ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ: ಬಡಗಲಹುಂಡಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Dec 08, 2025, 01:15 AM IST
36 | Kannada Prabha

ಸಾರಾಂಶ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40000 ಹೆಚ್ಚಿನ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ವರಕೊಡು ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಬಡಗಲಹುಂಡಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೆಪಿಎಸ್- ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಮೈಸೂರು ತಾಲೂಕು ಬಡಗಲಹುಂಡಿ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಲು ಆಗ್ರಹಿಸಿ ಹಾಗೂ ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಬಡಗಲಹುಂಡಿ ಗ್ರಾಮಸ್ಥರು ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟಿಸಿದರು.

ಈ ವೇಳೆ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40000 ಹೆಚ್ಚಿನ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ವರಕೊಡು ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಬಡಗಲಹುಂಡಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. 50 ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಬಡ ರೈತ, ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಯೋಜನೆಯ ಅನುಷ್ಠಾನಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ತಲುಪಿಸಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳುತ್ತಿರುವ ಸರ್ಕಾರವು, ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿಎಂಸಿ ತಲೆಯ ಮೇಲೆ ಹೊರೆಸಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆ ಹೊರ ಗುತ್ತಿಗೆ ಕೊಡಲಾಗುತ್ತದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ, ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಎಂದು ಅವರು ಕಿಡಿಕಾರಿದರು.

ಇದೇ ವೇಳೆ ಬಡಗಲಗುಂಡಿ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಕುಮಾರ್ ಅಧ್ಯಕ್ಷರಾಗಿ, ಮಹಾದೇವ್ ಉಪಾಧ್ಯಕ್ಷರಾಗಿ, ಯೋಗೇಶ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಎಐಡಿಎಸ್ಒ ಪದಾಧಿಕಾರಿಗಳಾದ ಸ್ವಾತಿ, ಚಂದ್ರಿಕಾ, ಹೇಮಲತಾ, ಅಭಿಷೇಕ್, ನಂದೀಶ್, ಗ್ರಾಮಸ್ಥರಾದ ಕುಮಾರ್, ಮಹದೇವ್, ಯೋಗೇಶ್, ಎಚ್.ನಾಗರಾಜು, ಮಂಜುನಾಥ್, ರಾಮು ಮೊದಲಾದವರು ಇದ್ದರು.

ಕಾಡಿನಲ್ಲಿ ರೆಸಾರ್ಟ್‌ಗೆ ಕಡಿವಾಣ ಹಾಕಿ

ಕನ್ನಡಪ್ರಭ ವಾರ್ತೆ ಮೈಸೂರು

ಕಾಡಂಚಿನಲ್ಲಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ರಾಜ್ಯ ಸರ್ಕಾರವು ಕೂಡಲೇ ರೆಸಾರ್ಟ್‌ ಗಳಿಗೆ ಕಡಿವಾಣ ಹಾಕಬೇಕು ಎಂದು ಮೈಸೂರು ಫೋಟೋಗ್ರಫಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಎ.ಶಾಂತಪ್ಪ ಒತ್ತಾಯಿಸಿದ್ದಾರೆ.

ಕಾಡುಗಳಲ್ಲಿ ಮಾನವ ಪ್ರವೇಶದಿಂದ ತೊಂದರೆಗೀಡಾದ ಪ್ರಾಣಿಗಳು ಅರಣ್ಯದಂಚಿನ ಪ್ರದೇಶಗಳತ್ತ ನುಗ್ಗಿ ಅರಣ್ಯದಂಚಿನ ಗ್ರಾಮಗಳ ಸಾಕು ಪ್ರಾಣಿಗಳನ್ನು ಅತಿ ಸುಲಭವಾಗಿ ಬೇಟೆಯಾಡುತ್ತಿರುವುದು ಸಾಮಾನ್ಯವಾಗಿದೆ. ಇದು ದಿನ ನಿತ್ಯದ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಿರುವ ವಕೀಲ ರವಿಕುಮಾರ್‌ಅವರನ್ನು ನಮ್ಮ ಸಂಘ ಬೆಂಬಲಿಸುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರವು ಅರಣ್ಯ ಪ್ರದೇಶದೊಳಗೆ ಅಣಬೆಯಂತೆ ತಲೆ ಎತ್ತಿರುವ ಖಾಸಗಿ ಅನಧಿಕೃತ ರೆಸಾರ್ಟ್‌ಗಳ ನಿಯಂತ್ರಿಸಬೇಕು ಮತ್ತು ಈಗ ನಿಲ್ಲಿಸಿರುವ ಸಫಾರಿಯನ್ನು ಪುನರಾರಂಭಿಸಲು ಅವಕಾಶ ಮಾಡಿಕೊಡಬಾರದು ಎಂದು ಮೈಸೂರು ವನ್ಯಜೀವಿ ಛಾಯಾಗ್ರಾಹಕರ ಸಂಘದ ಪರವಾಗಿ ಅವರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌