ಕಾರವಾರ: ಪಶ್ಚಿಮ ಘಟ್ಟ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ನಾಲ್ಕು ಗೋಡೆಯ ನಡುವೆ ಕಲಿಯುವುದಕ್ಕಿಂತ ವಿಸ್ತಾರವಾದ ಪಶ್ಚಿಮಘಟ್ಟದ ವಾತಾವರಣದಲ್ಲಿ ಅಧ್ಯಯನ ಮಾಡಬಹುದು ಎಂದರು.
ಪರಿಸರ ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ನಡೆಸುವ ಬದಲು ಪ್ರಾಕೃತಿಕ ಸೌಹಾರ್ದ ಇಂದಿನ ತುರ್ತು ಅಗತ್ಯವಾಗಿದೆ. ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಸಾಗಿದೆ. ಲಭ್ಯ ಇರುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದುವ ಗ್ರಾಹಕರು ನಾವಲ್ಲ. ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಮುನ್ನಡೆಯುವ ಬಗ್ಗೆ ವಿಚಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.ಇಲ್ಲಿಯ ಜನತೆ ಪರಿಸರದೊಂದಿಗೆ ಬದುಕುತ್ತಿದ್ದಾರೆ. ಏಲಕ್ಕಿ, ದಾಲ್ಚಿನ್ನಿ, ಕಾಳುಮೆಣಸು ಸೇರಿದಂತೆ ಹಲವು ಮಸಾಲೆ ಉತ್ಪನ್ನ ಬೆಳೆಯುವ ಫಲವತ್ತಾದ ಭೂಮಿ ಇದಾಗಿದೆ ಎಂದು ಬಣ್ಣಿಸಿದರು.
ಅರಣ್ಯ ಶ್ವಾಸಕೋಶ ಇದ್ದಂತೆ. ಶ್ವಾಸಕೋಶ ಸರಿಯಾಗಿದ್ದರೆ ಮಾತ್ರ ಉಸಿರಾಡಬಹುದು. ವಾತಾವರಣದ ಏರುಪೇರು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮಿಸಲಾರಳು ಎಂದು ಎಚ್ಚರಿಸಿದರು.
ಭಾರತವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಗಿತ್ತು. ಪರಿಸರದೊಂದಿಗೆ ಬದುಕುವ ಕಲೆಯನ್ನು ಪೂರ್ವಜರು ಕರಗತ ಮಾಡಿಕೊಂಡಿದ್ದರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್. ಪಾಟೀಲ ಇದ್ದರು.
ತಾಯಿ ನೆನಪಿನಲ್ಲಿ ಸಸಿ ನಾಟಿ:
ಶಿರಸಿಯ ಅರಣ್ಯ ಕಾಲೇಜು ವಿದ್ಯಾರ್ಥಿಗಳನ್ನು ಧನಕರ್ ಸಂಸತ್ ಭವನಕ್ಕೆ ಆಹ್ವಾನಿಸಿದರು. ಅಲ್ಲಿ ಸಂವಾದ ನಡೆಸುವುದಾಗಿ ಘೋಷಿಸಿದರು.