ಕೂಡ್ಲಿಗಿ: ನಿನ್ನ ಅನುಕೂಲಕ್ಕೆ ನೀನು ಹೇಗಾದರೂ ರಾಜಕೀಯ ಮಾಡಬಹುದಾ ರಾಮುಲು? ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ ನಿನ್ನ ಹಾಗೂ ನಿಮ್ಮ ಪಕ್ಷದ ಕೊಡುಗೆ ಏನು? ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏಕವಚನದಲ್ಲಿ ಪ್ರಶ್ನಿಸಿದರು.
ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಕಲಂ ೩೭೧ಜೆ ಜಾರಿಗೊಳಿಸಿದೆ. ಆದರೆ ನಿನ್ನ ಸಾಧನೆ ಏನು ಶ್ರೀರಾಮುಲು? ಎಂದು ತರಾಟೆಗೆ ತೆಗೆದುಕೊಂಡರು.
ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಲು ಜನರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.ಶ್ರೀರಾಮುಲು ರಾಜಕೀಯ ಪುನರ್ಜನ್ಮದ ಬಗ್ಗೆ ಮಾತನಾಡುವುದು ಸಲ್ಲದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸೋತಿದ್ದಾರೆ. ಅವರಂತೆ ಬೇರೆ ಅಭ್ಯರ್ಥಿಗಳು ಪರಾಜಯಗೊಂಡಿದ್ದಾರೆ. ಅವರೆಲ್ಲರೂ ರಾಜಕೀಯ ಪುನರ್ಜನ್ಮದ ಬಗ್ಗೆ ಮಾತನಾಡುತ್ತಾರಾ? ರಾಮುಲು ಅವರನ್ನು ಜನರು ಈ ಬಾರಿಯೂ ಧಿಕ್ಕರಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.