ಚನ್ನಪಟ್ಟಣದ ಐದು ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಅ.10ರಂದು ಮತ್ತೆ ಸಭೆ ನಡೆಸಲಿದೆ. ಜನಾಭಿಪ್ರಾಯ ಪಡೆಯಲು ಸಭೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚನ್ನಪಟ್ಟಣ: ಚನ್ನಪಟ್ಟಣದ ಐದು ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಅ.10ರಂದು ಮತ್ತೆ ಸಭೆ ನಡೆಸಲಿದೆ. ಜನಾಭಿಪ್ರಾಯ ಪಡೆಯಲು ಸಭೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಏನೇನು ಅಭಿಪ್ರಾಯ ಸಿಗುತ್ತೆ ಸಂಗ್ರಹಿಸುತ್ತಿದ್ದೇನೆ. ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಕ್ಷೇತ್ರದಲ್ಲಿ ಒಟ್ಟಾರೆ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡುತ್ತಾರೆ. ಅದು ನಿಖಿಲ್ ಇರ್ತಾರೋ, ಇನ್ಯಾರು ಇರ್ತಾರೋ ಅನ್ನೋದನ್ನ ಹೈಕಮಾಂಡ್ ನಾಯಕರು ಕೂತು ತೀರ್ಮಾನ ಮಾಡುತ್ತೇವೆ ಎಂದರು.
ಚನ್ನಪಟ್ಟಣಕ್ಕೆ ಅನುದಾನ ತಂದಿದ್ದೇನೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ, ಎಲ್ಲಿದೆ ಅನುದಾನ.? ಯಾವುದೋ ಬೋರ್ಡ್‌ಗಳಲ್ಲಿ ಮಾತ್ರನಾ? ನಮ್ಮ ಕಾಲದಲ್ಲಿ ಏನು ಆಗಿಲ್ಲ ಅಂತಾರಲ್ಲ. ಎಲ್ಲಾ ದಾಖಲೆಗಳನ್ನ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೂ ನಾನು ಚನ್ನಪಟ್ಟಣಕ್ಕೆ ಅನುದಾನ ತಂದಿದ್ದೇನೆ. ಮೂರು ತಿಂಗಳಲ್ಲಿ ಚನ್ನಪಟ್ಟಣಕ್ಕೆ ಇವರ ಕೊಡುಗೆ ಏನು.? ನಾನು ಸೇತುವೆಗಳ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದೆ, ಅದಕ್ಕೆ ಚೆಕ್ ಡ್ಯಾಂ ಅಂತ ಪಕ್ಕದಲ್ಲಿ ಬೋರ್ಡ್ ಹಾಕೊಂಡು ಓಡಾಡ್ತಿದ್ದಾರೆ ಎಂದು ಕಿಡಿಕಾರಿದರು.
ಮೂರು ತಿಂಗಳಲ್ಲಿ ೨೦ ದಿನ ಬಂದಿದ್ದೇನೆ ಅಂತಿರಲ್ಲ. ಏನು ಮಾಡಿದ್ದೀರಿ ಪಟ್ಟಿ ಇಡಿ. ಒಬ್ಬ ₹300 ಕೋಟಿ ಇನ್ವೆಸ್ಟ್ ಮಾಡಿದ್ದೀವಿ ಅಂತಾನೆ, ಮತ್ತೊಬ್ಬ₹500 ಕೋಟಿ ಅಂತಾನೆ. ಎಲ್ಲಿದೆ ಹಣ, ಇವರ ಕೈಯಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಚನ್ನಪಟ್ಟಣದ ಸೀಟ್ ಖಾಲಿ ಇರೋದಕ್ಕೆ ಬಂದಿದ್ದೀನಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚೇರ್ ಖಾಲಿ ಇಲ್ಲದಿದ್ರೆ ಚನ್ನಪಟ್ಟಣಕ್ಕೆ ಬರ್ತಿರಲಿಲ್ವಾ.? ಚೇರ್ ಖಾಲಿ ಇರೋದಕ್ಕೆ ತಾನೆ ಬಂದಿರೋದು. ಇಲ್ಲವಾದರೆ ಚನ್ನಪಟ್ಟಣದ ಕಡೆ ತಿರುಗಿ ನೋಡ್ತಿರಲಿಲ್ಲ. ಚುನಾವಣೆ ಮುಗಿದ ಮೇಲೂ ಚನ್ನಪಟ್ಟಣಕ್ಕೆ ಬರಲ್ಲ, ಟಾಟಾ ಮಾಡ್ಕೋಂಡು ಹೋಗ್ತಿನಿ ಅನ್ನೋದೆ ಇದರ ಅರ್ಥ ಎಂದರು.