ನಾರಾಯಣ ಹೆಗಡೆ
ರಾಷ್ಟ್ರೀಯ ಹೆದ್ದಾರಿಯಿಂದ ತಿರುಗಿ ನಗರಕ್ಕೆ ಬರುವ ವಾಹನ ಸವಾರರಿಗೆ ಯಾಲಕ್ಕಿ ಕಂಪಿನ ಹಾವೇರಿ ನಗರಕ್ಕೆ ಸ್ವಾಗತ ಎಂಬ ಪ್ರವೇಶದ್ವಾರ ಕಾಣುತ್ತದೆ. ಆದರೆ, ಇದರ ಕೆಳಗೇ ಗುಂಡಿ ಬಿದ್ದ ರಸ್ತೆಗಳು ವಾಹನಗಳ ವೇಗಕ್ಕೆ ಬ್ರೇಕ್ ಹಾಕುತ್ತವೆ. ಹಾಗೆಯೇ ಮುಂದೆ ಬರುತ್ತಿದ್ದಂತೆ ಹಾಳಾದ ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ. ಇನ್ನು ನಗರದ ಯಾವ ಪ್ರದೇಶಕ್ಕೆ ಹೋದರೂ ರಸ್ತೆ ಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ ಎಂಬುದು ಅರಿವಾಗಲು ಹೆಚ್ಚು ಸಮಯ ತಗಲುವುದಿಲ್ಲ. ಗ್ಯಾಸ್ ಪೈಪ್‌ಲೈನ್‌ಗೆಂದು ಅಗೆದು ಮುಚ್ಚಿದ್ದ ಕಡೆ ಮಳೆಯ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿ ತಗ್ಗು ಬಿದ್ದಿದೆ. ರಸ್ತೆ ಮಧ್ಯೆ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ಜೆಲ್ಲಿ ಕಲ್ಲು ಮೇಲೆದ್ದು ಹರಡಿವೆ. ಇದರಿಂದ ನಗರದಲ್ಲಿ ಸಂಚಾರವೇ ದುಸ್ತರವೆನಿಸಿದೆ.
ಕಳಪೆ ಕಾಮಗಾರಿ: ಜಿಲ್ಲಾ ಕೇಂದ್ರದಲ್ಲಿ ರಸ್ತೆ ಹಾಳಾಗಿದ್ದರೂ ಸರಿಪಡಿಸುವ ಕೆಲಸ ಆಗುತ್ತಿಲ್ಲ. ಆದ್ದರಿಂದ ನಗರಸಭೆ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಬೇಸಿಗೆಯಲ್ಲಿ ಕ್ರಿಯಾಯೋಜನೆ, ಮಂಜೂರಾತಿ ಇತ್ಯಾದಿ ಪ್ರಕ್ರಿಯೆ ಮಾಡುವುದರಲ್ಲಿ ಕಾಲಹರಣ ಮಾಡುವ ವೇಳೆಗೆ ಮಳೆಗಾಲ ಶುರುವಾಗುತ್ತದೆ. ಈಗ ಮಳೆಗಾಲವಿರುವುದರಿಂದ ಕಾಮಗಾರಿ ಮಾಡಲು ಆಗುವುದಿಲ್ಲ ಎಂಬುದು ಅಧಿಕಾರಿಗಳು ಹೇಳುವ ಕಾಯಂ ಸಬೂಬು.ಇನ್ನು ಮಳೆಗಾಲ ಮುಗಿದ ಮೇಲೆ ವರ್ಕ್ ಆರ್ಡರ್ ನೀಡಿ ರಸ್ತೆ ಕಾಮಗಾರಿ ಆರಂಭಿಸುವ ವೇಳೆಗೆ ಈಗಾಗಲೇ ಗುಂಡಿ ಬಿದ್ದ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಮಾಡಿದ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಹಾಳಾಗುತ್ತಿವೆ. ಕಳಪೆ ಗುಣಮಟ್ಟವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜನಸಂಚಾರ ಪ್ರಯಾಸವಾಗುತ್ತಿದ್ದು, ಕಾಲಕಾಲಕ್ಕೆ ರಸ್ತೆ ದುರಸ್ತಿ ಮಾಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರ ಎಂಬ ಹಿರಿಮೆ ಬಿಟ್ಟರೆ ಹಾವೇರಿ ನಗರ ಅಭಿವೃದ್ಧಿಯಲ್ಲಿ ಹಿಂದಕ್ಕೆ ಬಿದ್ದಿದೆ. ಹಲವು ಸಮಸ್ಯೆಗಳ ಆಗರವೇ ಇಲ್ಲಿದ್ದು, ಯಾವುದಕ್ಕೂ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಮಳೆಗಾಲದಲ್ಲೂ ನೀರಿನ ಸಮಸ್ಯೆ. ಈ ಕಾಲದಲ್ಲೂ ಒಳಚರಂಡಿ ಇಲ್ಲದ ನಗರ, ಎಲ್ಲೆಂದರಲ್ಲಿ ಕಸ ತ್ಯಾಜ್ಯದ ರಾಶಿ ಮುಂತಾದ ಸಮಸ್ಯೆಗಳಿಂದಾಗಿ ಜಿಲ್ಲಾ ಕೇಂದ್ರದ ಮಟ್ಟಕ್ಕೆ ಏರುತ್ತಲೇ ಇಲ್ಲ.