ಕನ್ನಡಪ್ರಭ ವಾರ್ತೆ ಮೈಸೂರು
ಸಮಸ್ಯೆಗಳನ್ನು ಅರಿಯಲು ಮನೆ ಬಾಗಿಲಿಗೆ ಬರುವ ಪೊಲೀಸರನ್ನು ನಾಗರಿಕರು ಸ್ವಾಗತಿಸಬೇಕು. ಪೊಲೀಸರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಅವರ ಕರ್ತವ್ಯಕ್ಕೆ ಸಹಕಾರ ನೀಡಬೇಕು. ಆಗ ಮಾತ್ರ ಉತ್ತಮವಾದ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಐಸಿಸಿ ಮ್ಯಾಚ್ ರೆಫರಿ, ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಗರದ ಪೊಲೀಸ್ ಘಟಕವು ಇತ್ತೀಚೆಗೆ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಹಾಗೂ ಪೊಲೀಸರ ನಡುವಿನ ಸಂಬಂಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶವೇ ಇಲ್ಲವಾಗುತ್ತದೆ. ಹೀಗಾಗಿ, ನಾಗರಿಕರು ಮತ್ತು ಪೊಲೀಸರ ನಡುವೆ ಸ್ನೇಹ- ಬಾಂಧವ್ಯದ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.
ರಾಜ್ಯ ಸರ್ಕಾರ ರೂಪಿಸಿರುವ ‘ಮನೆ ಮನೆಗೆ ಪೊಲೀಸ್’ ಯೋಜನೆಯು ಉತ್ತಮವಾಗಿದೆ. ಇದರ ಮೂಲಕ ಪೊಲೀಸರು ಜನರ ಮನೆಗಳಿಗೆ ಹೋಗಿ ಬರುವುದರಿಂದ ನಾಗರಿಕರಿಗೂ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅರಿವು ಮೂಡುತ್ತದೆ. ಪೊಲೀಸರ ಕಾರ್ಯದ ಬಗ್ಗೆಯೂ ತಿಳಿವಳಿಕೆ ಮೂಡುತ್ತದೆ ಎಂದರು.250 ಮನೆ ಜವಾಬ್ದಾರಿ:
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಮನೆ ಮನೆಗೆ ಪೊಲೀಸ್ ಯೋಜನೆಯಲ್ಲಿ ಪ್ರತಿ ಬೀಟ್ ಪೊಲೀಸರಿಗೆ ಕ್ಲಸ್ಟರ್ ಗಳನ್ನು ಮಾಡಿ ಸುಮಾರು 250 ಮನೆಯ ಜವಾಬ್ದಾರಿ ನೀಡಿದ್ದೇವೆ. ಈ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಪಡೆಯುತ್ತಾರೆ. ಅಲ್ಲದೆ, ತಮ್ಮ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ನಾಗರಿಕರು ಯಾವ ರೀತಿ ಎಚ್ಚರ ವಹಿಸಬೇಕು. ಅಪರಾಧ ಪ್ರಕರಣಗಳು ಕಡಿಮೆಯಾಗುವ ನಿಟ್ಟಿನಲ್ಲಿ ಯಾವ ರೀತಿಯ ಸಹಕಾರ ನೀಡಬೇಕು. ಆ ಪ್ರದೇಶದಲ್ಲಿ ಯಾವ ರೀತಿಯ ಪ್ರಕರಣಗಳು ಆಗಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.ಇದೇ ವೇಳೆ ‘ಮನೆ ಮನೆಗೆ ಪೊಲೀಸ್’ ಯೋಜನೆ ಕುರಿತ ಸ್ಟಿಕರ್, ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಲಾಯಿತು.
ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ಅಶ್ವತ್ಥ್ ನಾರಾಯಣ್, ರಾಜೇಂದ್ರ, ರವಿಪ್ರಸಾದ್, ಶಿವಶಂಕರ್, ಸ್ನೇಹಾ ರಾಜ್ ಇದ್ದರು. ಮೇಟಗಳ್ಳಿ ಠಾಣೆಯ ಎಸ್‌ಐ ಎಸ್.ಎಸ್. ಲತಾ ನಿರೂಪಿಸಿದರು.----
‘ಮನೆ ಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಒಬ್ಬ ಪೇದೆಗೆ 250 ಮನೆಗಳ ಜವಾಬ್ದಾರಿಯನ್ನು ವಹಿಸಲಾಗಿರುತ್ತದೆ. ಅಷ್ಟೂ ಕುಟುಂಬದಲ್ಲಿ ಇರುವ ಮುಖ್ಯವಾದವರ ಹೆಸರನ್ನು ಪೊಲೀಸ್ ಸಿಬ್ಬಂದಿಗೆ ಗುರುತು ಇರಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಆ 250 ಕುಟುಂಬದವರಿಗೂ ನಮ್ಮನ್ನು ರಕ್ಷಿಸುತ್ತಿರುವ ಪೊಲೀಸರ ಹೆಸರು ನೆನಪಿಟ್ಟುಕೊಂಡರೇ ಅದುವೇ ದೊಡ್ಡ ಯಶಸ್ಸು.’- ಜಾವಗಲ್ ಶ್ರೀನಾಥ್, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ
----‘ಪೊಲೀಸರು ನಾಗರಿಕರ ಹಕ್ಕುಗಳ ರಕ್ಷಕರು. ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಮಾಜದ ಬೆಂಬಲ ಅಗತ್ಯ. ಇದರಿಂದಾಗಿ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಸಾಧಿಸಬಹುದು. ಹೀಗಾಗಿ, ಪೊಲೀಸ್ ಇಲಾಖೆಗೆ ನಾಗರಿಕರ ಸಹಕಾರ, ಸ್ನೇಹ- ಬಾಂಧವ್ಯ ಅಗತ್ಯ.’
- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ