ವೆನ್ಲಾಕ್‌ ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿಗೆ ನಿರ್ಲಕ್ಷ್ಯ: ಗಂಭೀರ ಆರೋಪ

KannadaprabhaNewsNetwork |  
Published : May 30, 2026, 02:45 AM IST
ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಅಹವಾಲು  | Kannada Prabha

ಸಾರಾಂಶ

ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಾತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದರಿಂದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಾತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದರಿಂದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಶನಿವಾರ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಈ ಬಗ್ಗೆ ಉತ್ತರಿಸಿದ ಡಿಸಿಪಿ ಮಿಥುನ್, ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಇಲಾಖೆಗೂ ದೂರುಗಳು ಬರುತ್ತಿವೆ. ಸಮಸ್ಯೆ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ. ಸಭೆಯಲ್ಲಿ ನಡೆದ ಚರ್ಚೆಯ ವಿಚಾರವನ್ನು ಜಿಲ್ಲಾಧಿಕಾರಿಗೂ ತಿಳಿಸಲಾಗುವುದು ಎಂದರು.ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಮುಖಂಡ ಎಸ್.ಪಿ. ಆನಂದ್, ಮೂಡುಬಿದಿರೆಯ ಕ್ಯಾನ್ಸರ್ ರೋಗಿಯೊಬ್ಬರನ್ನು ದಾಖಲಿಸುವಲ್ಲಿ ವಿಳಂಬ ಮಾಡಿದ್ದಾರೆ. ಬೆಡ್ ಇಲ್ಲ ಎನ್ನುವ ಕಾರಣ ನೀಡಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಪಡಿತರ ಚೀಟಿ ಇಲ್ಲದ ಕಾರಣ, ಬಿಪಿಎಲ್ ಕಾರ್ಡ್ ಮಾಡಿಸಿ ಬರುವಂತೆ ಸೂಚಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿ‘ಸೋಜಾ ಅವರು ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಜೂನ್‌ನಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ದೂರದ ಪ್ರದೇಶಗಳಿಂದ ಬಂದು ಶಿಕ್ಷಣ ಪಡೆಯುವವರು ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಹಾಸ್ಟೆಲ್‌ಗಳನ್ನು ಅವಲಂಬಿಸುತ್ತಾರೆ. ಆದರೆ ನಮ್ಮಲ್ಲಿ ಹಾಸ್ಟೆಲ್‌ಗಳಿಗೆ ಭಾರಿ ಬೇಡಿಕೆ ಇದೆ. ವಿದ್ಯಾರ್ಥಿಗಳು ಹಾಸ್ಟೆಲ್ ದೊರೆಯದೆ ಶಿಕ್ಷಣವನ್ನೇ ಮೊಟಕುಗೊಳಿಸುವ ಸಾಧ್ಯತೆಯೂ ಇದೆ ಎಂದು ದಲಿತ ಮುಖಂಡರು ಆರೋಪಿಸಿದರು.ರಾತ್ರಿ ಬೀಟ್‌ ಹೆಚ್ಚಳ: ರಾತ್ರಿ ಹೊತ್ತಿನಲ್ಲಿ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರ ಬೀಟ್‌ ಹೆಚ್ಚಿಸುವಂತೆ ದಲಿತ ಮುಖಂಡರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಮಿಥುನ್‌, ರಾತ್ರಿ 8-11 ಗಂಟೆ ವರೆಗಿನ ಬೀಟ್ ಹೆಚ್ಚಿಸಬೇಕು. ಟಾಪ್ ಲೈಟ್, ಸೈರನ್ ಹಾಕಿ ಸ್ಥಳದಲ್ಲಿ ರೌಂಡ್ಸ್ ಮಾಡುವುದರಿಂದ ಭಯ ಉಂಟಾಗುತ್ತದೆ. ಡಾರ್ಕ್ ಸ್ಪಾಟ್ ಗಳಿದ್ದಲ್ಲಿ ಸಿಸಿ ಕೆಮರಾ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಠಾಣಾಧಿಕಾರಿಗೆ ಸೂಚಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಲ್ಲಿನ ಕ್ವಾರೆ ಲೈಸೆನ್ಸ್ ಮೇಲ್ವರ್ಗದವರಿಗೆ ಮಾತ್ರ ದೊರೆಯುತ್ತಿದ್ದು, ದಲಿತ ಸಮುದಾಯದವರಿಗೆ ಇನ್ನೂ ಕೊಟ್ಟಿಲ್ಲ. ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಸಾರ್ವಜನಿಕರ ಕೆಲಸ ನಡೆಯುತ್ತದೆ ಎಂದು ಜಗದೀಶ್ ಪಾಂಡೇಶ್ವರ ಆರೋಪಿಸಿದರು. ಡಿಸಿಪಿ ಉತ್ತರಿಸಿ, ಈ ಬಗ್ಗೆ ಡಿಸಿಆರ್‌ಇ ಗೆ ಮನವಿ ಪತ್ರ ಕೊಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಡಿಸಿಆರ್‌ಇ ಪೊಲೀಸ್ ಅಧೀಕ್ಷಕ ಸೈಮನ್, ಎಸಿಪಿ ವಿಜಯ ಕ್ರಾಂತಿ, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಇದ್ದರು.

-----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಗ್ಗಹಳ್ಳಿಯಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ
ಅವಶ್ಯಕತೆಯಂತೆ ಬೀಜ, ಗೊಬ್ಬರ ಸಂಗ್ರಹವಿದೆ