ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೀರ್ ಸಾದಿಕ್‌ಗಳು ಯಾರು ಎಂಬ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೀರ್ ಸಾದಿಕ್‌ಗಳು ಯಾರು ಎಂಬ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಡ್ಡ ಮತದಾನವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಮೀರ್ ಸಾದಿಕ್‌ಗಳ ವಿರುದ್ಧ ಖಂಡಿತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುಮಾರು 8-10 ದಿನಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕರೆ ಮಾಡಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸೋಣ ಎಂದು ಹೇಳಿದರು. ನೀವಾದರೂ ಹಾಕಿ ಅಥವಾ ನಾವಾದರೂ ಅಭ್ಯರ್ಥಿಯನ್ನು ಹಾಕುತ್ತೇವೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಫೈಟ್ ಮಾಡೋಣ ಎಂದಿದ್ದರು. ಆಗ ನೀವೇ ಅಭ್ಯರ್ಥಿ ಹಾಕಿ, ಒಟ್ಟಾಗಿ ಸೆಣಸಾಟ ಮಾಡೋಣ ಎಂದು ತಿಳಿಸಿದ್ದೆ. ಎರಡೂ ಪಕ್ಷಗಳ ಉದ್ದೇಶ ಒಂದೇ ಆಗಿತ್ತು. ನಿನ್ನೆ ನಡೆದ ಮತದಾನದಲ್ಲಿ ಜೆಡಿಸ್‌ನಿಂದ ಆರೇಳು ಅಡ್ಡ ಮತದಾನ ಆಗಿದೆ. ಬಿಜೆಪಿಯಿಂದ ನಾಲ್ಕೈದು ಅಡ್ಡ ಮತದಾನ ಆಗಿದೆ. ಇದರಿಂದ ಎರಡೂ ಪಕ್ಷಗಳಿಗೆ ಬೇಸರವಾಗಿದೆ ಎಂದು ಹೇಳಿದರು.
ಎಲ್ಲದಕ್ಕೂ ಮಿತಿ ಇದೆ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಈಗ ಪರಿಷತ್ ಚುನಾವಣೆಯಲ್ಲಿ ಈ ರೀತಿ ಮತದಾನ ಮಾಡುತ್ತಾರೆ ಎಂದರೆ ಅವರಿಗೆ ಗೆರೆ ಎಳೆಯುವ ಕೆಲಸವನ್ನು ಪಕ್ಷ ಮಾಡಲಿದೆ. ಎಲ್ಲಕ್ಕೂ ಒಂದು ಮಿತಿ ಇದೆ. ಮೊದಲೇ ಬಿಜೆಪಿಯಲ್ಲಿನ ಸಣ್ಣ ಪುಟ್ಟ ಗೊಂದಲದಿಂದಾಗಿ ಕಾರ್ಯಕರ್ತರು ಬೇಸತ್ತಿದ್ದಾರೆ. ಈಗ ಇಂತಹ ಬೆಳವಣಿಗೆ ನಡೆದಿದೆ. ಇದರಿಂದ ನೋವಾಗಿದೆ. ಅಡ್ಡ ಮತದಾನದಿಂದ ಅಪಮಾನ ಆಗಿದೆ. ಇದನ್ನೆಲ್ಲ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಅಧ್ಯಕ್ಷನಾಗುವುದಕ್ಕೂ ಮೊದಲು ನಾನೊಬ್ಬ ಕಾರ್ಯಕರ್ತ. ಪಕ್ಷದ ಹೈಕಮಾಂಡ್ ಕಾಲಕಾಲಕ್ಕೆ ಏನೇನು ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ. ಇಂತಹ ಮಹತ್ವದ ಚುನಾವಣೆಯಲ್ಲಿ ಹೀಗೆ ಆಗುತ್ತದೆ ಎಂಬ ಕಲ್ಪನೆ ಇರಲಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಣಕ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ಜನ ಚಾಣಕ್ಯರನ್ನು ರಾಜ್ಯದ ಜನ ನೋಡಿದ್ದಾರೆ. ಕುದುರೆ ಓಡುವ ಸಮಯದಲ್ಲಿ ಓಡುತ್ತದೆ, ಬೀಳುವ ಸಮಯದಲ್ಲಿ ಬೀಳುತ್ತದೆ. ಬಿಜೆಪಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ದೊಡ್ಡ ಸಂಘಟನೆ ಇದೆ. ಕಾರ್ಯಕರ್ತರ ಶಕ್ತಿ ಇದೆ. ಯಾರನ್ನು ಯಾವಾಗ ಹೇಗೆ ಬಗ್ಗಿಸಬೇಕು ಎಂಬುದು ತಿಳಿದಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ನಿಮ್ಮ ವಿರುದ್ಧ ಪಿತೂರಿ ನಡೆಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನನ್ನ ಹಣೆಯಲ್ಲಿ ಬರೆದಿದ್ದನ್ನು ತಪ್ಪಿಸಲು ಆಗುವುದಿಲ್ಲ. ಅವರ ಹಣೆಯಲ್ಲಿ ಬರೆದಿದ್ದನ್ನೂ ತಪ್ಪಿಸಲು ಆಗುವುದಿಲ್ಲ. ಇಷ್ಟಕ್ಕೆ ಮುಗಿಯಲಿಲ್ಲ. ನಾನು ಯಡಿಯೂರಪ್ಪ ಮಗ. ಓಡಿ ಹೋಗೋದಿಲ್ಲ. ಎಲ್ಲವನ್ನೂ ಅರಗಿಸಿಕೊಳ್ಳಬಲ್ಲೆ ಎಂದು ಗುಡುಗಿದರು.‘ಅಡ್ಡ’ ಶಾಸಕರು ಗೆಲ್ಲದಂತೆ ರಣತಂತ್ರ ಖಚಿತ:
ಅಡ್ಡ ಮತದಾನ ಮಾಡಿರುವವರು ಮತ್ತೆ ಶಾಸಕರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಚೂರಿ ಹಾಕಿದ ಖದೀಮರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಡ್ಡ ಮತದಾನ ಮಾಡಿರುವುದರ ಬಗ್ಗೆ ಹಲವು ಮಾಹಿತಿ ಬಂದಿದೆ. ಈ ಬಗ್ಗೆ ಸಮಿತಿ ರಚಿಸಿದ್ದು, ಸತ್ಯ ಹೊರಬರಲಿದೆ. ಅಡ್ಡ ಮತದಾನ ಮಾಡಿದ್ದು ಯಾರೆಂದು ತಿಳಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೆಲವರು ಹಣ ಪಡೆದು ಮತ ಚಲಾಯಿಸಿದ್ದಾರೆ. ಕೋಟ್ಯಂತರ ಹಣ ಹಾಗೂ ಅನುದಾನದ ವಿಚಾರ ಹೊರಬರಲಿದೆ ಎಂದರು.ಮತದಾನದ ಸಮಯದಲ್ಲಿ ಯಾರು ಎಲ್ಲಿದ್ದರು, ಯಾರು ಯಾರೊಂದಿಗೆ ಮಾತಾಡಿದ್ದರು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವಿಚಾರವನ್ನು ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ. ಮುಂದಿನ ವಾರ ಬಂದು ಭೇಟಿ ಮಾಡುವಂತೆ ಕೇಂದ್ರದ ನಾಯಕರು ಸೂಚಿಸಿದ್ದಾರೆ. ಆ ಸಮಯದಲ್ಲಿ ವರದಿ ನೀಡುತ್ತೇವೆ ಎಂದು ತಿಳಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಅವರಿಗೂ ಇದರಿಂದ ಬೇಸರವಾಗಿದೆ. ಇದಕ್ಕೆ ಸರಿಯಾದ ಉತ್ತರ ನೀಡುತ್ತೇವೆ. ಇದು ಬಿಜೆಪಿ ಅಥವಾ ಜೆಡಿಎಸ್‌ನಿಂದ ಆಗಿದೆ ಎಂದು ಹೇಳಲ್ಲ. ಮೋಸ ಮಾಡಿರುವವರು ಯಾರು ಎಂಬುದನ್ನು ಕಂಡುಹಿಡಿಯುತ್ತೇವೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.