ಕನ್ನಡಪ್ರಭ ವಾರ್ತೆ ಹರಿಹರ
ಪ್ರಾಣ ಹೋದರೂ ಸರಿ ಮದಕರಿ ನಾಯಕ ಹೆಸರಿನ ಮಹಾದ್ವಾರ ಮತ್ತು ವಾಲ್ಮೀಕಿ ಹೆಸರಿನ ವೃತ್ತ ತೆರವಿಗೆ ಅವಕಾಶ ಕೊಡುವುದಿಲ್ಲ ಎಂದು ಭಾನುವಳ್ಳಿ ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ವಾಲ್ಮೀಕಿ ಸಮಾಜದ ಮುಖಂಡ ಟಿ.ಪುಟ್ಟಪ್ಪ ಮಾತನಾಡಿ, ಕಳೆದ ೨೫ ವರ್ಷಗಳ ಹಿಂದೆ ಹೆಚ್. ಶಿವಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರ್ಕಾರದ ಅನುದಾನದಲ್ಲಿಯೇ ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತ ನಿರ್ಮಿಸಿ ಅಂದಿನ ವಾಲ್ಮೀಕಿ ಪೀಠದ ಗುರುಗಳಾಗಿದ ಲಿಂ.ಪುಣ್ಯಾನಂದಪುರಿ ಶ್ರೀಗಳ ಸಮ್ಮುಖದಲ್ಲಿ ಉದ್ಘಾಟಿಸಲಾಗಿತ್ತು.
ಗ್ರಾಮದ ಅಂದಿನ ಹಾಲುಮತ ಸಮಾಜದ ಮುಖಂಡರು ಆ ಎಲ್ಲಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು. ಆದರೆ ಈಗ ಗ್ರಾಮದಲ್ಲಿ ಬಹುಸಂಖ್ಯಾತರಾದ ಹಾಲುಮತ ಕುರುಬ ಸಮಾಜದವರು ಅಲ್ಪಸಂಖ್ಯಾತರಾಗಿರುವ ವಾಲ್ಮೀಕಿ ಸಮಾಜದವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.ವಾಲ್ಮೀಕಿ ಸಮಾಜರ ಮಹಾತ್ಮರ ಹೆಸರಿನ ಮಹಾದ್ವಾರ ಮತ್ತು ವೃತ್ತ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂದು ಹೇಳುವ ಹಾಲುಮತ ಸಮಾಜದವರು ಈಗಾಗಲೇ ಗ್ರಾಮ ದಲ್ಲಿ ಕನಕದಾಸರ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಿದ್ದಾರೆ. ವಿವಿಧ ರಸ್ತೆಗಳಿಗೆ ತಮ್ಮ ಸಮುದಾಯದ ಮಹಾತ್ಮರ ಹೆಸರುಗಳನ್ನು ಇಟ್ಟಿದ್ದಾರೆ ಅವುಗಳಿಗೆ ಕನಿಷ್ಟ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಒಂದು ವೇಳೆ ಅನುಮತಿ ಪಡೆಯದೆ ಸ್ಥಾಪಿಸಿರುವ ಪ್ರತಿಮೆ ಮತ್ತು ಹೆಸರುಗಳನ್ನು ತೆರವುಗೊಳಿಸುವುದಾದರೆ ಇತರೆ ಸಮಾಜದ ಮಹಾತ್ಮರ ಮೂರ್ತಿ ಮತ್ತು ಹೆಸರುಗಳನ್ನು ಮೊದಲು ತೆರವುಗೊಳಿಸಿ ನಂತರ ಈ ವಾಲ್ಮೀಕಿ ದ್ವಾರಕ್ಕೆ ಕೈ ಹಾಕಬೇಕು. ಅದನ್ನು ಬಿಟ್ಟು ಯಾರದೋ ಒತ್ತಡಕ್ಕೆ ಮಣಿದು ಸರ್ಕಾರಿ ಅಧಿಕಾರಿಗಳು ಮದಕರಿ ನಾಯಕ ಮಹಾ ದ್ವಾರ ಮತ್ತು ವಾಲ್ಮೀಕಿ ವೃತ್ತದ ಹೆಸರನ್ನು ತೆರವುಗೊಳಿಸಲು ಮುಂದಾದರೆ ನಮ್ಮ ಪ್ರಾಣ ಹೋದರೂ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪಾರ್ವತಮ್ಮ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಿದಾಗ ಹಾಲುಮತ ಸಮಾಜದ ಕೆಲವು ಮುಖಂಡರು, ಹುಡುಗರು ರಾತ್ರೋ ರಾತ್ರಿ ತಂದು ಇಟ್ಟಿದ್ದಾರೆ ಸ್ವತಂತ್ರ ಹೋರಾಟಗಾರರ ಮೂರ್ತಿಯನ್ನು ಸರ್ಕಾರಿ ನಿಯಮಾನುಸಾರ ಪ್ರತಿಷ್ಠಾಪಿಸಬೇಕು ಅಂದವರು ಈಗ ಮದಕರಿ ನಾಯಕನ ಹೆಸರಿನ ಲ್ಲಿರುವ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತದ ಹೆಸರನ್ನ ತೆರುಗೊಳಿಸಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದರು.
ಎರಡು ಸಮಾಜಗಳ ಪೀಠಗಳ ಶ್ರೀಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ನಾವು ನಮ್ಮ ವಾಲ್ಮೀಕಿ ಶ್ರೀಗಳ ಗಮನಕ್ಕೆ ತಂದಿದ್ದೇವೆ ಅವರು ಆ ಕಡೆಯಿಂದ ಸಮ್ಮತಿ ಬಂದರೆ ನೋಡೋಣ, ಶಾಂತಿಯುತ ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದರು.ಗೋಷ್ಠಿಯಲ್ಲಿ ಮುಖಂಡರಾದ ಎಸ್.ಪಿ. ಮೋಹನ್, ಎಂ.ಜಿ.ಕೊಟ್ರಪ್ಪ, ಆರ್.ಸಿ.ಪಾಟೀಲ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಆರ್ ರಂಗಪ್ಪ, ಜಿ.ಎಂ ಮಂಜಪ್ಪ, ಸಿದ್ದಪ್ಪ ದೊಡ್ಡಮನಿ, ಮಲ್ಲಪ್ಪ, ರಾಜು ಇತರರಿದ್ದರು.