ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಸಂವಿಧಾನ ದಿನ ಆಚರಿಸಿದೊಡೇನು ಫಲ?

KannadaprabhaNewsNetwork |  
Published : Nov 28, 2026, 12:15 AM IST
ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು | Kannada Prabha

ಸಾರಾಂಶ

ಸಂವಿಧಾನ ಎಂದೊಡನೆ ನೆನಪಾಗುವುದು ಮೂಲಭೂತ ಹಕ್ಕುಗಳು.ಅದರಲ್ಲೂ ಮುಖ್ಯವಾಗಿ ದೇಶದಾದ್ಯಂತ ಸಂಚರಿಸುವ ಹಕ್ಕು. ಇದು ಸ್ವಾತಂತ್ರ್ಯವೂ ಹೌದು. ಸಂಚರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಈ ಹಕ್ಕುಗಳಿಗೆ ಧಕ್ಕೆಯಾದರೆ ಸಂವಿಧಾನದ ಆಶಯಕ್ಕೇ ಧಕ್ಕೆಯಾದಂತೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನ ಎಂದೊಡನೆ ನೆನಪಾಗುವುದು ಮೂಲಭೂತ ಹಕ್ಕುಗಳು.ಅದರಲ್ಲೂ ಮುಖ್ಯವಾಗಿ ದೇಶದಾದ್ಯಂತ ಸಂಚರಿಸುವ ಹಕ್ಕು. ಇದು ಸ್ವಾತಂತ್ರ್ಯವೂ ಹೌದು. ಸಂಚರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಈ ಹಕ್ಕುಗಳಿಗೆ ಧಕ್ಕೆಯಾದರೆ ಸಂವಿಧಾನದ ಆಶಯಕ್ಕೇ ಧಕ್ಕೆಯಾದಂತೆ.

ಸಂವಿಧಾನ ದಿನಾಚರಣೆಯ ನೆಪದಲ್ಲಿ ಮೈಸೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಿಂದ ನಗರದ ಜನತೆ ನರಕಯಾತನೆ ಅನುಭವಿಸುವಂತಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಹಾಗೂ ರಾಮನಗರ ಭಾಗದಿಂದ ಸಾರಿಗೆ ಬಸ್ಸುಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ತುಂಬಿಸಿಕೊಂಡು ಬಂದಿದ್ದರು. ಆ ಜನರನ್ನು ಕರೆತಂದ ಸಾರಿಗೆ ಬಸ್ಸುಗಳನ್ನು ಚಾಮರಾಜಪುರಂ ಬಳಿ ನ್ಯಾಯಾಲಯದ ಸುತ್ತ ಮುತ್ತ ಇರುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿಲ್ಲಿಸಿದ್ದರಿಂದ ಕೋರ್ಟ್ ಸುತ್ತ ಮುತ್ತ ಸಂಚಾರ ವ್ಯವಸ್ಥೆ ಕುಲಗೆಟ್ಟು ಹೋಗಿತ್ತು.

ಸಂವಿಧಾನ ದಿನಾಚರಣೆಯ ನೆಪದಲ್ಲಿ ಸಹಸ್ರಾರು ಸಾರಿಗೆ ಬಸ್ಸುಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ತುಂಬಿಕೊಂಡು ಮೈಸೂರಿಗೆ ಕರೆತರುವ ಮುನ್ನ ಈ ಮಹಾನುಭಾವರು ತಯಾರಿ ಮಾಡಿಕೊಳ್ಳಲಿಲ್ಲವೇಕೆ? ಜನರನ್ನು ಕರೆತರುವ ಬಸ್ಸುಗಳ ಚಾಲಕರಿಗೆ ಯಾವುದೇ ತರಬೇತಿ ನೀಡಲಿಲ್ಲವೇಕೆ?. ನೂರಾರು ಸಾರಿಗೆ ಬಸ್ಸುಗಳು ಕೋರ್ಟ್ ಸುತ್ತಮುತ್ತ ಇರುವ ಚಾಮರಾಜಪುರಂ ರಸ್ತೆಗಳಲ್ಲಿ ಬಸ್ಸುಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಾಗ ಮೈಸೂರಿನ ನಾಗರಿಕರು ಅನುಭವಿಸಿದ ನರಕಯಾತನೆಯ ಅರಿವು ಈ ಮಹಾನುಭಾವರಿಗಿದೆಯೇ?.

ಈ ಅವೈಜ್ಞಾನಿಕ ಕಾರ್ಯಕ್ರಮದಿಂದ ನಾಗರಿಕರು ಅನುಭವಿಸಿದ ನರಕಯಾತನೆ ಹೇಗಿತ್ತು ಎಂದು ಅರಿಯಲು ಪೊಲೀಸ್ ಆಯುಕ್ತರು ಹೆಚ್ಚೇನೂ ತನಿಖೆ ಮಾಡಬೇಕಿಲ್ಲ. ಕೋರ್ಟ್ ಸುತ್ತ ಮುತ್ತ ಇದ್ದ ತಮ್ಮ ಪೊಲೀಸ್ ಸಿಬ್ಬಂದಿ ವಿಚಾರಿಸಿದರೆ ಸಾಕು.

ಸಂವಿಧಾನ ದಿನಾಚರಣೆಯ ನೆಪದಲ್ಲಿ ಇಂತಹ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಶಕ್ತಿ ಇಲ್ಲದಿರುವುದರಿಂದ ಅಂದು ನ್ಯಾಯಾಲಯ, ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಬಹುದಿತ್ತು. ಈ ಕಾರ್ಯಕ್ರಮದಿಂದ ಮೈಸೂರಿನ ನಾಗರಿಕರಿಗಾದ ಅನ್ಯಾಯಕ್ಕೆ ಕರ್ನಾಟಕ ಸರ್ಕಾರ, ಮೈಸೂರಿನ ಪೊಲೀಸ್, ಪಾಲಿಕೆ, ಪ್ರಾಧಿಕಾರದ ತ್ರಿವಳಿ ಆಯುಕ್ತರು, ಜಿಲ್ಲಾಧಿಕಾರಿ, ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಬೇಜವಾಬ್ದಾರಿಯೇ ಕಾರಣ.

ಅಂದು ರಾಮಸೇತು ಉಳಿಸುವಂತೆ ಆಗ್ರಹಿಸಿ ಸಣ್ಣಪುಟ್ಟ ಪ್ರತಿಭಟನೆ ಮಾಡಿದ ಪ್ರಜ್ಞಾವಂತ ನಾಗರಿಕರ ವಿರುದ್ಧ ರಸ್ತೆ ತಡೆ ಮಾಡಿದರೆಂದು ಆರೋಪಿಸಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ ಕೋರ್ಟ್ ಕಟಕಟೆ ಹತ್ತಿಸಿ ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದರು. ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ ಗಡಿಬಿಡಿಯಲ್ಲಿ ನಡೆಸಿ ನಾಗರಿಕರಿಗೆ ಹಿಂಸೆ ನೀಡಿದ ತಪ್ಪಿಗೆ ನಮ್ಮ ಪೊಲೀಸ್ ಆಯುಕ್ತರೂ ಈಗ ದಂಡ ತೆರಬೇಕಿದೆ.

ಕೋರ್ಟ್ ಸುತ್ತಮುತ್ತ ಇರುವ ಎಐ ಕ್ಯಾಮೆರಾಗಳು ಜೀವಂತವಾಗಿದ್ದರೆ ಅದರ ಸಹಾಯದಿಂದ ಪೊಲೀಸ್ ಆಯುಕ್ತರು ಈ ಯಡವಟ್ಟಿನ ದೃಶ್ಯಗಳನ್ನು ಸ್ವಯಂ ಪರಿಶೀಲಿಸಿ, ಸ್ವಯಂ ಪ್ರೇರಿತರಾಗಿ ತಮ್ಮ ವಿರುದ್ಧ ತಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸ್ವಯಂ ಶಿಕ್ಷೆ ಅನುಭವಿಸಲಿ.

- ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ರಕ್ಷಣೆಗೆ ಕರಾಟೆ ಅತ್ಯವಶ್ಯ: ಶಾಸಕ ದಿನಕರ ಶೆಟ್ಟಿ
ಕನಕದಾಸರ ಮಾನವೀಯ ಮೌಲ್ಯ ಪ್ರಸ್ತುತ