಿಮಾನವನಿಂದ ಆಧುನಿಕ ಮಾನವನವರೆಗೆ ಬೆಳವಣಿಗೆಯ ಪ್ರತಿಯೊಂದು ಹೆಜ್ಜೆಯನ್ನು ಪ್ರಭಾವಿಸಿರುವ ಸಂಗತಿ. ವಿಕಾಸದ ಹಾದಿಯನ್ನು ತೆರೆದಿಟ್ಟದ್ದು ಆವಿಷ್ಕಾರ. ಇಂತಹ ಆವಿಷ್ಕಾರದ ಹೆಸರಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಈ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಜೊತೆಗೆ ಈ ಜಿಲ್ಲೆಯಲ್ಲಿ ಪರಿಸರ ಉಳಿಸುವ ನೆಲೆಯಲ್ಲಿ ಗಂಭೀರವಾದ ಚರ್ಚೆ ನಡೆಯಬೇಕಿದೆ. ವಾಯುಮಾಲಿನ್ಯದಿಂದ ಬಳ್ಳಾರಿ ನಲುಗುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವೂ ಇದೆ ಎಂದು ವಡ್ಡು ತಿಳಿಸಿದರು.

ಸಾಂಸ್ಕೃತಿಕ ಜನೋತ್ಸವಕ್ಕೆ ಅಂಗವಾಗಿ ಆಯೋಜಿಸಲಾಗಿದ್ದ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು, ಇಂದಿನ ವೇಗದ ಜೀವನದಲ್ಲಿ ಕಲೆಗೆ ಪ್ರಾಮುಖ್ಯತೆ ಕೊಡುವುದು ಕಡಿಮೆಯಾಗುತ್ತಿದೆ. ಕಲೆಗಳು ಕಾಣೆಯಾಗುತ್ತಿರುವ ಈ ದಿನಗಳಲ್ಲಿ ನಮ್ಮ ಜೀವನಕ್ಕೆ ದಾರಿದೀಪವಾಗುವ ಸೂಕ್ತಿಗಳನ್ನು ಪ್ರದರ್ಶನ ಮಾಡುವ ಈ ಕಾರ್ಯಕ್ರಮಗಳು ಅದ್ಭುತ. ಈ ರೀತಿಯ ಕಾರ್ಯಕ್ರಮ ನಾನು ನನ್ನ ಜೀವನದಲ್ಲಿ ಮೊದಲನೇ ಬಾರಿ ನೋಡುತ್ತಿರುವುದು ಎಂದು ಹೇಳಿದರು.

ರಂಗ ನಿರ್ದೇಶಕ ಭಾನುಪ್ರಕಾಶ್ ಕಡಗತ್ತೂರು ಆಶಯ ನುಡಿಗಳನ್ನಾಡಿದರು. ಈಶ್ವರಿ ಕೆ.ಎಂ. ಪ್ರಾಸ್ತಾವಿಕ ಮಾತನಾಡಿದರು. ಡಾ. ಪ್ರಮೋದ್ ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಕಾರ್ಯಕ್ರಮ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರಿಂದ ಕನ್ನಡಗೀತೆಗಳ ಗಾಯನ, ಇಂದ್ರಾಣಿ ನಾಟ್ಯಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ವಿಜಯನಗರದ ಆವಿಷ್ಕಾರ ವೇದಿಕೆಯಿಂದ ಪ್ರಗತಿಪರ ಗೀತೆಗಳ ಗಾಯನ, ಸುಜಾತ ಕಲಾ ಟ್ರಸ್ಟ್ ನಿಂದ ನೃತ್ಯ ರೂಪಕ, ಡಾ. ರಾಮ್ ಕಿರಣ್ ಅವರಿಂದ ವಾದ್ಯ ಸಂಗೀತ ಜರುಗಿದವು. ಕೊನೆಯಲ್ಲಿ ಭಾನುಪ್ರಕಾಶ್ ಕಡಗತ್ತೂರು ನಿರ್ದೇಶನದಲ್ಲಿ "ಕೊನೆ ಎಲೆ'''''''''''''''' ನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ