ಬಾಂಬ್‌ ಕರೆ ಬಂದರೆ ಏನಾಯ್ತು, ಸ್ಫೋಟವಾಗಿಲ್ಲವಲ್ಲ?

KannadaprabhaNewsNetwork |  
Published : Dec 03, 2023, 01:00 AM IST
ಸತೀಶ ಜಾರಕಿಹೊಳಿ. | Kannada Prabha

ಸಾರಾಂಶ

ಬಾಂಬ್ ಇಟ್ಟಿರುವ ಬಗ್ಗೆ ಸುಳ್ಳು ಕರೆಗಳು ಬರುತ್ತಾ ಇರುತ್ತವೆ. ಕರೆಗಳು ಬಂದರೆ ಏನಾಯ್ತು? ಎಲ್ಲಿಯಾದರೂ ಬಾಂಬ್ ಸ್ಫೋಟವಾಗಿದೆಯೇ? ಎಲ್ಲಿಯೂ ಏನೂ ಆಗಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಾಂಬ್ ಇಟ್ಟಿರುವ ಬಗ್ಗೆ ಸುಳ್ಳು ಕರೆಗಳು ಬರುತ್ತಾ ಇರುತ್ತವೆ. ಕರೆಗಳು ಬಂದರೆ ಏನಾಯ್ತು? ಎಲ್ಲಿಯಾದರೂ ಬಾಂಬ್ ಸ್ಫೋಟವಾಗಿದೆಯೇ? ಎಲ್ಲಿಯೂ ಏನೂ ಆಗಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಬೆಂಗಳೂರಿನ ಶಾಲೆಗಳಲ್ಲಿ ಶುಕ್ರವಾರದಂದು ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಸಂದೇಶ ಕಳುಹಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲ ಸಮಯವನ್ನು ವ್ಯರ್ಥ್ಯ ಮಾಡಿದರೆ ಹೇಗೆ? ಇದಕ್ಕಾಗಿಯೇ ಪೊಲೀಸ್ ಇಲಾಖೆ, ಸರ್ಕಾರವಿದೆ. ಅದನ್ನೆಲ್ಲ ಅವರು ನೋಡಿಕೊಳ್ಳುತ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿವೆ ಅದರ ಬಗ್ಗೆ ಚರ್ಚಿಸೋಣ ಎಂದರು.

ಚುನಾವಣಾ ಸಿದ್ಧತೆ ಆರಂಭ:

ಕಾಂಗ್ರೆಸ್ಸಿ​ನಿಂದ ಲೋಕಸಭಾ ಚುನಾವಣಾ ಸಿದ್ಧತೆ ಆರಂಭವಾಗಿದೆ. ಈಗಾಗಲೇ ನಮ್ಮ ಪಕ್ಷದಿಂದ ಪ್ರತಿ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಸಮೀಕ್ಷೆ ಕೈಗೊಂಡು ಅಲ್ಲಿನ ಆಕಾಂಕ್ಷಿಗಳ ಪಟ್ಟಿ ಕಳಿಸಿದ ನಂತರ ಪಕ್ಷದ ಹೈಕಮಾಂಡ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ ಎಂದರು.

ಉ.ಕ ಅಭಿವೃದ್ಧಿ ಕುರಿತು ಚರ್ಚೆ:

ಡಿ. 4ರಿಂದ ಬೆಳಗಾವಿಯಲ್ಲಿ ನಿಗದಿಯಾಗಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ. ಇದರೊಂದಿಗೆ ಬರಗಾಲದ ಕುರಿತು ಚರ್ಚೆ ನಡೆಯಲಿದೆ. ವಿರೋಧ ಪಕ್ಷದವರು ಯಾವುದೇ ವಿಷಯ ಕುರಿತು ಚರ್ಚೆ ಮಾಡಿದರೂ ನಾವು ಉತ್ತರ ಕೊಡಲು ಸಿದ್ಧರಾಗಿದ್ದೇವೆ ಎಂದರು.

₹4 ಸಾವಿರ ಕೋಟಿ ಬಿಲ್ ಬಾಕಿ:

ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹4 ಸಾವಿರ ಕೋಟಿ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ. ಕೊಡುವ ಜವಾಬ್ದಾರಿ ನಮ್ಮದಾಗಿದೆ, ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ ಜಾರಕಿಹೊಳಿ, ಬಿಜೆಪಿಯವರು ₹4000 ಕೋಟಿ ಹೆಚ್ಚಿಗೆ ಮಾಡಿಟ್ಟು ಹೋಗಿದ್ದಾರೆ. ಇಲಾಖೆಗೆ ಹೆಚ್ಚಿಗೆ ಹಣ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಸರ್ಕಾರ ಹೆಚ್ಚಿಗೆ ಹಣ ಕೊಟ್ಟರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ:

ತೆಲಂಗಾಣ ಚುನಾವಣೆ ವೇಳೆ ರಾಜ್ಯದ ಪ್ರಭಾವಿ ಸಚಿವರೊಬ್ಬರು ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಬೇರೆ ಪಕ್ಷದಲ್ಲಿದ್ದರೂ ಗೆಳೆತನ ಇದ್ದೇ ಇರುತ್ತದೆ. ಗೋವಾ ಮತ್ತು ಕರ್ನಾಟಕಕ್ಕೆ ಮೊದಲಿನಿಂದಲೂ ಉತ್ತಮ ಗೆಳತನವಿದೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ. ಎರಡು ತಾಸು ಏಕೆ ಇಡೀ ರಾತ್ರೀನೇ ಅವರು ಚರ್ಚೆ ಮಾಡಿರಬಹುದು. ಇಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಾಗಿದ್ದಾರೆ. ಆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ ಇದರಲ್ಲಿ ವಿಶೇಷ ಏನೂ ಇಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ