ರಮೇಶ್ ಬಿದರಕೆರೆ
ನೆರೆಯ ಆಂಧ್ರಪ್ರದೇಶ ಸಂಪರ್ಕಿಸುವ ರಸ್ತೆಯ ಸೇತುವೆಯೊಂದು ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಒಂದಿಷ್ಟು ಮಣ್ಣು ಹರಡಿ ಸುಮ್ಮನಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಒಬೇನಹಳ್ಳಿ ಗೇಟ್ ಮತ್ತು ದೇವರಕೊಟ್ಟದ ಮಧ್ಯೆ ಹರಿಯುವ ವೇದಾವತಿ ನದಿಗೆ 84 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಕಟ್ಟಿಸಿದ್ದ ಸೇತುವೆ ದುಸ್ಥಿತಿ ತಲುಪಿದ್ದು, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸೇತುವೆಯ ಗುಣಮಟ್ಟ, ಸದ್ಯದ ಸ್ಥಿತಿ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಿ ಹೋಗಿದ್ದಾರೆ.ಈ ಸೇತುವೆ ಮೇಲೆ ರಾಜ್ಯ ಹೆದ್ದಾರಿ ಹಾದುಹೋಗಿದ್ದು, ಈ ರಸ್ತೆ ಶಿರಾ, ಅಮರಾಪುರ, ಪಾವಗಡ, ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮೊನ್ನೆ ಹಿಡಿದ ಜಡಿ ಮಳೆಗೆ ಸೇತುವೆ ಮೇಲಿನ ಗುಂಡಿಗಳು ತಮ್ಮ ವಿಸ್ತಾರ ಹೆಚ್ಚಿಸಿಕೊಂಡಿದ್ದು ಸೇತುವೆಯ ಕೊನೆ ಭಾಗದ ಒಂದು ಮಗ್ಗುಲಲ್ಲಿ ಮಣ್ಣು ಜರುಗಿ ಆತಂಕ ಸೃಷ್ಟಿಸಿತ್ತು.
ಬೈಕ್ ಸವಾರರು ಸೇತುವೆ ಮೇಲೆ ಗುಂಡಿ ತಪ್ಪಿಸಲು ಪರದಾಡುವ ಸ್ಥಿತಿ ಇದ್ದು, ಮೊನ್ನೆ ಬಿದ್ದ ಮಳೆಗೆ ಮಣ್ಣು ಜರುಗಿದ ನಂತರ ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ ಒಂದಿಷ್ಟು ಮಣ್ಣು ಹರಡಿಸಿ ರಸ್ತೆಯ ನೀರು ಸೇತುವೆ ಮೇಲೆ ಹರಿಯದಂತೆ ಬೇರೆ ಕಡೆ ಹೋಗುವಂತೆ ಚಿಕ್ಕದಾಗಿ ತಗ್ಗು ಮಾಡಿ ಇನ್ನೇನು ತೊಂದರೆಯಿಲ್ಲ ಎಂಬಂತೆ ಹೊರಟು ಹೋಗಿದ್ದಾರೆ. ಸೇತುವೆ ಪಕ್ಕದ ಮಣ್ಣು ಕುಸಿದಿರುವುದೇ ಸೇತುವೆ ಯಾವ ಅಪಾಯದಲ್ಲಿದೆ ಎಂದು ಹೇಳುತ್ತದೆ.
ವಿವಿ ಸಾಗರ ಜಲಾಶಯ 2022 ರಲ್ಲಿ ತುಂಬಿ ಕೋಡಿ ಬಿದ್ದಾಗಿನಿಂದಲೂ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬೆಳಗೆರೆಯವರೊಬ್ಬರು ಇದೇ ಸೇತುವೆಯ ಪಕ್ಕದಿಂದ ನೀರಿಗಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ದೇವರಕೊಟ್ಟ ಕಡೆಯ ಸೇತುವೆಯ ಒಂದು ಭಾಗದಲ್ಲಿ ಮಣ್ಣು ಕುಸಿದಿದೆ ಎಂದು ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದಾಗ ಅಧಿಕಾರಿಗಳು ಹೋಗಿ ಆ ಭಾಗಕ್ಕೊoದಿಷ್ಟು ಮಣ್ಣು ಅಡ್ಡ ಹಾಕಿ ಬಂದಿದ್ದಾರೆ.
ತೋರೆ ಓಬೇನಹಳ್ಳಿ ಗೇಟ್ ಬಳಿ ಸೇತುವೆ ಮೂಲೆಯಲ್ಲಿ ಮಣ್ಣು ಕುಸಿದಿದ್ದು ಕೂಡಲೇ ಹೊಸದಾಗಿ ಮಣ್ಣು ಸುರಿದು ಸರಿ ಮಾಡಲಾಗಿದೆ. ಮುಂದೆ ಮಳೆ ಮುಗಿದ ನಂತರ ಕುಸಿದ ಜಾಗದಲ್ಲಿ ಕಾಂಕ್ರೀಟ್ ಗೋಡೆ ಕಟ್ಟಿ ಇನ್ನೂ ಸ್ವಲ್ಪ ಮಣ್ಣು ಹಾಕಿ ರೀವಿಟ್ಮೆಂಟ್ ಕಟ್ಟಲಾಗುತ್ತದೆ. ಈಗ ಯಾವುದೇ ತೊಂದರೆ ಇಲ್ಲ. ಮೇಲಿನಿಂದ ಬರುವ ಮಳೆ ನೀರನ್ನು ಬೇರೆ ಕಡೆಯಿಂದ ಚರಂಡಿಗೆ ಬಿಡಲಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ.