ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಬಿ.ಕೆ. ರಸ್ತೆಯಲ್ಲಿ ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಹಳೆಯ ಪಿಎಲ್‌ಡಿ ಬ್ಯಾಂಕ್ ಜಾಗವನ್ನು ಮಾರುಕಟ್ಟೆ ನಿರ್ಮಾಣಕ್ಕಾಗಿ ಪುರಸಭೆಗೆ ಹಸ್ತಾಂತರಿಸಲಾಗಿದ್ದು, ಬದಲಾಗಿ ಪುರಸಭೆಯ ಈ ನಿವೇಶನವನ್ನು ಬ್ಯಾಂಕ್‌ಗೆ ನೀಡಲಾಗಿದೆ. ಅಧ್ಯಕ್ಷ ರವಿ ಅವರ ನೇತೃತ್ವದಲ್ಲಿ ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದೆ. ಕಟ್ಟಡದ ಅಡಿಪಾಯಕ್ಕೆ ಈಗಾಗಲೇ ₹10 ಲಕ್ಷ ನೀಡಲಾಗಿದ್ದು, ಉಳಿದ ₹90 ಲಕ್ಷವನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಬಿಡುಗಡೆ ಮಾಡಿಸಲಾಗುವುದು. ಕಟ್ಟಡದ ಕೆಳಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಮೇಲ್ಭಾಗದಲ್ಲಿ ಸಭಾಂಗಣ ಹಾಗೂ ಬ್ಯಾಂಕ್ ಕಚೇರಿ ಮಾಡುವುದರಿಂದ ಬಾಡಿಗೆ ಆದಾಯ ಬಂದು ಬ್ಯಾಂಕ್ ನಿರ್ವಹಣೆ ಸುಲಭವಾಗಲಿದೆ ಎಂದು ವಿವರಿಸಿದರು.
ಬರ ಪರಿಹಾರಕ್ಕಾಗಿ ಸುಪ್ರೀಂ ಮೊರೆ:ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ₹22,000 ಕೋಟಿ ಬರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು. ನನಗೆ ಬಾಲ ಇಲ್ಲ ಎಂದು ಟೀಕಿಸಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹಿರಿಯರಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಲಿ ಎಂದು ಬಾಲಕೃಷ್ಣ ಮನವಿ ಮಾಡಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಸರ್ಕಾರ ದಿವಾಳಿಯಾಗಿದ್ದರೆ ನೌಕರರಿಗೆ ಸಂಬಳ, ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಹೇಗೆ ಬರುತ್ತಿತ್ತು? ಮಾಗಡಿ ಪಟ್ಟಣದ ಅಭಿವೃದ್ಧಿಗೇ ₹50 ಕೋಟಿ ನೀಡಿದ್ದೇನೆ. ಪ್ರತಿ ವಾರ್ಡ್‌ಗೆ ₹2 ರಿಂದ ₹3 ಕೋಟಿ ಅನುದಾನ ಸಿಗುತ್ತಿದ್ದು, ಅಂಗನವಾಡಿ ಕಟ್ಟಡ ಸೇರಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರತಿ ಪಂಚಾಯಿತಿಗೆ ₹1 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ₹25 ಲಕ್ಷ ಬೇಸಿಗೆಯ ಕುಡಿಯುವ ನೀರಿನ ಕಾಮಗಾರಿಗೆ ಮೀಸಲಿಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ₹100 ಕೋಟಿ , ಆರ್‌ಡಿಪಿಆರ್‌ನಿಂದ ₹70- ₹80 ಕೋಟಿ ಹಾಗೂ ನನ್ನ ಇಲಾಖೆಯಿಂದ ₹50 ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಬಿಜೆಪಿ ಆಡಳಿತದಲ್ಲಿ ಎಷ್ಟು ಅನುದಾನ ಬಂದಿತ್ತು ಎಂಬ ಬಗ್ಗೆ ಆರ್. ಅಶೋಕ್ ಅಥವಾ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.
ಹಿಂದೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಬಡವರಿಗೆ ಆಶ್ರಯ ನಿವೇಶನಗಳ ಕಾಲೋನಿ ನಿರ್ಮಿಸಿದ ಮಾದರಿಯಲ್ಲೇ, ಮುಂದಿನ 6 ತಿಂಗಳಲ್ಲಿ ರಾಜ್ಯಾದ್ಯಂತ ಬಡವರಿಗೆ 5 ಲಕ್ಷ ನಿವೇಶನಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಜಾಗ ಗುರುತಿಸಿ ಮೂಲಸೌಕರ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಡಿಸೆಂಬರ್ 31 ರೊಳಗೆ 8 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು. ನಗರ ಪ್ರದೇಶಗಳಲ್ಲೂ ಬಿ ಖಾತೆ ನಿವೇಶನಗಳನ್ನು ಎ ಖಾತೆಗೆ ಪರಿವರ್ತಿಸಿ ಬ್ಯಾಂಕ್ ಸಾಲ ಹಾಗೂ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.