ಶರಣರ ಆದರ್ಶದ ಬದುಕು ನಮ್ಮದಾಗಬೇಕು: ನಗರ್ಲೆ ಶಿವಕುಮಾರ

KannadaprabhaNewsNetwork |  
Published : Jul 30, 2025, 12:45 AM IST
38 | Kannada Prabha

ಸಾರಾಂಶ

15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲಕ್ಕೆ 101 ವಿರಕ್ತರು ಅಂದಿಗೆ ದೊರೆತ ವಚನಗಳನ್ನು ಪ್ರಕಟಪಡಿಸಿದರು. 16ನೇ ಶತಮಾನದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳ ಕಾಲದಲ್ಲಿ ವಚನ ಸಾಹಿತ್ಯದ ದ್ವಿತೀಯ ಘಟ್ಟ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕಾಯಕ ಮತ್ತು ದಾಸೋಹಕ್ಕೆ ಮಹತ್ವವನ್ನು ಕೊಟ್ಟ ಬಸವಾದಿ ಶರಣರು ನುಡಿದಂತೆ ನಡೆದು ತೋರಿಸಿದರು. ಶರಣರ ಆದರ್ಶದ ಬದುಕು ನಮ್ಮದಾಗಬೇಕು ಎಂದು ಸಾಹಿತಿ ನಗರ್ಲೆ ಶಿವಕುಮಾರ ತಿಳಿಸಿದರು.

ನಗರದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಏರ್ಪಡಿಸಿದ್ದ 327ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ಶರಣರ ವಿಚಾರಧಾರೆ ಕುರಿತು ಮಾತನಾಡಿದ ಅವರು, 12ನೇ ಶತಮಾನದ ಬಸವಾದಿ ಶರಣರನ್ನು ಕುರಿತು ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಷಡಕ್ಷರಕವಿ ಸೇರಿದಂತೆ ಮೊದಲಾದ ಕವಿಗಳು ಕಾವ್ಯವನ್ನು ರಚಿಸಿದ್ದಾರೆ. ಕಲ್ಯಾಣಕ್ರಾಂತಿಯ ನಂತರ ವಚನ ಸಾಹಿತ್ಯ ಬೆಳಕಿಗೆ ಬರಲಿಲ್ಲ ಎಂದರು.

15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲಕ್ಕೆ 101 ವಿರಕ್ತರು ಅಂದಿಗೆ ದೊರೆತ ವಚನಗಳನ್ನು ಪ್ರಕಟಪಡಿಸಿದರು. 16ನೇ ಶತಮಾನದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳ ಕಾಲದಲ್ಲಿ ವಚನ ಸಾಹಿತ್ಯದ ದ್ವಿತೀಯ ಘಟ್ಟ ಆರಂಭವಾಯಿತು. ಅದಾದ ನಂತರ 20ನೇ ಶತಮಾನದ ಆದಿಭಾಗದಲ್ಲಿ ಡಾ.ಫ.ಗು. ಹಳಕಟ್ಟಿಯವರು ಶಿವಾನುಭವ ಪತ್ರಿಕೆ ಮೂಲಕ ವಚನಗಳನ್ನು ಪ್ರಕಟಿಸಿದರು. 250 ಹೆಚ್ಚು ವಚನಕಾರರು 22000 ವಚನಗಳನ್ನು ರಚಿಸಿರುವುದನ್ನು ಹಾಗೂ ಇವೆಲ್ಲವುಗಳನ್ನು ಕನ್ನಡ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ ಎಂದರು.

ಕನ್ನಡ ಸಾಹಿತ್ಯಕ್ಕೆ ವಚನದ ಸಾಹಿತ್ಯದ ಕೊಡುಗೆ ಅಪಾರ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ವಚನ ಸಾಹಿತ್ಯದ ಬಳುವಳಿ ಎನ್ನಬಹುದು. ಮೋಳಿಗೆ ಮಾರಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ, ನಗೆಯ ಮಾರಿತಂದೆ, ಮೇದರಕೇತಯ್ಯ, ಮಡಿವಾಳ ಮಾಚಯ್ಯ ಹೀಗೆ ವಿವಿಧ ಶರಣರ ವಿಚಾರಗಳನ್ನು ತಿಳಿಸುತ್ತಾ, ಹಲವಾರು ವಚನಗಳನ್ನು ಅವರು ಉಲ್ಲೇಖಿಸಿದರು.

ನಿವೃತ್ತ ಪ್ರಾಧ್ಯಾಪಕ ಸಿ.ಬಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಚೂಡಾಮಣಿ ಮತ್ತು ನಟರಾಜು ವಚನ ಗಾಯನವನ್ನು ನಡೆಸಿಕೊಟ್ಟರು. ಎ.ಜಿ. ಭವಾನಿ ಹಾಗೂ ಎಂ. ಶಿವಪ್ರಸಾದ್‌ ಪ್ರಾಯೋಜಕತ್ವ ವಹಿಸಿದ್ದರು. ಎ.ಜಿ. ಭವಾನಿ ಸ್ವಾಗತಿಸಿದರು. ಎಂ.ಎ. ನೀಲಾಂಬಿಕಾ ವಂದಿಸಿದರು. ಪಲ್ಲವಿ ನಿರೂಪಿಸಿದರು.

ನಾಳೆ ಲಂಕೇಶ್‌ ಮಾಧ್ಯಮ ಪ್ರಶಸ್ತಿ ಪ್ರದಾನ

ಮೈಸೂರು: ಸಿರಿಗೇರಿ ಅನ್ನಪೂರ್ಣ ಪ್ರಕಾಶನವು ಜು.31 ರಂದು ಸಂಜೆ 5ಕ್ಕೆ ನಗರದ ಖಿಲ್ಲೆ ಮೊಹಲ್ಲಾದ ನಟರಾಜ ಸಭಾಭವನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ತುಮಕೂರು ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್‌. ನಾಗಣ್ಣ ಅವರಿಗೆ ಲಂಕೇಶ್‌ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಿದೆ. ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶಸ್ತಿ ಪ್ರದಾನ ಮಾಡುವರು. ಪಿ. ಲಂಕೇಶ್‌ ಕುರಿತು ನಟ ಪ್ರಕಾಶ್‌ ರಾಜ್‌ ಮಾತನಾಡುವರು. ನಿರ್ದೇಶಕಿ ಕವಿತಾ ಲಂಕೇಶ್‌, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್‌ ಉಪಸ್ಥಿತರಿರುವರು ಎಂದು ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''