ಕನ್ನಡಪ್ರಭ ವಾರ್ತೆ ಮಾಗಡಿ
ಲಕ್ಕೇನಹಳ್ಳಿ ಗ್ರಾಮ ಪಂಚಾಯತಿಯನ್ನು ಕಸಮುಕ್ತ ಪಂಚಾಯತಿಯನ್ನಾಗಿಸಲು ಘನತ್ಯಾಜ್ಯ ಘಟಕ ಆರಂಭ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ಹೇಳಿದರು.ತಾಲೂಕಿನ ಸೋಲೂರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿ ಕಸ, ಒಣ ಕಸ ತ್ಯಾಜ್ಯ ವಿಂಗಡನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಈ ಮೂಲಕ ಸ್ವಚ್ಛ ಪಂಚಾಯತಿಯನ್ನಾಗಿಸಲು ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ. ಇದೇ ರೀತಿ ಎಲ್ಲಾ ಪಂಚಾಯತಿಗಳು ಘನತ್ಯಾಜ್ಯ ವಿಂಗಡನಾ ಘಟಕ ಆರಂಭಿಸಿದರೆ ಆರೋಗ್ಯವಂತ ಪರಿಸರವನ್ನು ಕಾಣಬಹುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ನೆಲಮಂಗಲಕ್ಕೆ ಮೆಟ್ರೋ ಬರುವ ನಿಟ್ಟಿನಲ್ಲಿ ಡಿಪಿಆರ್ ಕಾರ್ಯ ನಡೆಯುತ್ತಿದ್ದು, ತುಮಕೂರಿಗೆ ಮೆಟ್ರೋ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಪಿಪಿಆರ್ ಮಾಡೆಲ್ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೆಟ್ರೋ ತರಲು ಪ್ರಯತ್ನ ಮಾಡುತ್ತಿದ್ದು, ನೆಲಮಂಗಲಕ್ಕೂ ತುಮಕೂರಿಗೂ ಯಾವುದೇ ಸಂಬಂಧವಿಲ್ಲ. ನೆಲಮಂಗಲ ಜನತೆ ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಶಾಸಕರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.ಪಕ್ಷದ ತೀರ್ಮಾನಕ್ಕೆ ಬದ್ಧ:
ಬಮೂಲ್ ಚುನಾವಣೆಯಲ್ಲಿ ಸೋಲೂರು ಹೋಬಳಿಯ ನಾಯಕರಿಗೆ ನಿರ್ದೇಶಕ ಸ್ಥಾನ ಬಿಟ್ಟು ಕೊಡುವಂತೆ ನಮ್ಮ ಪಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಪಕ್ಷವು ಮುಂದಿನ ದಿನಗಳಲ್ಲಿ ಸೋಲೂರು ಹೋಬಳಿಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವುದಾಗಿ ಹೈಕಮಾಂಡ್ ತಿಳಿಸಿದ ಹಿನ್ನೆಲೆಯಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಲಾಗುತ್ತದೆ. ನೆಲಮಂಗಲದಲ್ಲಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಶ್ರೀನಿವಾಸ್ ವಿವರಿಸಿದರು.ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣ್ ಮಾತನಾಡಿ, ಸ್ವಚ್ಛ ಪಂಚಾಯತಿ ಮಾಡುವ ನಿಟ್ಟಿನಲ್ಲಿ ಘನ ತ್ಯಾಜ್ಯ ಸಂಗ್ರಹಣಾ ಘಟಕ ಆರಂಭ ಮಾಡಲಾಗಿದ್ದು, ನರೇಗಾ ಯೋಜನೆಯಡಿ 18 ಲಕ್ಷ , 70 ಸಾವಿರ ರು., 15ನೇ ಹಣಕಾಸು ಯೋಜನೆಯಡಿ 2.5 ಲಕ್ಷ ರು., ಗ್ರಾಮ ಪಂಚಾಯತಿ ನಿಧಿಯಡಿ 2.5 ಲಕ್ಷ ರು. ಒಟ್ಟು 23 ಲಕ್ಷ, 70 ಸಾವಿರ ರು.ಗಳ ವೆಚ್ಚದಲ್ಲಿ ಒಂದೂವರೆ ಎಕರೆ ಸ್ವಂತ ಪಂಚಾಯತಿ ಜಾಗದಲ್ಲಿ ಘಟಕ ನಿರ್ಮಾಣ ಮಾಡಿದ್ದು, ಪ್ರತಿ ಮನೆಗೂ ತಿಂಗಳಿಗೆ 20 ಹಾಗೂ ವಾಣಿಜ್ಯ ಅಂಗಡಿ ಮತ್ತು ಹೋಟೆಲ್ ಗಳಿಗೆ 50 ರು. ನಂತೆ ಹಸಿ ಕಸ ಸಂಗ್ರಹಣೆ ಮಾಡಿ ಇಲ್ಲಿ ಬೇರ್ಪಡಿಸುವ ಕೆಲಸ ಮಾಡಲಾಗುತ್ತದೆ. ನಂತರ ಗೊಬ್ಬರದ ರೂಪದಲ್ಲಿ ಮಾರಾಟ ಮಾಡಲಿದ್ದು, ಈ ಮೂಲಕ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಮಾಡಲಾಗುತ್ತದೆ. 48 ಹಳ್ಳಿಗಳಿಂದ ಕಸ ಸಂಗ್ರಹಣೆ ಮಾಡುವ ಗುರಿ ಇಟ್ಟುಕೊಂಡಿದ್ದು, ಬೇಡಿಕೆಗೆ ತಕ್ಕಂತೆ ಕಸ ಸಂಗ್ರಹಣ ವಾಹನ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್. ಗೌಡ, ತಾಲೂಕು ಅಧ್ಯಕ್ಷ ರಂಗಸ್ವಾಮಿ, ವಿಎಸ್ಎಸ್ ಎನ್ ಅಧ್ಯಕ್ಷ ಕಾಂತರಾಜು, ತಾಪಂ ಸದಸ್ಯ ಶ್ರೀನಿವಾಸ್, ಲಕ್ಕೇನಹಳ್ಳಿ ಗ್ರಾಪಂ ಉಪಾಧ್ಯಕ್ಷರು, ತಾಪಂ ಇಒ ಜೈಪಾಲ್, ಗಂಗರಾಜು, ಪಿಡಿಒ ನಾಗರಾಜು, ಕಾರ್ಯದರ್ಶಿ ಕೃಷಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.