ನರಗುಂದ: ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿರುವ ಶಾಸಕ ಸಿ .ಸಿ. ಪಾಟೀಲರು ಮತ್ತೊಬ್ಬರ ಕುರಿತು ಕೆಟ್ಟದ್ದಾಗಿ ಮಾತನಾಡುವುದನ್ನು ಬಿಟ್ಟರೆ, 2 ವರ್ಷದಲ್ಲಿ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದ್ದಾರೆ? ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಪ್ರಶ್ನೆ ಮಾಡಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಆರೋಪ ಮಾಡುವ ಪಾಟೀಲರು ಮತದಾರರಿಗೆ ಇಷ್ಟವಾಗುವಂತಹ ಅಭಿವೃದ್ಧಿ ಕೆಲಸ ಏನೂ ಮಾಡಿಲ್ಲ. ಅವರದು ಅಭಿವೃದ್ಧಿ ಶೂನ್ಯ ಸಾಧನೆ. ನಾನು ಶಾಸಕನಿದ್ದಾಗ ನನ್ನ ಕೆಲಸಕಾರ್ಯಗಳಿಗೆ ತಾವು ಅಡೆತಡೆ ಮಾಡಿದ್ದೀರಿ, ನಿಮಗೆ ನಾನೆಂದೂ ಅಡೆತಡೆ ಮಾಡಿಲ್ಲ. ನನ್ನಿಂದ ತಪ್ಪಾಗಿದ್ದರೆ ನೇರವಾಗಿ ನನಗೆ ತಿಳಿಸಿ. ಅದನ್ನು ಬಿಟ್ಟು ಸುಖಾಸುಮ್ಮನೆ ನನ್ನ ಮೇಲೆ ಸುಳ್ಳು ಆರೋಪ ಮಾಡಬೇಡಿ ಎಂದು ತಾಕೀತು ಮಾಡಿದರು.
ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನನ್ನ ಅವಧಿಯಲ್ಲಿ ಪ್ರಾರಂಭ ಮಾಡಲಾಗಿದೆ. ₹1800 ಕೋಟಿ ಅನುದಾನ ತಂದಿದ್ದೇನೆ ಎನ್ನುತ್ತಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೆಲಸ ನೀಡಿದ್ದೀರಿ, ಅವರನ್ನೇ ಬೆಳೆಸಿದ್ದೀರಿ ಹೊರತು ಮತಕ್ಷೇತ್ರದ ಅಭಿವೃದ್ಧಿ ಮಾಡಿಯೇ ಇಲ್ಲ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಪ್ರವೀಣ ಯಾವಗಲ್ಲ, ವಿವೇಕ ಯಾವಗಲ್ಲ, ಗುರುಪಾದಪ್ಪ ಕುರಹಟ್ಟಿ, ಎಂ.ಬಿ. ಅರಹುಣಸಿ, ಎಂ.ಎಸ್. ಪಾಟೀಲ, ಯಲ್ಲಪ್ಪಗೌಡ ನಾಯ್ಕರ, ಎಸ್.ಎಚ್. ಕರಬಸಣ್ಣವರ, ಉದಯ ಮುಧೋಳೆ, ವೀರೇಶ ಚುಳಕಿ, ಮಲ್ಲೇಶ ಕೊಣ್ಣೂರ, ದಶರಥರಡ್ಡಿ ಜಾಲಿಕೊಪ್ಪ, ಜಗದೀಶ ಕಗದಾಳ, ಆರ್.ಎನ್. ಪಾಟೀಲ, ಶಂಕರ ಸುರೇಬಾನ, ವಿಷ್ಣು ಸಾಠೆ, ಪ್ರಕಾಶ ಮೀಶಿ ಇದ್ದರು.