- ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಸ್ತುತ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ದುರದೃಷ್ಟಕರ. ಪ್ರತಿ ಮನೆಯ ಹಿರಿಯ ಹಾಗೂ ಅಮೂಲ್ಯ ಜೀವಗಳಿಗೆ ಇಳಿವಯಸ್ಸಿನಲ್ಲಿ ನಾವು ರಕ್ಷಕರಾಗಬೇಕು ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ, ವಾರ್ತಾ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸೇವಾ ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಗರದ ಶೆಟ್ಟರ ಬೀದಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರು ಇರುವ ಮನೆ ತುಂಬಿದ ಕೊಡವಿದ್ದಂತೆ. ಅವರ ಮಾರ್ಗದರ್ಶನ, ಸಲಹೆಗಳು ಕಿರಿಯರಿಗೆ ಸದಾ ಬೇಕಾಗುತ್ತವೆ. ದಾರಿ ತಪ್ಪದಂತೆ ನಮ್ಮನ್ನು ತಿದ್ದಿ, ತೀಡಿ ಸರಿ ದಾರಿಯಲ್ಲಿ ನಡೆಯುವಂತೆ ಹಿರಿಯರು ಮಾಡುತ್ತಾರೆ. ಆದರೆ, ಅವರ ಮಾತುಗಳನ್ನು ನಕಾರಾತ್ಮಕವಾಗಿ ತೆಗೆದುಕೊಂಡು ನಿರ್ಲಕ್ಷ್ಯ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದ ಅವರು, ಹಿರಿಯರ ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್ಸು ಪಡೆದುಕೊಳ್ಳುವ ಅವಕಾಶವನ್ನು ನಮ್ಮ ಸರ್ಕಾರ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಈ ದಿನ ಹಿರಿಯರ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಮಾರ್ಗದರ್ಶನ ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ದಿನ ಸುಂದರಗೊಳಿಸಲು, ಪೋಷಕರು, ಅಜ್ಜ-ಅಜ್ಜಿ ಮತ್ತು ಮನೆಯಲ್ಲಿ ವಾಸಿಸುವ ಇತರ ಹಿರಿಯರೊಂದಿಗೆ ಸಮಯ ಕಳೆಯುವುದು ಅಗತ್ಯ. ಅವರಿಗೆ ಇದಕ್ಕಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಬಹಳಷ್ಟು ಜನರು ಅವರನ್ನು ಅನಾಥಾಶ್ರಮ, ಹಿರಿಯ ಮನೆಗಳಿಗೆ ಬಿಟ್ಟು ಬರುವ ಮೂಲಕ ಜೀವಂತ ಇರುವಾಗಲೇ ಅವರನ್ನು ಒಂಟಿಯಾಗಿ ಮಾಡಿ ನೋವು ಕೊಡುತ್ತಿದ್ದಾರೆ. ಹೀಗೆ ಮಾಡುವವರನ್ನು ಮುಂದೆ ಅವರ ಮಕ್ಕಳು ಅನಾಥರಾಗಿಸಿ ದೂರ ಮಾಡಿದರೆ ಪರಿಸ್ಥಿತಿ ಏನು ಎಂಬುದನ್ನು ಅರ್ಥೈಸಿಕೊಂಡು ಬದಲಾಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೆಶಕ ಶ್ರೀನಿವಾಸ ವೈ. ಆಲದಾರ್ತಿ, ನಿರೂಪಣಾಧಿ ಕಾರಿ ಡಿ.ಸಂತೋಷ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.4 ಕೆಸಿಕೆಎಂ 2ಚಿಕ್ಕಮಗಳೂರಿನ ಶೆಟ್ಟರ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ವ್ಯಕ್ತಿಗಳನ್ನು ಗೌರವಿಸಲಾಯಿತು.