ಹವಾಮಾನ ವೈಪರಿತ್ಯ: ರೈತರಲ್ಲಿ ಆತಂಕ

KannadaprabhaNewsNetwork |  
Published : Jan 12, 2026, 02:30 AM IST
ರೈತರು ಮೆಕ್ಕೆಜೋಳ ಕಟಾವು ಮಾಡಿ ಹೊಲದಲ್ಲಿ ತೆನೆ ಹಾಕಿರುವುದು. | Kannada Prabha

ಸಾರಾಂಶ

ಶ್ರೀಲಂಕಾ ಸಮೀಪ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಹಗುರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಭಾನುವಾರ ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ತುಂತುರು ಮಳೆ ಸುರಿಯಿತು.

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ: ತಾಲೂಕಿನಲ್ಲಿ ಈ ವರ್ಷ ಗುರಿಗಿಂತಲೂ ಹೆಚ್ಚಿನ ಕ್ಷೇತ್ರದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬಂಪರ್ ಬೆಳೆ ಬಂದಿದೆ. ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ತೆನೆ ಕಟಾವು ಮಾಡಿ ರೈತರು ಹೊಲದಲ್ಲಿ ಹಾಕಿದ್ದು, ರಾಶಿ ಮಾಡಿಕೊಂಡಿದ್ದ ಬೆಲೆಗೆ ಮಾರಾಟ ಮಾಡಬೇಕು ಎನ್ನುವ ಆತುರದಲ್ಲಿರುವ ರೈತರಿಗೆ ಸದ್ಯ ಮಳೆ ಕಾಟ ಎದುರಾಗಿದೆ.ಶ್ರೀಲಂಕಾ ಸಮೀಪ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಹಗುರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಭಾನುವಾರ ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ತುಂತುರು ಮಳೆ ಸುರಿಯಿತು. ಜತೆಗೆ ಆವರಿಸಿದ ದಟ್ಟ ಮೋಡಗಳು ರೈತರಲ್ಲಿದ್ದ ಮಂದಹಾಸವನ್ನು ಮರೆಯಾಗಿಸಿದೆ. ಬೀಸುತ್ತಿರುವ ತಂಪಾದ ಗಾಳಿಗೆ ಮೆಕ್ಕೆಜೋಳದ ತೆನೆ ಮತ್ತು ಅಲ್ಲಲ್ಲಿ ಒಕ್ಕಲು ಮಾಡಿ ರಸ್ತೆಯುದ್ದಕ್ಕೂ ಹಾಕಿರುವ ಫಸಲಿಗೆ ಹಾನಿಯಾಗಲಿದೆ. ಸದ್ಯದ ವಾತಾವರಣ ಅಕ್ಷರಶಃ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಕಳೆದ ೨೦೨೫ರಲ್ಲಿ ೨೭.೧೪೬ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಗುರಿಗಿಂತಲೂ ಹೆಚ್ಚು ಅಂದರೆ ೨೯.೫೨೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆರಂಭದಲ್ಲಿ ಮಳೆ ಕೈಕೊಟ್ಟಾಗ ಈ ವರ್ಷವೂ ರೈತರಿಗೆ ಬೆಳೆನಷ್ಟ ತಪ್ಪಿದ್ದಲ್ಲ ಎನ್ನುವ ಭಾವನೆ ಬಂದಿತ್ತು. ಆದರೆ ಬಳಿಕ ಒಳ್ಳೆಯ ಮಳೆಯಾಗಿ, ಉತ್ತಮ ಇಳುವರಿಗೆ ಕಾರಣವಾಯಿತು. ಈ ಬಾರಿ ಗೋವಿನಜೋಳ ರೈತರ ಕೈ ಹಿಡಿಯುವ ಲಕ್ಷಣ ಕಾಣಸಿಕ್ಕಿತ್ತು.ಮೋಡ ಕವಿದ ವಾತಾವರಣ: ಕಟಾವು ಕಾರ್ಯ ಈಗಾಗಲೇ ಆರಂಭವಾಗಿದೆ. ಅಲ್ಲಲ್ಲಿ ಒಕ್ಕಲು ಮಾಡಿದ ರೈತರು, ಆರ್ಥಿಕ ಸಂಕಷ್ಟದಲ್ಲಿರುವವರು ಸಿಕ್ಕ ಬೆಲೆಗೆ ಮಾರಾಟ ಮಾಡಿದ್ದಾರೆ. ಸರ್ಕಾರದ ದ್ವಂದ್ವ ನೀತಿಯಿಂದ ಬೆಂಬಲ ಬೆಲೆಯೂ ಸಿಗದೇ ಮಾರುಕಟ್ಟೆಯಲ್ಲಿ ಯೋಗ್ಯ ದರವೂ ಸಿಗದೇ ರೈತರು ಚಿಂತೆಗೀಡಾಗಿರುವ ಈ ಸಂದರ್ಭದಲ್ಲಿ ವಾಯುಭಾರ ಕುಸಿತ ತೊಡಕಾಗಿ ಪರಿಣಮಿಸಿದೆ. ಮೋಡ ಕವಿದ ವಾತಾವರಣ ಆತಂಕಕ್ಕೆ ಕಾರಣವಾಗಿದೆ. ಈ ವೇಳೆ ಮಳೆ ಏನಾದರೂ ಸುರಿದರೆ ನಷ್ಟ ತಪ್ಪಿದ್ದಲ್ಲ ಎಂಬ ಚಿಂತೆ ರೈತರಲ್ಲಿ ಮೂಡಿದೆ.ಯಂತ್ರದಿಂದ ಕಟಾವು ಮಾಡಿದ ಮೆಕ್ಕೆಜೋಳ ತೆನೆ ಶೀತ ವಾತಾವರಣವಿದ್ದ ಕಾರಣ ತೆನೆಯಿಂದ ಕಾಳು ಬೇರ್ಪಡಿಸಲಾಗದೇ ಹೊಲದಲ್ಲೇ ಗುಂಪೆ ಹಾಕಿ ಬಿಡಲಾಗಿದೆ. ಸದ್ಯ ಈ ಎಲ್ಲ ಆತಂಕದ ನಡುವೆ ಫಸಲು ರಕ್ಷಣೆ ರೈತರಿಗೆ ಸವಾಲಾಗಿದೆ.ಸಂರಕ್ಷಿಸಿ: ಈ ಬಾರಿ ತಾಲೂಕಿನಲ್ಲಿ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಫಸಲಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ಕಾರಣದಿಂದ ರೈತರು ಮಾರಾಟ ಮಾಡದೇ ಹಾಗೆ ಇಟ್ಟುಕೊಂಡಿದ್ದು, ಮೆಕ್ಕೆಜೋಳ ಸಂಪೂರ್ಣ ಒಣಗಿದೆ. ತುಂತುರು ಮಳೆ, ಶೀತಗಾಳಿ ಆವರಿಸಿದ್ದು, ರೈತರು ತಮ್ಮ ಫಸಲು ರಕ್ಷಣೆಗೆ ತಾಡಪತ್ರಿ ಹೊದಿಸಿ ಸಂರಕ್ಷಿಸಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ತಿಳಿಸಿದರು.

ರೈತರಿಗೆ ನಷ್ಟ: ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವುದಾಗಿ ಹೇಳಿದ ಸರ್ಕಾರ ರೈತರ ಮೂಗಿಗೆ ತುಪ್ಪ ಒರೆಸಿದೆ. ಎರಡ್ಮೂರು ದಿನ ಮಾತ್ರ ಹೆಸರು ನೋಂದಣಿ ಮಾಡಿಕೊಂಡು ಮುಂದೆ ಬಂದ್ ಮಾಡಿದೆ. ಬೆರಳೆಣಿಕೆ ರೈತರಿಗೆ ಮಾತ್ರ ಈ ಸೌಲಭ್ಯ ದೊರೆತಿದೆ. ತಾಲೂಕಿನಲ್ಲಿ ಇನ್ನೂ ಅಪಾರ ಸಂಖ್ಯೆ ರೈತರು ಮೆಕ್ಕೆಜೋಳ ಮಾರಾಟ ಮಾಡದೇ ಹಾಗೆ ಇಟ್ಟುಕೊಂಡಿದ್ದಾರೆ. ಅಕಾಲಿಕ ಮಳೆ ಸುರಿದರೆ ಎಲ್ಲವೂ ನಷ್ಟವಾಗಲಿದೆ ಎಂದು ರೈತ ಆನಂದ ವಾಲೀಕಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ