ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ರೈತ ಮುಖಂಡರ ಸಭೆಯಲ್ಲಿ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ನೀರನ್ನು ಕೃಷಿಗೆ ಮೀಸಲಿರಿಸುವಂತೆ ಆಗ್ರಹಪಡಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ೬ನೇ ಹಂತದಲ್ಲಿ ೬ ಟಿಎಂಸಿ ನೀರನ್ನು ಅಣೆಕಟ್ಟೆಯಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದರಿಂದ ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವಷ್ಟು ನೀರಿನಿಂದ ವಂಚಿತರಾಗಲಿದ್ದೇವೆ. ಇದು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಯೋಜನೆಯನ್ನು ಕೈಬಿಡುವುದು ಉತ್ತಮ ಎಂದರು.ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯನ್ನು ಕಟ್ಟಿದ್ದೇ ಮೊದಲು ಕೃಷಿಗೆ ನಂತರ ಕುಡಿಯುವ ನೀರಿಗೆ. ಆದರೆ, ಈಗ ಕುಡಿಯುವ ನೀರಿನ ಹೆಸರಿನಲ್ಲಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುತ್ತಿರುವುದು ಸರಿಯಲ್ಲ. ೧೮ ಲಕ್ಷ ಎಕರೆಗೆ ವಿಸ್ತರಿಸಬೇಕಿದ್ದ ಕೃಷಿ ವಿಸ್ತೀರ್ಣ. ೧೧ ಎಕರೆಗೆ ಕುಸಿದೆ. ಇನ್ನೂ ನೀರನ್ನು ಕೊಂಡೊಯ್ದರೆ ಕೃಷಿ ವಿಸ್ತೀರ್ಣ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತಪಡಿಸಿದರು.
ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್ ಮಾತನಾಡಿ, ಕುಡಿಯುವ ನೀರಿನ ಹೆಸರಿನಲ್ಲಿ ಕೆಆರ್‌ಎಸ್ ನೀರಿಗೆ ಕನ್ನ ಹಾಕುವುದು ಬೇಡ. ಇಡೀ ರಾಜ್ಯಕ್ಕೆ ಕೆಆರ್‌ಎಸ್‌ನಿಂದ ಕುಡಿಯುವ ನೀರು ಪೂರೈಸಲಾಗದು. ಕಾಲಕ್ಕೆ ತಕ್ಕಂತೆ ಪರ್ಯಾಯ ವ್ಯವಸ್ಥೆಗಳನ್ನು ಆಡಳಿತ ನಡೆಸುವವರು ಕಂಡುಕೊಳ್ಳಬೇಕು. ಎಲ್ಲದಕ್ಕೂ ಕೆಆರ್‌ಎಸ್ ಮೇಲೆ ಅವಲಂಬಿತರಾಗುವುದು ಸರಿಯಲ್ಲ ಎಂದು ಖಡಕ್ಕಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ.ಶಿವಕುಮಾರ್, ಕೆ.ಬೋರಯ್ಯ, ಪಾಂಡವಪುರ ತಾಲೂಕು ರೈತಸಂಘದ ಅಧ್ಯಕ್ಷ ಮಂಜುನಾಥ, ಶಂಭೂನಹಳ್ಳಿ ಕೃಷ್ಣ, ಎನ್.ಎಲ್.ಭರತ್‌ರಾಜ್, ಕಾರಸವಾಡಿ ಮಹದೇವು, ಮಾರಗೌಡನಹಳ್ಳಿ ನಿಂಗೇಗೌಡ, ಸೋಸಿ ಪ್ರಕಾಶ್, ಎಂ.ವಿ.ಕೃಷ್ಣ, ಸಿ.ಎಂ.ದ್ಯಾವಪ್ಪ ಸೇರಿದಂತೆ ಹಲವರು ಹಾಜರಿದ್ದರು.