ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಹಾಲಿ ಇರುವ ಹೊರರೋಗಿ ವಿಭಾಗವನ್ನು ಹೊಸದಾಗಿ ಪುನರ್ ರಚಿಸಲು ಆರೋಗ್ಯ ರಕ್ಷಾ ಸಮಿತಿ ಸಭೆ ತೀರ್ಮಾನಿಸಿದೆ.ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಶನಿವಾರ ನಡೆದ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ 23 ಕೋಟಿ ರು.ಗಳಲ್ಲಿ ಕ್ರಿಟಿಕಲ್ ಕೇರ್ ಯುನಿಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಹಾಲಿ ಹೊರರೋಗಿ ವಿಭಾಗದ ಕಟ್ಟಡ ತುಂಬ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಅದನ್ನು ಕೆಡವಿ ಇದೇ ಮೊತ್ತದಲ್ಲಿ ಅಲ್ಲೇ ಹೊಸದಾಗಿ ಹೊರರೋಗಿ ವಿಭಾಗ ನಿರ್ಮಾಣ ಮಾಡಿದರೆ ಉತ್ತಮ ಎಂಬ ಸಲಹೆ ಉಸ್ತುವಾರಿ ಸಚಿವರಿಂದ ವ್ಯಕ್ತವಾಯಿತು. ಮುಂದಿನ ಹಂತದಲ್ಲಿ ಕ್ರಿಟಿಕಲ್ ಕೇರ್ ನಿರ್ಮಾಣ ಮಾಡಲಾಗುವುದು. ಹೊಸ ಕಟ್ಟಡ ರಚನೆಗೆ ಬೇಕಾದ ರೂಪುರೇಷೆ ಸಿದ್ಧಪಡಿಸಿ ಆ.28ರೊಳಗೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸಚಿವರು ಸೂಚಿಸಿದರು.ಅಗತ್ಯಕ್ಕೆ ನಿಧಿ ಬಳಕೆಗೆ ಸೂಚನೆ:
ಆಸ್ಪತ್ರೆಯ ಆರೋಗ್ಯ ರಕ್ಷಾ ನಿಧಿಯಡಿ 21.55 ಕೋಟಿ ರು. ಮೊತ್ತವನ್ನು ತುರ್ತು ಸೇವೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಳ್ಳಬೇಕು ಎಂದು ಆಸ್ಪತ್ರೆಯ ಸುರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ಉಸ್ತುವಾರಿ ಸಚಿವರು ಸೂಚಿಸಿದರು.ಹೊಸದಾಗಿ ಲೋಕಾರ್ಪಣೆಗೊಂಡಿರುವ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗೆ ಒಪಿಡಿ, ಆಪರೇಷನ್ ಥಿಯೇಟರ್ ಸಹಿತ ವಿವಿಧ ವಿಭಾಗಗಳು ಸ್ಥಳಾಂತರಗೊಳ್ಳಬೇಕು. ವೈದ್ಯಕೀಯ ಸಿಬ್ಬಂದಿ, ಡಿ ಗ್ರೂಪ್ ನೌಕರರು, ಇಬ್ಬರು ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕ ಸೇರಿದಂತೆ ಅವಶ್ಯಕತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆಸ್ಪತ್ರೆಯ ಅಧೀಕ್ಷಕಿಗೆ ಸಚಿವರು ಸೂಚಿಸಿದರು.
ರೈಲ್ವೆ ಸ್ಟೇಷನ್ ರಸ್ತೆ ಹಸ್ತಾಂತರ ಬೇಡಿಕೆ:ರೈಲ್ವೆ ಸ್ಟೇಷನ್ ರಸ್ತೆಯನ್ನು ವೆನ್ಲಾಕ್ ಆಸ್ಪತ್ರೆಗೆ ಸಾರ್ವಜನಿಕ ಉಪಯೋಗ ಸಲುವಾಗಿ ಹಸ್ತಾಂತರಿಸಬೇಕಾದ ಅಗತ್ಯವಿದೆ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಬದಿಯಲ್ಲಿ 8.32 ಸೆಂಟ್ಸ್ ಜಾಗವನ್ನು ಮಿಲಾಗ್ರಿಸ್ ಚರ್ಚ್‌ನವರು ನೀಡಿದರೆ, ಅವರಿಗೆ ಬೇರೆ ಕಡೆ ಪರ್ಯಾಯ ಜಾಗ ನೀಡುವ ಭರವಸೆ ನೀಡಲಾಗಿದೆ. ಈ ಕುರಿತ ಕಡತ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಲ್ಲಿ ಇದೆ ಎಂದು ಆಸ್ಪತ್ರೆ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜಾ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ಗೆ ಉಸ್ತುವಾರಿ ಸಚಿವರು ಸೂಚಿಸಿದರು.
ವಾಮಂಜೂರಿನಲ್ಲಿ ಟಿಬಿ ಆಸ್ಪತ್ರೆಯ ಎರಡು ಕಟ್ಟಡ ಬಳಕೆಯಾಗದೆ ಇದ್ದು, ಅಲ್ಲಿನ ಎಂಟು ಎಕರೆ ಜಾಗವನ್ನೂ ಬೇರೆ ವ್ಯವಸ್ಥೆಗೆ ಬಳಕೆ ಮಾಡಲು ಮುಂದಾಗುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ್, ಸ್ಥಳೀಯ ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್ ಇದ್ದರು.
ಇದಕ್ಕೂ ಮೊದಲು ಉಸ್ತುವಾರಿ ಸಚಿವರು ವೆನ್ಲಾಕ್ ಹಿರಿಯರ ಆರೈಕೆ ಕೇಂದ್ರ ಮತ್ತು ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಿದರು.