ಕನ್ನಡಪ್ರಭ ವಾರ್ತೆ ಮಳವಳ್ಳಿ
ನಾಗಮಂಗಲದಲ್ಲಿ ನಡೆದಿರುವುದು ಸಣ್ಣ ಘಟನೆ. ಕೆಲವರು ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶಮೂರ್ತಿ ಮೆರವಣಿಗೆ ವೇಳೆ ವೈಯಕ್ತಿಕ ವಿಚಾರವಾಗಿ ನಡೆದ ಒಂದು ಸಣ್ಣ ಘಟನೆ. ಕೆಲವೊಂದು ಪ್ರಚೋದನಕಾರಿ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಕೆಲವರು ಮುಂದಾಗುತ್ತಿದ್ದಾರೆ. ಲಾಂಗು, ಮಚ್ಚು ಸೇರಿ ಮತ್ತೊಂದು ಬಗ್ಗೆ ಮಾತನಾಡಿದ್ದಾರೆ ಎಂದರು.
ಈ ವಿಚಾರವಾಗಿ ಎಲ್ಲಾದರೂ ಸಾಕ್ಷಿ ಇದ್ದರೇ ಹೇಳಲಿ. ಒಂದು ವರ್ಗದ ಬಗ್ಗೆ ಪ್ರಚೋಚನೆ ಸರಿಯಲ್ಲ. ಮಂಡ್ಯ ಜನರಿಗೆ ಅನ್ನ ಹಾಕಿದ ಜಿಲ್ಲೆ. ಯಾವತ್ತು ಕೋಮುಗಲಭೆಗೆ ಅವಕಾಶ ನೀಡಿಲ್ಲ, ಕೊಡುವುದಿಲ್ಲ. ಎಲ್ಲರನ್ನು ಒಟ್ಟಾಗಿ ಬದುಕುವುದನ್ನು ಕಲಿಯಬೇಕೆಂದು ಹೇಳಿದರು.ಮಾಜಿ ಶಾಸಕರಿಗೆ ತಿರುಗೇಟು:
ತಾಲೂಕಿನ ಕೊನೆ ಭಾಗಕ್ಕೆ ನೀರು ಒದಗಿಸಲು ಜಾರಿಗೆ ತಂದಿದ್ದ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯನ್ನು ನೆನಗುದಿಗೆ ತದ್ದಿದ್ದವರು ಇಂದು ಕೊನೆ ಭಾಗದ ನೀರಿಗಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ ವಿರುದ್ಧ ಕಿಡಿಕಾರಿದರು.ತಮ್ಮ ಶಾಸಕ ಸ್ಥಾನದ ಅವಧಿಯಲ್ಲಿ ಒಂದು ನೀರಾವರಿ ಯೋಜನೆ ತಂದಿಲ್ಲ. ಬರಗಾಲದಲ್ಲಿಯೂ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರು ತುಂಬಿದ್ದವು ಎನ್ನುವುದನ್ನು ಮರೆಯಬಾರದು. ಅಕ್ರಮವಾಗಿ ನೀರು ಕದಿಯುತ್ತಿರುವುದರಿಂದ ಸರಿಯಾದ ಪ್ರಮಾಣದಲ್ಲಿ ನೀರು ನಮಗೆ ತಲುಪುತ್ತಿಲ್ಲ ಎಂದರು.
ಅಕ್ರಮವಾಗಿ ನೀರು ಕದಿಯುತ್ತಿರುವುದನ್ನು ತಡೆಯುವಂತೆ ಹೇಳಿಕೆ ನೀಡಲಿ ಅದನ್ನು ನಾವು ಒಪ್ಪುತ್ತೇವೆ. ಜಲಪಾತೋತ್ಸವ ಪ್ರವಾಸೋಧ್ಯಮವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಆಯೋಜನೆ ಮಾಡುತ್ತಿದೆ. ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.ಎರಡು ಮೂರು ಗ್ರಾಪಂ ವ್ಯಾಪ್ತಿಗೆ ಮತ್ತು ಮೂರು ಕೆರೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಅದನ್ನು ಸರಿಪಡಿಸಲಾಗುವುದು, ಕೆಆರ್‌ಎಸ್, ಕಬಿನಿ, ಹಾರಂಗಿ ಜಲಾಶಯಗಳು ಪೂರ್ಣ ಪ್ರಾಮಾಣದಲ್ಲಿ ಭರ್ತಿಯಾಗಿದೆ. ಹೆಚ್ಚುವರಿ ನೀರಿನಿಂದ ಜಲಪಾತೋತ್ಸವ ಆಯೋಜನೆ ಮಾಡಲಾಗುತ್ತಿದೆ ಎಂದು ಸ್ವಷ್ಟಪಡಿಸಿದರು.
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ:ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಎಚ್.ಕೆ.ಪಾಟೀಲ್, ಸತೀಸ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಪರಮೇಶ್ ಸೇರಿದಂತೆ ಎಲ್ಲ ಹಿರಿಯ ಮುಖಂಡು ಸಹೋದರರಂತೆ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದರು.