ಕೆರೆಗಳಲ್ಲಿ ಅಕ್ರಮ ಮಣ್ಣುಗಾರಿಕೆಗೆ ಕಡಿವಾಣವೆಂತು?: ಕಣ್ಮುಚ್ಚಿ ಕುಳಿತ ಆಡಳಿತ ವ್ಯವಸ್ಥೆ

KannadaprabhaNewsNetwork |  
Published : Jun 22, 2025, 11:47 PM IST
22ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಕೆರೆಗಳಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಮಣ್ಣು ದಂಧೆ ನಡೆಯುತ್ತಿರುವುದು. | Kannada Prabha

ಸಾರಾಂಶ

ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯ ಜೆಸಿಬಿಯೊಂದಿಗೆ ಹತ್ತಾರು ಟ್ರ್ಯಾಕ್ಟರ್ ಗಳನ್ನು ಬಳಸಿ ಮಣ್ಣು ತೆಗೆಯುವ ದಂಧೆ ಹೆಚ್ಚಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಮೈರಾಡ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಕೆರೆಗಳಲ್ಲಿ ಇರುವಂಥ ಹೂಳನ್ನು ತೆಗೆದು ಕೆರೆಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಕೆಲವು ಮಣ್ಣುಗಳ್ಳರು ಅಕ್ರಮ ಮಣ್ಣುಗಾರಿಕೆಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಹಲವು ಕೆರೆಗಳಲ್ಲಿ ಇಟ್ಟಿಗೆ ಕಾರ್ಖಾನೆ ಮಾಲೀಕರು ಹಾಗೂ ಇತರರು ಅಕ್ರಮವಾಗಿ ಮಣ್ಣು ತೆಗೆಯುವ ಮೂಲಕ ಕೆರೆಗಳ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದರಿಂದ ನೀರಿನ ಮೂಲಗಳು ನಾಶವಾಗುತ್ತಿವೆ.

ತಾಲೂಕಿನಲ್ಲಿ ನದಿಮೂಲಗಳು ಇಲ್ಲದ ಕಾರಣ ಇಲ್ಲಿನ ಜನತೆಗೆ ಕೆರೆ- ಕುಂಟೆಗಳೇ ಜೀವನಾಧಾರವಾಗಿವೆ. ಕೆರೆ- ಕುಂಟೆಗಳು ಸರಿಯಾಗಿ ಇದ್ದರೆ ಮಾತ್ರ ಮಳೆ ನೀರು ಶೇಖರಣೆಯಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ಆದರೆ ಕೆಲವು ಜನರು ಹಣದಾಸೆಗೆ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣುಗಾರಿಕೆ ಮಾಡುವ ಮೂಲಕ ಅಂತರ್ಜಲ ವೃದ್ಧಿಗೆ ಮಾರಕವಾಗಲು ಹೊರಟಿದ್ದಾರೆ.

ತಾಲೂಕಿನ ಬೂದಿಕೋಟೆ, ರಾಮಸಂದ್ರ, ಗಾಜಗ, ಬನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಇರುವಂಥ ಕೆರೆಗಳಲ್ಲಿ ಹಲವು ದಿನಗಳಿಂದ ಮಣ್ಣುಗಳ್ಳರು ಅಕ್ರಮವಾಗಿ ಮಣ್ಣುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ತಾಲೂಕಿನಲ್ಲಿ ಇರುವಂಥ ಇಟ್ಟಿಗೆ ಕಾರ್ಖಾನೆ ಮಾಲೀಕರು ಕೆರೆಗಳಲ್ಲಿ ಮಣ್ಣನ್ನು ತೆಗೆದು ತಮ್ಮ ಇಟ್ಟಿಗೆ ಪ್ಯಾಕ್ಟರಿಗೆ ಬಳಸಿಕೊಳ್ಳುವುದರ ಜೊತೆಗೆ ನೆರೆಯ ರಾಜ್ಯಗಳಿಗೂ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಖಾಸಗಿ ಲೇ ಔಟ್ ನಿರ್ಮಾಣಕ್ಕೂ ಮಣ್ಣನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯ ಜೆಸಿಬಿಯೊಂದಿಗೆ ಹತ್ತಾರು ಟ್ರ್ಯಾಕ್ಟರ್ ಗಳನ್ನು ಬಳಸಿ ಮಣ್ಣು ತೆಗೆಯುವ ದಂಧೆ ಹೆಚ್ಚಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಮೈರಾಡ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಕೆರೆಗಳಲ್ಲಿ ಇರುವಂಥ ಹೂಳನ್ನು ತೆಗೆದು ಕೆರೆಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಕೆಲವು ಮಣ್ಣುಗಳ್ಳರು ಅಕ್ರಮ ಮಣ್ಣುಗಾರಿಕೆಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ.

ಪ್ರಮುಖವಾಗಿ ವಾರದ ರಜೆ ದಿನಗಳು ಮತ್ತು ಸಾರ್ವತ್ರಿಕ ರಜೆ ದಿನಗಳು ಇರುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮಣ್ಣುಗಾರಿಕೆಯಲ್ಲಿ ತೊಡಗುತ್ತಿದ್ದಾರೆ. ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ರಜೆ ಇದ್ದರೆ ಸ್ಥಳಕ್ಕೆ ಬರುವುದಿಲ್ಲ ಎಂಬ ಮುಂದಾಲೋಚನೆಯಿಂದ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಎತ್ತುವುದು ಎಗ್ಗಿಲ್ಲದೆ ನಡೆಯುತ್ತಿದೆ. ರಜಾ ದಿನಗಳಲ್ಲಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಅವರ್‍ಯಾರೂ ಸಹ ಅಷ್ಟಾಗಿ ತಲೆಕೆಡಸಿಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅಕ್ರಮ ಮಣ್ಣುಗಾರಿಕೆಯಲ್ಲಿ ತೊಡಗಿರುವವರನ್ನು ಸಾರ್ವಜನಿಕರು ತಡೆದು ಪ್ರಶ್ನಿಸಿದರೆ, ನಾವು ಪರವಾನಗಿ ಪಡೆದಿದ್ದೇವೆ ಎಂದು ಸಬೂಬು ಹೇಳುವ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲು ಮುಂದಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಬಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ಕೆರೆಗಳನ್ನು ಕಾಪಾಡಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?