ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು ಪಾರದರ್ಶಕತೆ ಹೆಚ್ಚಾಗಿದೆ. ಇದರಿಂದ ಫಲಿತಾಂಶ ಕುಸಿತವಾಗಿದೆ. ಆದರೆ, ಫಲಿತಾಂಶ ಉತ್ತಮಪಡಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು ಪಾರದರ್ಶಕತೆ ಹೆಚ್ಚಾಗಿದೆ. ಇದರಿಂದ ಫಲಿತಾಂಶ ಕುಸಿತವಾಗಿದೆ. ಆದರೆ, ಫಲಿತಾಂಶ ಉತ್ತಮಪಡಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಮಂಗಳವಾರ ಫಲಿತಾಂಶ ಬಿಡುಗಡೆ ಮಾಡಿ ಮಾತನಾಡಿದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ. ಫಲಿತಾಂಶ ಎಷ್ಟು ಕುಸಿದಿದೆ ಎಂದು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಮಂಡಳಿ ನಿಯಮಗಳ ಪ್ರಕಾರ, ಪರೀಕ್ಷೆ 1ಕ್ಕೆ ಈ ಬಾರಿಯ ಫಲಿತಾಂಶದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಫಲಿತಾಂಶ ಉತ್ತಮಪಡಿಸಲು ಪರೀಕ್ಷೆ-2 ಮತ್ತು 3ರಲ್ಲಿ ಅವಕಾಶವಿದೆ. ಪಾಸಾಗದ ವಿಷಯಗಳು ಮಾತ್ರವಲ್ಲದೆ ಈಗ ಬಂದಿರುವ ಫಲಿತಾಂಶ ಉತ್ತಮಪಡಿಸಿಕೊಳ್ಳಲು ವಿಷಯವಾರು ಅಥವಾ ಒಟ್ಟಾರೆ ಎಲ್ಲ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆಯಬಹುದು. ಮೂರೂ ಪರೀಕ್ಷೆಯಲ್ಲಿ ತಾವು ಇಚ್ಛಿಸಿದ ಫಲಿತಾಂಶವನ್ನು ಅಂತಿಮವಾಗಿ ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಉಳಿದ ಎರಡು ಪರೀಕ್ಷೆಗಳಿಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಡೆಯುವುದಿಲ್ಲ. ಕಲಿಕೆಯಲ್ಲಿ ನಮ್ಮಿಂದ ತೊಂದರೆ ಆಗಿದೆ. ಅದಕ್ಕೆವಿದ್ಯಾರ್ಥಿಗಳಿಗೆ ಹೊರೆ ಆಗಬಾರದು ಎಂದು ಈ ವರ್ಷಕ್ಕೆ ಮಾತ್ರ ಶುಲ್ಕ ವಿನಾಯಿತಿಗೆ ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ವಹಿಸಲಾಗುವುದು ಎಂದರು.
ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ತೀವ್ರ ಕುಸಿತದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಯಂ ಉಪನ್ಯಾಸಕರ ಕೊರತೆ ಕಡಿಮೆ ಮಾಡಲು ಶೀಘ್ರದಲ್ಲೇ ನೇಮಕಾತಿ ನಡೆಸುತ್ತೇವೆ. ಅತಿಥಿ ಉಪನ್ಯಾಸಕರಿಂದ ಹೆಚ್ಚಿನ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಎಂದು ತಿಳಿಸಿದರು.
24ರಿಂದ ದ್ವಿತೀಯ ಪಿಯು ಪರೀಕ್ಷೆ-2
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಬಿಡುಗಡೆ ಮಾಡಿದ ಬೆನ್ನಲ್ಲೇ ಪರೀಕ್ಷೆ-2 ಮತ್ತು 3ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ಪ್ರಕಟಿಸಿದರು. ಅಲ್ಲದೆ, ಈ ಎರಡೂ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಈ ವರ್ಷಕ್ಕೆ ಮಾತ್ರ ಅನ್ವಯಿಸಿ ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಏ.24ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ 2 ಪರೀಕ್ಷೆ ನಡೆಸಲಾಗುವುದು. ಇದರ ವಿಷಯವಾರು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಜೂ.9ರಿಂದ 21ರವರೆಗೆ ಪರೀಕ್ಷೆ -3 ನಡೆಯಲಿದ್ದು, ವಿಷಯವಾರು ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು. ಈ ಪರೀಕ್ಷೆಗಳಲ್ಲಿ ಯಾವುದೇ ನಿರ್ದಿಷ್ಟ ವಿಷಯ ಅಥವಾ ಎಲ್ಲಾ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆದರೂ ಯಾವುದೇ ವಿದ್ಯಾರ್ಥಿ ಪರೀಕ್ಷಾ ಶುಲ್ಕ ಪಾವತಿಸುವಂತಿಲ್ಲ. ಸಂಬಂಧ ಈಗಷ್ಟೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಂಡಳಿಯಿಂದ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಪರೀಕ್ಷೆ- 2 ವೇಳಾಪಟ್ಟಿ
ಏ.24- ಕನ್ನಡ, ಅರೇಬಿಕ್
ಏ.25- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
ಏ.26- ಇತಿಹಾಸ, ಭೌತಶಾಸ್ತ್ರ
ಏ.28- ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಾಸಾಯನಶಾಸ್ತ್ರ, ಮೂಲಗಣಿತ
ಏ.29- ಇಂಗ್ಲಿಷ್
ಮೇ 2- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ಮೇ 3- ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮೇ 5- ಅರ್ಥಶಾಸ್ತ್ರ
ಮೇ 6- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಮೇ 7- ಹಿಂದಿ
ಮೇ 8- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಎನ್‌ಎಸ್‌ಕ್ಯೂಎಫ್ ವಿಷಯಗಳು
ಮನನೊಂದ ನಾಲ್ವರು ಆತ್ಮಹತ್ಯೆಗೆ ಶರಣು
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಬೆನ್ನಲ್ಲೇ ಫೇಲಾದ ನಾಲ್ವರು ವಿದ್ಯಾರ್ಥಿನಿಯರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರಿನ ಐಶ್ವರ್ಯ, ಬಳ್ಳಾರಿ ಜಿಲ್ಲೆ ಸಿರುಗುಪ್ಪದ ವಿಜಯಲಕ್ಷ್ಮಿ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಕೃಪಾ, ಹಾವೇರಿ ಜಿಲ್ಲೆಯ ಹಿರೇಕೆರೂರಿನಕಾವ್ಯ ಬಸಪ್ಪ ಲಮಾಣಿ ಮೃತ ವಿದ್ಯಾರ್ಥಿಗಳು
ಕೂಲಿ ಮಾಡುತ್ತಾ 550 ಅಂಕ ಗಳಿಸಿದ ರೇಣುಕಾ
ಕೊಪ್ಪಳ (ಯಲಬುರ್ಗಾ) : ಕೃಷಿ ಹಾಗೂ ಕೂಲಿ ಕೆಲಸ ಮಾಡುತ್ತಾ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಸಾಪುರದ ವಿದ್ಯಾರ್ಥಿನಿ ರೇಣುಕಾ ಬಸವರಾಜ ಲಿಂಗೋಜಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 550 (91.66) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕಾಲೇಜು ಬಿಡುವಿನ ವೇಳೆ ತಮ್ಮ ಜಮೀನಲ್ಲಿ ಕೃಷಿ ಕಾರ್ಯದಲ್ಲಿ ತೊಡಗುವುದರ ಜತೆಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದಳು. ಹೊಲ-ಮನೆ ಕೆಲಸದೊಂದಿಗೆ ವಿದ್ಯಾಭ್ಯಾಸ ಮಾಡುವ ಮೂಲಕ ಅತಿ ಹೆಚ್ಚು ಅಂಕ ಪಡೆದಿದ್ದಾಳೆ. ವಿದ್ಯಾರ್ಥಿನಿಯು ಶಿಕ್ಷಕಿಯಾಗುವ ಕನಸು ಹೊಂದಿದ್ದಾಳೆ.