ಕೈ ನಾಯಕರು ಒಪ್ಪಿಸಿದರೆ ಎಚ್ ಡಿಕೆ ಇನ್ನೇನು ಮಾಡ್ತಾರೆ: ಇಕ್ಬಾಲ್ ಹುಸೇನ್

KannadaprabhaNewsNetwork |  
Published : Jul 06, 2025, 01:48 AM IST
5ಕೆಆರ್ ಎಂಎನ್ 2.ಜೆಪಿಜಿರಾಮನಗರದ ವಿಜಯನಗರ ಬಡಾವಣೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಸಮಯ ಬಂದಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಪ್ರಯತ್ನ ಫಲ ಕೊಡದಿರಬಹುದು, ಪ್ರಾರ್ಥನೆ ಫಲ ಕೊಡುತ್ತದೆ ಎಂದು ಡಿಕೆಶಿರವರೇ ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ದೈವ ಶಕ್ತಿಯ ಜೊತೆಗೆ ಹಣೆಯಲ್ಲೂ ಭಗವಂತ ಬರೆದಿರಬೇಕು. ಅವರ ಪ್ರಾರ್ಥನೆ ಖಂಡಿತವಾಗಿಯೂ ಫಲಿಸುತ್ತದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ನಾಯಕರು ತಮಿಳುನಾಡಿನ ಸ್ಟಾಲಿನ್ ಸರ್ಕಾರವನ್ನು ಒಪ್ಪಿಸಿದ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇನ್ನೇನು ಕೆಲಸ ಉಳಿಯುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ನಗರದ ವಿಜಯನಗರ, ಚಾಮುಂಡಿ ಬಡಾವಣೆ , ಬಾಲಗೇರಿ -2 ಹಾಗೂ ಐಜೂರು ಬಡಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಾಯಕರು ತಮಿಳುನಾಡಿನವರನ್ನು ಒಪ್ಪಿಸಲಿ ಎಂದು ಕುಮಾರಸ್ವಾಮಿ ಹೇಳಿರುವುದನ್ನು ಗಮನಿಸಿದ್ದೇನೆ. ಈ ರೀತಿಯ ಮಾತನ್ನು ಹೊಲ ಉಳುವ ರೈತನೂ ಹೇಳುವುದಿಲ್ಲ. ಭಗವಂತ ನಿಮಗೆ ಶಕ್ತಿ ಕೊಟ್ಟಿದ್ದಾನೆ. 2 ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದೀರಿ. ಈ ಜಿಲ್ಲೆಯ ಋಣವೂ ನಿಮ್ಮ ಮೇಲಿದೆ. ರಾಜಕಾರಣ ಬದಿಗೊತ್ತಿ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಟಾಂಗ್ ನೀಡಿದರು.

ನಾವು ದೂರದೃಷ್ಟಿ ಇಟ್ಟುಕೊಂಡು ಮೇಕೆದಾಟು ಪಾದಯಾತ್ರೆ ನಡೆಸಿದೆವು. ಈಗ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆಗಾಗಿ 1 ಸಾವಿರ ಕೋಟಿ ಮೀಸಲಿಟ್ಟಿದೆ. ನೀವು ಪ್ರಧಾನ ಮಂತ್ರಿಗಳಿಗೆ ಮೇಕೆದಾಟು ಯೋಜನೆಯಿಂದಾಗುವ ಅನುಕೂಲದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಚಾಲನೆ ಕೊಡಿಸಬೇಕು. ನಾವು ಮಾಡಿದ ಹೋರಾಟಕ್ಕೆ ಕುಮಾರಸ್ವಾಮಿರವರು ಫಲ ಕೊಡಿಸಬಹುದು ಎಂದು ಹೇಳಿದರು.

ನನ್ನನ್ನು ಕಂಡರೆ ಕಾಂಗ್ರೆಸ್ ನಾಯಕರಿಗೆ ಭಯವೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಇಕ್ಬಾಲ್ ರವರು, ಹೌದು ಅವರನ್ನು ಕಂಡರೆ ನಮಗೆ ಭಯ. ನಾವು ಬರುವಾಗ ಅವರನ್ನು ಕೇಳುತ್ತೇವೆ, ಹೋಗುವಾಗಲೂ ಅವರನ್ನು ಕೇಳುತ್ತೇವೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾದರೂ ಅವರನ್ನು ಕೇಳಿ ಸ್ಪರ್ಧಿಸುತ್ತೇವೆ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷರು ನೀಡಿರುವ ನೋಟಿಸ್ ಗೆ ಉತ್ತರ ಕೊಡಲು ಇನ್ನೂ ಮೂರು ದಿನ ಕಾಲಾವಕಾಶ ಇದೆ. ನಾನು ನಮ್ಮ ಹಕ್ಕನ್ನು ಕೇಳಿದ್ದೇನೆ. ಏನು ಉತ್ತರ ಕೊಡಬೇಕೆಂದು ಆಲೋಚನೆ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮಯ ಬಂದಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಪ್ರಯತ್ನ ಫಲ ಕೊಡದಿರಬಹುದು, ಪ್ರಾರ್ಥನೆ ಫಲ ಕೊಡುತ್ತದೆ ಎಂದು ಡಿಕೆಶಿರವರೇ ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ದೈವ ಶಕ್ತಿಯ ಜೊತೆಗೆ ಹಣೆಯಲ್ಲೂ ಭಗವಂತ ಬರೆದಿರಬೇಕು. ಅವರ ಪ್ರಾರ್ಥನೆ ಖಂಡಿತವಾಗಿಯೂ ಫಲಿಸುತ್ತದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ‌ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಶಿವಸ್ವಾಮಿ (ಅಪ್ಪಿ), ಜಯಲಕ್ಷ್ಮಮ್ಮ, ಮಹಾಲಕ್ಷ್ಮೀ ಗೂಳಿಗೌಡ, ವಿಜಯಕುಮಾರಿ, ಸಿಡಿಪಿಒ ಕಾಂತರಾಜು, ಜಿಲ್ಲಾ ನಿರೂಪಣಾಧಿಕಾರಿ ಲಕ್ಷ್ಮೀದೇವಿ, ಮುಖಂಡರಾದ ಗುರುಪ್ರಸಾದ್, ರಂಜಿತ್, ರವಿ, ಶ್ರೀನಿವಾಸ್, ವಸೀಂ, ಗುರುವೇಗೌಡ ಸೇರಿ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

---

ರಾಮನಗರ ನಗರಸಭೆ ವ್ಯಾಪ್ತಿಯ ನಾಲ್ಕು ವಾರ್ಡ್ ಗಳಲ್ಲಿ ಮಹಿಳಾ‌‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 4 ಅಂಗನವಾಡಿಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತಲಾ 20 ಲಕ್ಷ ವೆಚ್ಚದಂತೆ ಒಟ್ಟು 80 ಲಕ್ಷ ರು.ಗಳ ಅನುದಾನದಲ್ಲಿ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

PREV