ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಪ್ರತಿಯೊಬ್ಬರು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಓದಿ, ಅದನ್ನು ಅರ್ಥಮಾಡಿಕೊಂಡು, ಅದರಂತೆ ನಡೆಯಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕರೆ ನೀಡಿದರು.ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಹಾಗೂ ಸಂವಿಧಾನ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಬೇಡ್ಕರ್ ಪ್ರತಿಮೆ ಮಾಡಿ ನಮಿಸಿದರೆ ಸಾಲದು. ಬದಲಾಗಿ ಅಂಬೇಡ್ಕರ್ ಅವರ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ತಿಳಿವಳಿಕೆಯನ್ನು ಪಡೆಯಬೇಕು. ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಸಂವಿಧಾನ ಓದುವುದು. ಸಂವಿಧಾನ ಓದುವುದು ಎಂದರೆ ಅಂಬೇಡ್ಕರ್ ಅವರನ್ನು ಓದುವುದು ಎಂದರು. ಹಿಂದೂ, ಮುಸ್ಲಿಂ, ಕ್ರಿಸ್ತ ಧರ್ಮಗಳಿಗೆ ಧರ್ಮಕ್ಕೂ ಬೇರೆ, ಬೇರೆ ಹಬ್ಬಗಳಿವೆ. ಇಡೀ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಸಂವಿಧಾನ ದಿನ ಪ್ರಮುಖ ಹಬ್ಬವಾಗಿದೆ. ಸಂವಿಧಾನ ದಿನ ಸಂವಿಧಾನ ಕೊಟ್ಟಂತಹ ಮಹನೀಯರನ್ನು ಗೌರವಿಸಿ, ನಮಿಸಿ, ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.ಜಗತ್ತಿನ ಅತಿ ದೊಡ್ಡ ಸಂವಿಧಾನ ಒಪ್ಪಿ ಭಾರತ ಗಣರಾಜ್ಯವಾಗಿ 75 ವರ್ಷಗಳು ಸಂದಿದೆ. ದೇಶದ ಗಡಿ ಗುರುತಿಸಿದ್ದು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ ನೀಡಿದ್ದು ಸಂವಿಧಾನ ಜಾರಿಗೆ ಬಂದ ನಂತರ. ಪಾಳೇಗಾರ ಪದ್ದತಿ ರದ್ದುಪಡಿಸಿ ಪ್ರಜಾಪ್ರಭುತ್ವ ಸಂಸ್ಥೆ, ಸಂಸತ್ತು, ವಿಧಾನ ಸಭೆ, ಕಾರ್ಯಾಂಗ, ನ್ಯಾಯಾಂಗ ರಚಿಸಿದ್ದು ಸಂವಿಧಾನ ಜಾರಿಗೆ ಬಂದಮೇಲೆ. ಮಹಿಳೆಯರಿಗೆ ದಲಿತರಿಗೆ, ಅಲ್ಪಸಂಖ್ಯಾತರಿಗೆ ಗೌರವ ಸಿಗಲು ಸಂವಿಧಾನ ಕಾರಣ .ಪ್ರಸ್ತುತ ಕೆಲವರು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಅಪ್ರಸ್ತುತ ಎನ್ನುತ್ತಿದ್ದಾರೆ. ಸಂವಿಧಾನದಲ್ಲಿ ಸಹಿಷ್ಣುತೆಯಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ದೇಶದಲ್ಲಿ ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್, ಬೌದ್ಧ, ಸಿಖ್ಖರು ಒಟ್ಟಾಗಿ ಬಾಳಿದ್ದೇವೆ. ದೇಶವನ್ನು ಒಟ್ಟಾಗಿ ಕಟ್ಟಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ರಕ್ತ ಹರಿಸಿದ್ದೇವೆ. ಭಾವೈಕ್ಯತೆ, ಭಾತೃತ್ವ, ಸಹೋದರತ್ವ, ಸಮಾನತೆಯಿಂದ ಬದುಕಬೇಕೆಂಬುದು ಅಂಬೇಡ್ಕರ್ ಅವರ ಆಶಯ ಎಂದರು.
ಶಿವಮೊಗ್ಗ ಭದ್ರಾ ಕಾಡ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಶೃಂಗೇರಿ ಕ್ಷೇತ್ರದ ಹೆಬ್ಬಾಗಿಲಾಗಿದ್ದು ಎಲ್ಲರ ಸಹಕಾರ ದಿಂದ ಅಂಬೇಡ್ಕರ್ ಪ್ರತಿಮೆಯನ್ನು ಪವಿತ್ರದಿನವಾದ ಸಂವಿಧಾನದ ಸಮರ್ಪಣೆಯ ದಿನ ಅನಾವರಣಗೊಳಿಸಿರುವುದು ಅವಿಸ್ಮರಣಿಯವಾಗಿದೆ ಎಂದರು.ಜನಸಂಗ್ರಾಮ ವೇದಿಕೆಯ ಕೆ.ಎಲ್.ಅಶೋಕ್, ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ, ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ. ಉಪಾಧ್ಯಕ್ಷ ಎನ್.ಎಸ್.ನರೇಂದ್ರ, ತಹಶೀಲ್ದಾರ್ ಡಾ.ನೂರುಲ್ ಹುದಾ, ಇಒ ಎಚ್.ಡಿ.ನವೀನ್ ಕುಮಾರ್, ಬಿಇಒ ಶಬಾನಾ ಅಂಜುಮ್, ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.ಹಿರೇ ನಲ್ಲೂರು ಶ್ರೀನಿವಾಸ್ ಪ್ರಾರ್ಥಿಸಿದರು. ಕೆ.ಎಸ್. ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ಶ್ರೀನಿವಾಸ್ ತಂಡದವರು ನಾಡಗೀತೆ ಹಾಡಿದರು. ತಿಮ್ಮೇಶ್ ವಂದಿಸಿದರು. ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸನ್ಮಾನಿಸಲಾಯಿತು. ಮುತ್ತಿನಕೊಪ್ಪ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.