ಪರಿಶಿಷ್ಟರಿಗೆ ಮೀಸಲಾತಿ, ಹಣ ಕೊಟ್ಟಿದ್ದೇ ನಾವು : ಸಿದ್ದರಾಮಯ್ಯ

KannadaprabhaNewsNetwork |  
Published : Feb 10, 2026, 02:15 AM ISTUpdated : Feb 10, 2026, 11:33 AM IST
Siddaramaiah

ಸಾರಾಂಶ

‘ರಾಜ್ಯದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿವಿಧ ಮೀಸಲಾತಿಗಳನ್ನು ಕಲ್ಪಿಸಿದವರು ಹಾಗೂ ಅವರಿಗೆ ಅತಿ ಹೆಚ್ಚು ಅನುದಾನಗಳನ್ನು ಕೊಟ್ಟವರೇ ನಾವು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

  ಹರಿಹರ :  ‘ರಾಜ್ಯದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿವಿಧ ಮೀಸಲಾತಿಗಳನ್ನು ಕಲ್ಪಿಸಿದವರು ಹಾಗೂ ಅವರಿಗೆ ಅತಿ ಹೆಚ್ಚು ಅನುದಾನಗಳನ್ನು ಕೊಟ್ಟವರೇ ನಾವು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಜಾತ್ರೆ-2026ರ ಅಂಗವಾಗಿ ನಡೆದ ಜನಜಾಗೃತಿ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಮಾಜಿ ಸಚಿವ ಆಂಜನೇಯ ಇದ್ದಾಗ, 2013ರ ಬೆಳಗಾವಿ ಅಧಿವೇಶನದಲ್ಲಿ ಆರೇಳು ಸಾವಿರ ಕೋಟಿ ರು. ಅನುದಾನ ನೀಡಿದ್ದೇವೆ. ಇಂದು ಸಮಾಜದ ಜನಸಂಖ್ಯೆಗೆ ಅನುಗುಣವಾಗಿ 42,018 ಕೋಟಿ ರು.ನೀಡುತ್ತಿರುವುದು ನಾವು. ಪರಿಶಿಷ್ಟರಿಗಾಗಿ ಮೀಸಲಾತಿ ಮತ್ತು ಬಡ್ತಿ ಕಾಯ್ದೆ ತಂದವರು ನಾವು. ಕಳೆದ 3 ವರ್ಷಗಳಲ್ಲಿ 1 ಲಕ್ಷ 17 ಸಾವಿರ ಕೋಟಿ ಅನುದಾನವನ್ನು ಪರಿಶಿಷ್ಟರಿಗೆ ಕೊಟ್ಟವರು ನಾವು. 4 ವರ್ಷ ಆಡಳಿತ ಮಾಡಿದ ಬಿಜೆಪಿಯವರು ಪರಿಶಿಷ್ಟರ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಆದರೂ, ತಾವೇ ಎಲ್ಲವನ್ನೂ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾ, ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ

ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಏರಿಕೆ ಮಾಡಿರುವುದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಶೀಘ್ರವೇ ದೆಹಲಿಗೆ ತೆರಳಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಶೇ. 24ಕ್ಕೆ ಏರಿಕೆ ಮಾಡಿರುವುದರ ಪರವಾಗಿರುವ ಸಿಎಂ ನಾನು. ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದಿದ್ದರೆ ರಾಜ್ಯ ಸರ್ಕಾರದ ಪ್ರಯತ್ನ ವ್ಯರ್ಥವಾಗುತ್ತದೆ. ಹೀಗಾಗಿ, ರಾಜ್ಯದ ಸಂಸದರು ಕೂಡ ಈ ವಿಷಯವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಬ್ರಹ್ಮ ಹಣೆಬರಹ ಬರೆಯುವ ಹಾಗಿದ್ರೆ ನಾನು ಶಾಸಕ, ಸಿಎಂ ಆಗ್ತಿರಲಿಲ್ಲ: ಸಿದ್ದು

ಅಂದು ಹಾಗೂ ಇಂದಿಗೂ ಶೂದ್ರರಿಗೆ ಮೌಢ್ಯ, ಕಂದಾಚಾರ, ಮೂಢನಂಬಿಕೆಗಳನ್ನು ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಹಿಂದಿನ ಜನ್ಮದ ಪಾಪ ಇದೆ ಎಂದು ಬಿಂಬಿಸುವ ಕಾರ್ಯಗಳು ನಡೆಯುತ್ತಿವೆ. ಆದರೆ, ಹಿಂದಿನ ಜನ್ಮವೇ ಇಲ್ಲ ಎಂದಾಗ ಹಿಂದಿನ ಜನ್ಮದ ಪಾಪ ಹೇಗೆ ಪ್ರಸ್ತುತ ಜನ್ಮಕ್ಕೆ ಬರಲು ಸಾಧ್ಯ. ಬ್ರಹ್ಮ ಹಣೆಬರಹ ಬರೆಯುವುದಾಗಿದ್ದರೆ, ನಾನು ಮುಖ್ಯಮಂತ್ರಿ ಆಗುವುದಿರಲಿ ಶಾಸಕ ಅಥವಾ ವಕೀಲನಾಗಲೂ ಸಾಧ್ಯವಿರುತ್ತಿರಲಿಲ್ಲ ಎಂದು ಅವರು ಹೇಳಿದರು. 63 ಅಡಿ ಎತ್ತರದ ರಿಮೋಟ್ ನಿಯಂತ್ರಿತ ರಥ:

ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಜರುಗಿದ ಭವ್ಯ ರಥೋತ್ಸವ ಬೃಹತ್ ಜನಸಾಗರಕ್ಕೆ ಸಾಕ್ಷಿಯಾಯಿತು. ಡಾ.ವಾಲ್ಮೀಕಿ ಪ್ರಸನ್ನಾನಂದ ಶ್ರೀಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವದಲ್ಲಿ ‘ಜೈ ವಾಲ್ಮೀಕಿ’ ಎಂಬ ಭಕ್ತರ ಘೋಷಣೆಗಳು ಮುಗಿಲು ಮುಟ್ಟಿದವು. 63 ಅಡಿ ಎತ್ತರದ ರಿಮೋಟ್ ನಿಯಂತ್ರಿತ ರಥವನ್ನು ಎಳೆಯಲಾಯಿತು. ಇದಕ್ಕೂ ಮೊದಲು ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದಿಂದ ರೈತರಿಗೆ ಅನ್ಯಾಯ:

ಭಾರತ-ಅಮೆರಿಕ ಮಧ್ಯೆ ಆಗಿರುವ ವಾಣಿಜ್ಯ ಒಪ್ಪಂದದಿಂದ ನಮ್ಮ ದೇಶದ ರೈತರಿಗೆ ಅನ್ಯಾಯವಾಗುತ್ತದೆ. ಈ ಬಗ್ಗೆ ನಾನೂ ಟ್ವೀಟ್ ಮಾಡಿದ್ದೇನೆ. ಪ್ರಧಾನಿ ಮೋದಿಯವರು ಅಮೆರಿಕದ ಒತ್ತಡಕ್ಕೆ ಮಣಿದಿದ್ದಾರೆ ಎಂದು ಅವರು ಆರೋಪಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಸಮುದಾಯದ ಯಾರನ್ನಾದರೂ ನಾವು ಸಂಪುಟದಿಂದ ತೆಗೆದು ಹಾಕಿದ್ದೀವಾ?. ಕಾರಣಾಂತರದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು. ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಇಲ್ಲಿ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಯ ವೇಳೆ ವಾಲ್ಮೀಕಿ ನಾಯಕ ಸಮುದಾಯದವರನ್ನು ಮತ್ತೆ ಸಚಿವರಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.ಕೋಟ್‌:

ಎಸ್ಸೆಸ್ಸೆಂ ರಾಜೀನಾಮೆ ಸತ್ಯಕ್ಕೆ ದೂರವಾದ ಸಂಗತಿ:

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನನ್ನ ಬಳಿ ಅವರು ಬಂದೇ ಇಲ್ಲ. ಹೀಗಾಗಿ, ರಾಜೀನಾಮೆ ಅನ್ನೋದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ.

- ಸಿದ್ದರಾಮಯ್ಯ, ಮುಖ್ಯಮಂತ್ರಿ.ಸಿಎಂ ಎದುರೇ ‘ಸತೀಶ್‌ ಮುಂದಿನ ಸಿಎಂ’ ಕೂಗು:

ದಾವಣಗೆರೆ: ವಾಲ್ಮೀಕಿ ಜನ ಜಾಗೃತಿ ಜಾತ್ರಾ ಮಹೋತ್ಸವ ವೇಳೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಬಳಿಕ ವೇದಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿದರು. ಈ ವೇಳೆ ಕಾರ್ಯಕ್ರಮ ನಿರೂಪಿಸುತ್ತಿದ್ದ ನಿರೂಪಕರು, ಜಾರಕಿಹೊಳಿಗೆ ಸ್ವಾಗತ ಕೋರುತ್ತಾ, ‘ಭವಿಷ್ಯದ ನಾಯಕ, ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿ’ ಎಂದು ಸಂಬೋಧಿಸಿದರು. ಈ ವೇಳೆ ಶಿಳ್ಳೆ, ಚಪ್ಪಾಳೆ ಹಾಕಿ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಬಳಿಕ, ಸಮಾರಂಭದಲ್ಲಿ ಸತೀಶ್‌ ಜಾರಕಿಹೊಳಿ ಮಾತನಾಡಿದರು. ಅವರ ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಅಭಿಮಾನಿಗಳು ‘ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ’ ಎಂದು ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ