ಷರತ್ತು ಉಲ್ಲಂಘಿಸಿದ 12 ಕಾರ್ಖಾನೆ ಮುಚ್ಚುವ ಆದೇಶವೇನಾಯಿತು?

KannadaprabhaNewsNetwork |  
Published : Feb 14, 2025, 12:32 AM IST
ಕಾರ್ಖಾನೆ  | Kannada Prabha

ಸಾರಾಂಶ

ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಅಪಾರ ಮಾಲಿನ್ಯವಾಗಿ, ಜನರ ಆರೋಗ್ಯದ ಮೇಲೆ ಹಾಗೂ ಕೃಷಿ ಬೆಳೆಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಷರತ್ತು ಉಲ್ಲಂಘಿಸಿದ 12 ಕಾರ್ಖಾನೆಗಳನ್ನು ಮುಚ್ಚಲು ಸಹ ಆದೇಶ ಮಾಡಲಾಗಿದೆ.

ಕಾರ್ಖಾನೆಗಳ ಬಫರ್ ಝೋನ್ ಸಹ ಇಲ್ಲ

ಕೃಷಿ ಭೂಮಿಯ ಮೇಲೆ ಮಾಲಿನ್ಯದ ಪರಿಣಾಮ

ಜನರ ಆರೋಗ್ಯದ ಮೇಲೆಯೂ ದುಷ್ಪರಿಣಾಮ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಅಪಾರ ಮಾಲಿನ್ಯವಾಗಿ, ಜನರ ಆರೋಗ್ಯದ ಮೇಲೆ ಹಾಗೂ ಕೃಷಿ ಬೆಳೆಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಷರತ್ತು ಉಲ್ಲಂಘಿಸಿದ 12 ಕಾರ್ಖಾನೆಗಳನ್ನು ಮುಚ್ಚಲು ಸಹ ಆದೇಶ ಮಾಡಲಾಗಿದೆ.

ಇದು, ಸರ್ಕಾರವೇ ನೀಡಿರುವ ಉತ್ತರ. ಮುಚ್ಚುವ ಕುರಿತು ಮಾಡಲಾದ ಆದೇಶವೇನಾಯಿತು? ಎನ್ನುವುದು ಮಾತ್ರ ನಿಗೂಢ.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಕೇಳಿದ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ.

17 ಬೃಹತ್ ಕಾರ್ಖಾನೆಗಳು ಸೇರಿದಂತೆ ಜಿಲ್ಲೆಯಲ್ಲಿ ಬರೋಬ್ಬರಿ 202 ಇಂಡಸ್ಟ್ರೀಗಳು ಇವೆ ಎಂದು ಲಿಖಿತ ಉತ್ತರದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿಯೇ ಇದ್ದು, ಹಾನಿಕಾರಕವಾಗಿರುವ ಕಾರ್ಖಾನೆಗಳೇ ಆಗಿವೆ.

ಸ್ಪಾಂಜ್ ಐರನ್ ತಯಾರಿಕೆ ಕಾರ್ಖಾನೆಗಳಿಂದ ವಾಯುಮಾಲಿನ್ಯವಾಗಿದೆ ಎಂದು ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ನೀಡಿದೆ. ಇದರ ಆಧಾರದಲ್ಲಿಯೇ 12 ಕಾರ್ಖಾನೆಗಳನ್ನು ಮುಚ್ಚಲು ಆದೇಶ ಮಾಡಲಾಗಿದೆ.ಇಲ್ಲ ಬಫರ್ ಝೋನ್:

ಅಚ್ಚರಿ ಎಂದರೆ ಕೊಪ್ಪಳ ಬಳಿ ತಲೆ ಎತ್ತಿರುವ ಕಾರ್ಖಾನೆಗಳಿಗೆ ಬಫರ್ ಝೋನ್ ಸಹ ಇಲ್ಲ. ಯಾವುದೇ ಕಾರ್ಖಾನೆ ಪ್ರಾರಂಭಿಸಲು ಅದು ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಶೇ. 30ರಷ್ಟು ಬಫರ್ ಝೋನ್ ಪ್ರದೇಶವನ್ನು ಕಾಯ್ದಿರಿಸಬೇಕು ಮತ್ತು ಅದನ್ನು ಹಸಿರು ಕಾಡಾಗಿ ಬೆಳೆಸಿರಬೇಕು ಎನ್ನುವುದು ನಿಯಮ.

ಆದರೆ, ಕೊಪ್ಪಳ ಬಳಿ ಇರುವ ಬಹುತೇಕ ಕೈಗಾರಿಕೆಗಳು ಬಫರ್ ಝೋನ್ ಸಹ ಹೊಂದಿಲ್ಲ. ಹೀಗಾಗಿ, ಹಸಿರು ಕಾಡು ಬೆಳೆಸುವ ಪ್ರಶ್ನೆಯೇ ಇಲ್ಲ. ಇದು ಸಹ ಅಕ್ಷಮ್ಯ ಅಪರಾಧವಾಗಿದೆ ಎಂದು ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ನೀಡಿದೆ.

ಇದಲ್ಲದೆ ಜನರ ಆರೋಗ್ಯದ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದೆ. ಬಫರ್ ಝೋನ್ ಇಲ್ಲದೆ ಇರುವುದರಿಂದ ಅಕ್ಕಪಕ್ಕದಲ್ಲಿಯೇ ಇರುವ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಮೇಲೆಯು ದುಷ್ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿಯೇ ಉಲ್ಲೇಖ ಮಾಡಲಾಗಿದೆ.

ಕ್ರಮವಾಗಿಲ್ಲ:

ಅಚ್ಚರಿ ಎಂದರೆ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಈ ಕುರಿತು ಸ್ಪಷ್ಟವಾಗಿ ವರದಿಯನ್ನೇ ನೀಡಿದ್ದರೂ ಯಾವುದೇ ಕಾರ್ಖಾನೆ ಮೇಲೆ ಇದುವರೆಗೂ ಕ್ರಮವಾಗಿರುವ ಕುರಿತು ಉತ್ತರದಲ್ಲಿ ಮಾಹಿತಿ ನೀಡಿಲ್ಲ.

ವಾಸ್ತವ ಇಷ್ಟು ಕಠೋರವಾಗಿದೆ. ಈಗ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬೃಹತ್ ಕಾರ್ಖಾನೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ. ಹೋರಾಟಕ್ಕೂ ಸಹ ಜನಾಂದೋಲನ ರೂಪಗೊಳ್ಳುತ್ತಿದೆ. ಅಚ್ಚರಿ ಎಂದರೆ ನೂತನ ಕಾರ್ಖಾನೆಯನ್ನು ಪ್ರಾರಂಭಿಸುವ ಕುರಿತು ಸಾರ್ವಜನಿಕ ಅಹವಾಲು ಸಹ ಆಲಿಸಬೇಕು. ಅದನ್ನು ಮಾಡಲಾಯಿತೇ ಅಥವಾ ಮಾಡಲಾಗಿದ್ದರೆ ಯಾವಾಗ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಶಾಸಕರ ನಡೆ ಏನು?

ಕೊಪ್ಪಳ ಬಳಿ ಬೃಹತ್ ಕಾರ್ಖಾನೆ ಪ್ರಾರಂಭಿಸುವುದಕ್ಕೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿ ನೀಡಿದ್ದರೂ ಸಹ ಶಾಸಕ ರಾಘವೇಂದ್ರ ಹಿಟ್ನಾಳ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಬೃಹತ್ ಕಾರ್ಖಾನೆ ಪ್ರಾರಂಭಿಸಲು ತಮ್ಮ ಸಹಕಾರ ಇದೆಯೋ ಅಥವಾ ವಿರೋಧ ಇದೆಯೋ ಎನ್ನುವುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎನ್ನುವ ಕೂಗು ಸಹ ಕೇಳಿ ಬರುತ್ತಿದೆ.

ಕಾರ್ಖಾನೆ ವಿರುದ್ಧ ಜನಾಂದೋಲನವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಇದನ್ನು ವಿರೋಧಿಸಿ, ಹೇಳಿಕೆ ನೀಡಿದ್ದು ಅಲ್ಲದೆ ಪ್ರತಿಭಟನೆ ಮಾಡುವುದಾಗಿ ಹೇಳಿವೆ. ಆದರೆ, ಕಾಂಗ್ರೆಸ್ ನಾಯಕರು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಹಾಗೂ ವಿಶೇಷವಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ತಮ್ಮ ನಿಲುವು ಇದುವರೆಗೂ ವ್ಯಕ್ತಪಡಿಸದೇ ಇರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್