ಹೊಸಪೇಟೆ: ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ವಿಳಂಬವಿಲ್ಲದೇ ಪ್ರತಿ ಅರ್ಹ ಫಲಾನುಭವಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.
ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರವು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯೋಜನೆ ಸೌಲಭ್ಯಗಳ ಬಗ್ಗೆ ತಿಳಿಸುವುದರ ಜತೆಗೆ ಸಮರ್ಪಕ ಅನುಷ್ಠಾಗೊಳಿಸಬೇಕು ಎಂದು ಅವರು ಹೇಳಿದರು.
ದೃಷ್ಟಿಹೀನ ಮಹಿಳೆಯರಿಗೆ ನೀಡುವ ಶಿಶುಪಾಲನಾ ಭತ್ಯೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ಇರುವ ನಿರಾಮಯ ವಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಬೇಕು. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಆರ್ಥಿಕ ಸಹಾಯ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗ. ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಬಾರದು. ವಿವಾಹ ಪ್ರೋತ್ಸಾಹಧನ, ಮರಣ ಪರಿಹಾರ ನಿಧಿ ಹಾಗೂ ವೈದ್ಯಕೀಯ ನೆರವಿನಂತಹ ಯೋಜನೆಗಳು ಸಂಕಷ್ಟದಲ್ಲಿರುವವರಿಗೆ ಆಸರೆಯಾಗಬೇಕು. ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಭೇಟಿ ನೀಡಿ ಅರ್ಹ ಫಲಾನುಭವಿಗಳ ಗುರುತಿಸಿ ಸೌಲಭ್ಯಗಳ ಸರಿಯಾದ ಸಮಯಕ್ಕೆ ನೀಡಬೇಕು ಎಂದರು.
ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪುರುಷ ವಿಶೇಷ ಚೇತನರು 12117, ಮಹಿಳಾ ವಿಕಲಚೇತನರು 7587 ಸೇರಿ ಒಟ್ಟು 19704 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ. ಜಿಲ್ಲೆಯ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಮಾಸಾಶನ ನೀಡಲಾಗುತ್ತಿದೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ 27400, ಕೊಟ್ಟೂರಿನಲ್ಲಿ 5330, ಹೊಸಪೇಟೆ 15851, ಕೂಡ್ಲಿಗಿಯಲ್ಲಿ 15857, ಹೂವಿನಹಡಗಲಿ 10296 ಹಾಗೂ ಹೆಚ್.ಬಿ.ಹಳ್ಳಿಯಲ್ಲಿ 7445 ಸೇರಿ 6 ತಾಲ್ಲೂಕುಗಳಲ್ಲಿ ಒಟ್ಟು 82179 ಹಿರಿಯ ನಾಗರಿಕರು ಮಾಸಾಶನ ಪಡೆಯುತ್ತಿದ್ದಾರೆ. ಇದರಲ್ಲಿ 45035 ಪುರುಷರು ಹಾಗೂ 37144 ಮಹಿಳೆಯರು ಸೇರಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗಂಗಪ್ಪ ಇದ್ದರು.