ಕನ್ನಡಪ್ರಭ ವಾರ್ತೆ ಹಾಸನ
ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಆಗಬೇಕೆಂದು ಎಷ್ಟೇ ಹೋರಾಟಗಳು ನಡೆದರೂ, ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳು ಆಗುತ್ತಿದ್ದರೂ, ಇಂಗ್ಲಿಷ್ ಮಾಧ್ಯಮದ ಪ್ರವಾಹದಲ್ಲಿ ದೇಶದ ಭಾಷೆಗಳು ಕೊಚ್ಚಿ ಹೋಗುತ್ತಿರುವುದನ್ನು ಕಂಡು ನಾವೆಲ್ಲ ಅಸಹಾಯಕರಾಗಿ ನೋಡುತ್ತಾ ನಿಲ್ಲುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತನ್ನ ಮಗುವನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಒಬ್ಬನೇ ಪೋಷಕ ಕೂಡ ಸಿಗಲಾರ. ಕನ್ನಡ ಮಾಧ್ಯಮದ ಪರವಾಗಿ ಹೋರಾಟ ಇರಬೇಕು. ಮಾತನಾಡುವವರನ್ನು ಕೂಡ ಅಪಹಾಸ್ಯ ಮಾಡುವ ಸ್ಥಿತಿ ಈಗಾಗಲೇ ನಿರ್ಮಾಣ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಮಾತ್ರವಲ್ಲದೆ, ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ, ಕಾನೂನು, ವಾಣಿಜ್ಯಶಾಸ್ತ್ರ ಹೀಗೆ ಬಹುತೇಕ ಎಲ್ಲ ಉನ್ನತ ವ್ಯಾಸಂಗ ವ್ಯವಸ್ಥೆ ಇಂಗ್ಲಿಷ್ ನಲ್ಲಿ ಇರುವುದರಿಂದ, ಸಹಜವಾಗಿ ಪೋಷಕರು ಭವಿಷ್ಯದಲ್ಲಿ ತಮ್ಮ ಮಕ್ಕಳು ಕಷ್ಟಕ್ಕೆ ಸಿಲುಕಬಾರದೆಂದು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುವ ನಿರ್ಧಾರಕ್ಕೆ ಬರುವುದು ತಪ್ಪೆಂದು ಹೇಳಲು ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಹೇಳುವುದು ಕೇವಲ ಭಾವನಾತ್ಮಕ ಸಂಗತಿ ಆಗುತ್ತದೆಯೇ ಹೊರತು ವಾಸ್ತವಕ್ಕೆ ಹತ್ತಿರ ಅನಿಸುವುದಿಲ್ಲ. ಹಾಗಾಗಿ ಕನ್ನಡ ಸೇರಿದಂತೆ ದೇಶದ ಭಾಷೆಗಳು ಉಳಿಯಬೇಕಿದ್ದರೆ, ಉನ್ನತ ಶಿಕ್ಷಣ ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ನಮ್ಮ ರಾಜ್ಯ ಸರ್ಕಾರ, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡದ ಸಾಹಿತಿಗಳು ಸಕಾರಾತ್ಮಕವಾಗಿ ಸ್ವೀಕರಿಸಲೇಬೇಕು. ಉನ್ನತ ಶಿಕ್ಷಣವನ್ನು ದೇಶದ ಭಾಷೆಗಳಲ್ಲಿ ನೀಡಲು ಸಾಧ್ಯ ಇಲ್ಲ ಎನ್ನುವುದಾದರೆ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಭಾಷಣ ಮಾಡುವುದು ಹಾಗೂ ಸಮ್ಮೇಳನಗಳಲ್ಲಿ ಠರಾವು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಶ್ವಪಥ ಬಳಗದ ಪಿ. ಪುರುಷೋತ್ತಮ್, ತಿರುಪತಿಹಳ್ಳಿ ಶಿವಶಂಕರಪ್ಪ, ಪರಮಶಿವಯ್ಯ ಇತರರು ಇದ್ದರು.