ಪಶ್ಚಿಮ ಪದವೀಧರ ಕ್ಷೇತ್ರ, ಜಿಲ್ಲೆಯಲ್ಲಿ ಶಾಂತಿಯುತ ಶೇ.78.71ರಷ್ಟು ಮತದಾನ

KannadaprabhaNewsNetwork |  
Published : Oct 24, 2026, 02:15 AM IST
ಹಾವೇರಿ ನಗರದ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಸಚಿವ ರುದ್ರಪ್ಪ ಲಮಾಣಿ ಮತದಾನ ಮಾಡಿದರು. | Kannada Prabha

ಸಾರಾಂಶ

ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.78.71ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ.

ಹಾವೇರಿ: ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.78.71ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 24,648 ಮತದಾರರ ಪೈಕಿ 12,748 ಪುರುಷ ಹಾಗೂ 6,653 ಮಹಿಳಾ ಮತದಾರರು ಸೇರಿ ಒಟ್ಟು 19, 401 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಿಲ್ಲಾದ್ಯಂತ ಸ್ಥಾಪಿಸಲಾಗಿದ್ದ 29 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದರು.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಆರಂಭದಲ್ಲಿ ತುಸು ಮಂದಗತಿಯಲ್ಲಿ ಸಾಗಿದರೂ, ಸಮಯ ಕಳೆದಂತೆ ಮತದಾರರ ಆಗಮನ ಹೆಚ್ಚಾಯಿತು. ಮಧ್ಯಾಹ್ನ 12 ಗಂಟೆಯವರೆಗೆ ಶೇ.28.37ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಈ ಪ್ರಮಾಣ ಶೇ.53.06ಕ್ಕೆ ಏರಿಕೆ ಕಂಡು ಬಂದಿತು. ಸದ್ಯದ ಅಂಕಿಅಂಶದ ಪ್ರಕಾರ ಕ್ಷೇತ್ರ ವ್ಯಾಪ್ತಿಯ ಉಳಿದ ಜಿಲ್ಲೆಗಳಿಗಿಂತ ಹಾವೇರಿಯಲ್ಲಿ ಹೆಚ್ಚಿನ ಮತದಾನವಾಗಿರುವುದು ಗಮನಾರ್ಹವಾಗಿದೆ.

ಮಳೆ ಬಂದರೂ ತಗ್ಗದ ಉತ್ಸಾಹ: ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಮಳೆ ಆರಂಭವಾದ ಪರಿಣಾಮ ಮತದಾನ ಪ್ರಕ್ರಿಯೆಗೆ ಕೊಂಚ ಅಡ್ಡಿಯಾಯಿತು. ಮಳೆಯ ಕಾರಣದಿಂದ ಕೆಲವು ಮತದಾರರು ಮತಗಟ್ಟೆಗಳತ್ತ ಆಗಮಿಸಲು ಹಿಂದೇಟು ಹಾಕಿದ್ದರಿಂದ ಕೆಲಕಾಲ ಮತದಾನದ ವೇಗ ಕುಂಠಿತವಾಯಿತು. ಆದರೂ, ಮಳೆ ನಡುವೆಯೂ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಸೆಕೆಯಿಂದ ಕಂಗೆಟ್ಟಿದ್ದ ಏಜೆಂಟರು, ಕಾರ್ಯಕರ್ತರು ವಾತಾವರಣ ತಂಪಾದ್ದರಿಂದ ನಿರಾಳರಾದರು.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಮೂವರು ಡಿವೈಎಸ್ಪಿಗಳು, 10 ಸಿಪಿಐಗಳು, 19 ಪಿಎಸ್‌ಐಗಳು, 29 ಎಎಸ್‌ಐಗಳು, 77 ಹೆಡ್ ಕಾನ್‌ಸ್ಟೆಬಲ್‌ಗಳು, 85 ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ 29 ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಒಟ್ಟು 252 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮತದಾನ ಮುಕ್ತಾಯವಾದ ಬಳಿಕ ಆಯಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಸ್ಥಾಪಿಸಲಾಗಿದ್ದ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳು ಹಾಗೂ ಚುನಾವಣಾ ದಾಖಲೆಗಳನ್ನು ಸಂಗ್ರಹಿಸಲಾಯಿತು. ಬಳಿಕ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಅವುಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.

ನಂತರ ಮತಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಸಾಗಿಸಿ ಹಸ್ತಾಂತರಿಸಲಾಗುತ್ತದೆ. ಮತಪೆಟ್ಟಿಗೆಗಳ ಸುರಕ್ಷತೆಗಾಗಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅ.27ರಂದು ಮತ ಎಣಿಕೆ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ಅ. 27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಮತ ಎಣಿಕೆಯ ಬಳಿಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಫಲಿತಾಂಶದ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ