ಶಿವಕುಮಾರ ಕುಷ್ಟಗಿ
ಈ ವಸತಿ ನಿಲಯ ನಿರ್ಮಾಣವಾಗಿ 7 ವರ್ಷ ಕಳೆದಿದೆ. ಇದುವರೆಗೂ ಹಾಸ್ಟೆಲ್‌ಗೆ ತೆರಳಲು ರಸ್ತೆಯೇ ಇಲ್ಲ. ಪಕ್ಕದಲ್ಲಿಯೇ ಇರುವ ಉದ್ಯಾನವನದಲ್ಲಿಯೇ ಹಾಯ್ದು ಬರಬೇಕು. ಅಧಿಕಾರಿಗಳ ಜೀಪು ಇಲ್ಲಿಗೆ ಬರದೇ ಹಲವಾರು ವರ್ಷಗಳೇ ಕಳೆದಿದ್ದು, ಇಲ್ಲಿಗೆ ಬರುವವರು ನಡೆಯುವುದು ಅನಿವಾರ್ಯ.
180 ವಿದ್ಯಾರ್ಥಿಗಳು: ಪ್ರಸ್ತುತ ಈ ಹಾಸ್ಟೆಲ್‌ನಲ್ಲಿ 180 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ನಿತ್ಯವೂ ಬೇಕಾಗುವ ಆಹಾರ ಸಾಮಗ್ರಿಗಳನ್ನು ಸಿಬ್ಬಂದಿ ದೂರದಲ್ಲಿರುವ ಮುಖ್ಯ ರಸ್ತೆಯಿಂದ ಹೊತ್ತು ತರಬೇಕಾದ ಅನಿವಾರ್ಯತೆ ಇದೆ.ಮನವಿಗೆ ಸ್ಪಂದನೆ ಇಲ್ಲ: ಹಾಸ್ಟೆಲ್‌ಗೆ ತೆರಳಲು ರಸ್ತೆ ಇಲ್ಲದೇ ಇರುವ ಕುರಿತು ಅಧಿಕಾರಿಗಳು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸ್ಪಂದಿಸಬೇಕಾದ ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು.ಅಸಹಕಾರ: ಹಾಸ್ಟೆಲ್‌ನ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳು ಸಂಚಾರಕ್ಕೆ ದಾರಿ ಕೊಡದೆ ಹಾಸ್ಟೆಲ್ ಅಧಿಕಾರಿಗಳಿಗೆ, ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
ಕೇಂದ್ರ ಕಚೇರಿಗೂ ಪತ್ರ: ರಸ್ತೆ ತೊಂದರೆ ಕುರಿತು ಈಗಾಗಲೇ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ನಗರಸಭೆ ಅಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತರಲಾಗಿದೆ. ಕೇಂದ್ರ ಕಚೇರಿಗೂ ಪತ್ರ ಬರೆಯಲಾಗಿದೆ ಎಂದು ಅಲ್ಪಸಂಖ್ಯಾತ ಇಲಾಖೆಯ ತಾಲೂಕು ಅಧಿಕಾರಿ ಶರಣಪ್ಪ ಗೊರೇಬಾಳ ತಿಳಿಸಿದರು.