ಮೂರುಸಾವಿರ ಮಠದ ಆಸ್ತಿ ಕಂಡವರ ಪಾಲು?

KannadaprabhaNewsNetwork |  
Published : Feb 05, 2026, 02:30 AM IST
ಮೂಜಗು | Kannada Prabha

ಸಾರಾಂಶ

ಮೂರುಸಾವಿರ ಮಠದ ಸ್ವಾಮೀಜಿ ವಿರುದ್ಧ ಈ ಹಿಂದೆ ಹುಬ್ಬಳ್ಳಿಯಲ್ಲಿ ಆಸ್ತಿ ದುರುಪಯೋಗ ಮಾಡಿಕೊಂಡಿರುವ ಆರೋಪ ಇದ್ದು ನ್ಯಾಯಾಲಯದಲ್ಲಿ ಪ್ರಕರಣವಿದೆ. ಮೂರುಸಾವಿರಮಠದ ಆಸ್ತಿ ಕಂಡವರ ಪಾಲಾಗಿದೆ ಎನ್ನುವ ಆತಂಕ ಕೇಳಿ ಬರುತ್ತಿದೆ.

ಹುಬ್ಬಳ್ಳಿ:

ಆಸ್ತಿ ಮಾರಾಟ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ ಹಾನಗಲ್‌ ಕುಮಾರೇಶ್ವರ ಮಠದ ಸ್ವಾಮೀಜಿಯೂ ಆಗಿರುವ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ವಿರುದ್ಧ ಹಾನಗಲ್‌ನಲ್ಲಿ ಎಫ್‌ಐಆರ್‌ ದಾಖಲಾಗಿರುವುದು ಹುಬ್ಬಳ್ಳಿಯಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಶ್ರೀಗಳು ಭಕ್ತರಿಗೆ ಸಿಗುತ್ತಿಲ್ಲ.

ಸ್ವಾಮೀಜಿ ವಿರುದ್ಧ ಈ ಹಿಂದೆ ಹುಬ್ಬಳ್ಳಿಯಲ್ಲಿ ಆಸ್ತಿ ದುರುಪಯೋಗ ಮಾಡಿಕೊಂಡಿರುವ ಆರೋಪ ಇದ್ದು ನ್ಯಾಯಾಲಯದಲ್ಲಿ ಪ್ರಕರಣವಿದೆ. ಮೂರುಸಾವಿರಮಠದ ಆಸ್ತಿ ಕಂಡವರ ಪಾಲಾಗಿದೆ ಎನ್ನುವ ಆತಂಕ ಕೇಳಿ ಬರುತ್ತಿದೆ.

ಹಾನಗಲ್‌ನಲ್ಲಿ ಕುಮಾರೇಶ್ವರ ಮಠದ ಆಸ್ತಿ ಮಾರಾಟ ಮಾಡಿ ಹಣ ಬಳಸಿಕೊಳ್ಳಲಾಗಿದೆ ಎಂದು ಹಾನಗಲ್‌ ತಾಲೂಕಿನ ರವೀಂದ್ರ ಚಿಕ್ಕೇರಿ ದೂರು ನೀಡಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್‌ ದಾಖಲಾಗಿದೆ.

ಬರೀ ಹಾನಗಲ್‌ನಲ್ಲಿನ ಆ ಮಠದ ಆಸ್ತಿ ಮಾತ್ರವಲ್ಲದೆ ಹುಬ್ಬಳ್ಳಿ ಮೂರುಸಾವಿರ ಮಠದ ಆಸ್ತಿಯನ್ನೂ ಶ್ರೀಗಳು ಮಾರಾಟ ಮಾಡಿದ್ದಾರೆ. ಇಲ್ಲಿನ ಕುಸುಗಲ್‌ ರೋಡ್‌, ಗಬ್ಬೂರು ಸೇರಿದಂತೆ ಹಲವೆಡೆಯ ಆಸ್ತಿಗಳಲ್ಲಿ ಕೆಲವೊಂದಿಷ್ಟನ್ನು ಪರಭಾರೆ ಮಾಡಿದ್ದರೆ, ಕೆಲವೊಂದಿಷ್ಟನ್ನು ಮಾರಾಟ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಹಿಂದೆ ಶ್ರೀಗಳು ಮಾರಾಟ ಮಾಡಿರುವ ಆಸ್ತಿ ಇದೀಗ ಕೋಟ್ಯಂತರ ರೂಪಾಯಿ ಮೌಲ್ಯದಾಗಿದ್ದು, ಸಾವಿರದ ಲೆಕ್ಕದಲ್ಲಿ ಆಸ್ತಿ ಖರೀದಿಸಿದವರು ಇದೀಗ ಕೋಟ್ಯಾಧೀಶರಾಗಿದ್ದಾರೆ. ಅವರು ಆ ಆಸ್ತಿ ಮಾರಾಟ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ರಾಜ್ಯದಲ್ಲೇ ಶ್ರೀಮಂತ ಮಠಗಳ ಪೈಕಿ ಮೂರುಸಾವಿರಮಠವೂ ಒಂದಾಗಿತ್ತು. ಆದರೆ, ಇದೀಗ ಬೆರಳೆಣಿಕೆಯಷ್ಟು ಮಾತ್ರ ಆಸ್ತಿ ಉಳಿದುಕೊಂಡಿದೆ ಎಂಬುದು ಬೇಸರದ ಸಂಗತಿ ಎಂದು ಮಠದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ಭಕ್ತರೊಬ್ಬರು ಬೇಸರಿಸಿದ್ದಾರೆ.

ಹಾನಗಲ್‌ನಲ್ಲಿ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಹುಬ್ಬಳ್ಳಿಯಲ್ಲಿ ಭಕ್ತರಲ್ಲಿ ಚರ್ಚೆ ಹುಟ್ಟು ಹಾಕಿದೆ. ಶ್ರೀಗಳು ಭಕ್ತರಿಗೆ ದರ್ಶನ ನೀಡುತ್ತಿಲ್ಲ, ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಒಂದು ಬಾರಿ ಉತ್ತರಾಧಿಕಾರಿ ವಿವಾದ, ಮತ್ತೊಂದು ಬಾರಿ ಆಸ್ತಿ ದುರುಪಯೋಗದ ವಿಷಯದಲ್ಲಿ ಸದಾಕಾಲ ಸುದ್ದಿಯಲ್ಲಿರುತ್ತಾರೆ ಇಲ್ಲಿನ ಮೂರುಸಾವಿರ ಮಠದ ಶ್ರೀಗಳು.

ಮೂರುಸಾವಿರ ಮಠದ ಆಸ್ತಿ ಪರಭಾರೆ ಮಾಡಿರುವುದರ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ಕೇಸ್‌ ದಾಖಲಾಗಿದೆ. ವಿಚಾರಣೆ ಹಂತದಲ್ಲಿದೆ.

ಮಹಾಂತೇಶ ಗಿರಿಮಠ, ಭಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ