ಕನ್ನಡಪ್ರಭ ವಾರ್ತೆ ಹಲಗೂರು
ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಯಾತ್ರೆ ಮಾಡಿದರು. ಆದರೆ, ನಮ್ಮ ನೀರನ್ನು ಉಳಿಸಿಕೊಳ್ಳದೇ ಕಂಡವರ ಮನೆ ಪಾಲು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.ಮಳವಳ್ಳಿ ತಾಲೂಕು ಹಲಗೂರು ಹೋಬಳಿ ವ್ಯಾಪ್ತಿ ಮೈತ್ರಿ ಅಭ್ಯರ್ಥಿ ಎಚ್ .ಡಿ.ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ನಿಮ್ಮ ಸ್ನೇಹಿತ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಜೊತೆ ಮಾತನಾಡಿ, ರೈತರ ಬಗ್ಗೆ ಕಾಳಜಿ ಇದ್ದರೆ ಮೇಕೆದಾಟು ಕಟ್ಟಿ, ನಾವು ಬೆಂಬಲ ನೀಡುತ್ತೇವೆ ಎಂದು ಸವಾಲು ಹಾಕಿದರು.
ದಲಿತ ಸಮುದಾಯಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ. ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಸಿಎಂ ಮಾಡಿ ಅಂತ ದೇವೇಗೌಡರು ಹೇಳಿದರು. ಆದರೆ, ಕಾಂಗ್ರೆಸ್ ನವರು ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ. ಸಿಎಂ ಆಗುತ್ತಾರೆ ಅಂತ ಪರಮೇಶ್ವರ್ ಅವರನ್ನು ಅವರ ಪಕ್ಷದವರೇ ಸೋಲಿಸಿದ್ದರು ಎಂದು ಟೀಕಿಸಿದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಸಕರ ಒತ್ತಾಯದ ಮೇರೆಗೆ ನಾನು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದೆ. ರಾಜಕೀಯ ಷಡ್ಯಂತ್ರದಿಂದ ಸೋಲಿಸಿದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದರು.
ಎರಡು ಬಾರಿ ಕುಮಾರಣ್ಣನ ಮಗ ಸೋತಿದ್ದಾನೆ. ಈಗ ಅವನ ರಾಜಕೀಯ ಭವಿಷ್ಯ ಏನು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಾರೆ. ಆದರೆ, ನನ್ನ ರಾಜಕೀಯ ಭವಿಷ್ಯದ ಬಗ್ಗೆ ತಂದೆಯೇ ಯೋಚನೆ ಮಾಡಿಲ್ಲ. ನನ್ನ ರಾಜಕೀಯ ಭವಿಷ್ಯವನ್ನು ಜನರು, ಭಗವಂತ ತೀರ್ಮಾನ ಮಾಡುತ್ತಾನೆ ಎಂದು ತಿರುಗೇಟು ನೀಡಿದರು.ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳನ್ನು ರಾಜಕಾರಣಕ್ಕೆ ಎಳೆಯುವುದು ಸೂಕ್ತ ಅಲ್ಲ. ಪರಮಪೂಜ್ಯರ ಬಗ್ಗೆ ಲಘುವಾಗಿ ಮಾತನಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಎಂದಿಗೂ ನಾವು ಆ ರೀತಿಯ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನವರಿಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಭಯ ಬಂದಿದೆ. ಹತಾಶೆ ಮನೋಭಾವದಿಂದ ಈ ರೀತಿ ಮಾತಾಡುತ್ತಿದ್ದಾರೆ. ಇದಕ್ಕೆ ಜನರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಂಡ್ಯ ಜನರ ಜೊತೆ ಪ್ರೀತಿಯಿಂದ ಇದ್ದರೆ ಪ್ರೀತಿ ತೋರಿಸುತ್ತಾರೆ. ದುರಂಕಾರ ತೋರಿಸಿದರೆ ತಕ್ಕ ಪಾಠ ಕಲಿಸುತ್ತಾರೆ. ಈಗ
ಕಾಂಗ್ರೆಸ್ ನಾಯಕರ ದುರಂಕಾರವನ್ನು ಜನ ನೋಡುತ್ತಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.