- ಬಿಜೆಪಿ ಕಾರ್ಯಕರ್ತರೇನು ಬಳೆ ತೊಟ್ಟು ಕುಳಿತಿಲ್ಲ ಎಂಬುದನ್ನು ಸಿಎಂ, ಡಿಸಿಎಂ ಅರಿಯಲಿ ಎಂದು ತಾಕೀತು - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹೊರವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಬೆಳಗಾವಿ ಪೊಲೀಸರಿಂದ ಬಿಡುಗಡೆಯಾದ ವಿಪ ಸದಸ್ಯ ಸಿ.ಟಿ.ರವಿ, ವಿಪಕ್ಷ ನಾಯಕ ಆರ್.ಅಶೋಕ ಜೊತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು, ಪೊಲೀಸರನ್ನು ಬಳಸಿ ಸಿ.ಟಿ.ರವಿ ಅವರನ್ನು ಬಂಧಿಸಿದೆ. ರಾತ್ರೋರಾತ್ರಿ ನಾಲ್ಕು ಜಿಲ್ಲೆಗಳ 50ಕ್ಕೂ ಹೆಚ್ಚು ಹಳ್ಳಿಗಳು, ಹತ್ತಾರು ಠಾಣೆಗಳಿಗೆ ಅಲೆದಾಡಿಸಿದೆ. ರವಿ ಮೇಲೆ ದೈಹಿಕ, ಮಾನಸಿಕ ಹಲ್ಲೆ ಮಾಡಲಾಗಿದೆ. ಇಂದು (ಶುಕ್ರವಾರ) ಸಂಜೆ ಹೈಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ತಕ್ಕ ಶಾಸ್ತಿಯಾಗಿದೆ. ಈ ವಿಚಾರದ ಬಗ್ಗೆ ನಾವೆಲ್ಲಾ ಮುಖಂಡರು ಚರ್ಚಿಸುತ್ತೇವೆ. ರವಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪಕ್ಷದ ಮುಂದಿನ ಹಜ್ಜೆ ಬಗ್ಗೆ ಸಭೆ ಮಾಡಿ, ನಾಳೆ ನಿರ್ಧರಿಸುತ್ತೇವೆ ಎಂದು ಹೇಳಿದರು.ಪೊಲೀಸರು ರವಿಯವರನ್ನು ಬಂಧಿಸಿ, ತಲೆಗೆ ತೀವ್ರ ಪೆಟ್ಟಾಗಿದ್ದರೂ ಚಿಕಿತ್ಸೆ ಕೊಡಿಸಿಲ್ಲ. ಯಾರೋ ಒಬ್ಬರು ಶುಶ್ರೂಷಕಿ ಬಂದು, ಚಿಕಿತ್ಸೆ ನೀಡಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಕರೆ ಬರುತ್ತಿತ್ತು. ಕರೆ ಮಾಡಿದವರು ಇಲಾಖೆಯ ಮೇಲಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳೋ ಗೊತ್ತಿಲ್ಲ. ರವಿ ಬಂಧನ ಪ್ರಕರಣ, ಪೊಲೀಸರ ಮೇಲೆ ಒತ್ತಡ ಹೇರಿ, ಸುತ್ತಾಡಿಸಿದ್ದ ಎಲ್ಲ ವಿಚಾರದ ಬಗ್ಗೆ ಇಡೀ ಪ್ರಕರಣದ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಹೈಕೋರ್ಟ್ ಮಧ್ಯಂತರ ತೀರ್ಪನ್ನು ಸ್ವಾಗತಿಸುತ್ತೇವೆ. ಕೇವಲ ಸಿ.ಟಿ.ರವಿ ಅವರಿಗೆ ಜಾಮೀನು ಸಿಕ್ಕಿದೆ ಅಂತಲ್ಲ. ಕಾನೂನಾತ್ಮಕವಾಗಿ ಜಾಮೀನು ಸಿಗಬೇಕಿತ್ತು, ಸಿಕ್ಕಿದೆ. ಅದನ್ನು ಸ್ವಾಗತಿಸುತ್ತೇವೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿ, ಚಾಟಿ ಬೀಸಿದೆ. ಒಬ್ಬ ಜನಪ್ರತಿನಿಧಿಯಾದ ಸಿ.ಟಿ.ರವಿಗೆ ನೋಟಿಸ್ ಸಹ ಕೊಡದೇ, ಬಂಧಿಸಿದ್ದು ಸಂಪೂರ್ಣ ಕಾನೂನುಬಾಹಿರ. ಇದು ಸಂಪೂರ್ಣ ತಪ್ಪು ಕ್ರಮ ಎಂದು ಆಕ್ಷೇಪಿಸಿದರು. ಅಲ್ಲದೇ, ರವಿ ಬಂಧನ ಪ್ರಕರಣವನ್ನು ಮಾನವ ಹಕ್ಕುಗಳ ಆಯೋಗಕ್ಕೆ ಒಯ್ಯುತ್ತೇವೆ. ಸಿಬಿಐ ತನಿಖೆಗೂ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಹೈಕೋರ್ಟ್ ಆದೇಶದ ಪ್ರತಿ ಕೈಗೆ ಸಿಗುತ್ತಿದ್ದಂತೆ ಬಂಧಿತ ಸಿ.ಟಿ.ರವಿ ಅವರನ್ನು ಪೊಲೀಸರು ಎಲ್ಲಿದ್ದರೋ ಅಲ್ಲಿಯೇ ಬಿಡುಗಡೆ ಮಾಡಿದರು.
ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ವಿಪ ಸದಸ್ಯ ಸಿ.ಟಿ.ರವಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.