ಎಲ್ಲ ಕಂಬಗಳಿಗೂ ಎಲ್ಇಡಿ ಅಳವಡಿಕೆ ಯಾವಾಗ?

KannadaprabhaNewsNetwork |  
Published : Apr 19, 2026, 02:15 AM IST
ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬೀದಿದೀಪಗಳು.. | Kannada Prabha

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂಬುದು ಜನರ ಆರೋಪ. ವ್ಯಾಪಕ ಪ್ರಮಾಣದ ಕಳ್ಳತನ ಪ್ರಕರಣಗಳು ವರದಿಯಾಗಿದ್ದರೂ ಬೀದಿದೀಪ ಅಳವಡಿಕೆಗೆ ನಗರಸಭೆ ಆಸಕ್ತಿ ತೋರುತ್ತಿಲ್ಲವಂತೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂಬುದು ಜನರ ಆರೋಪ.

ಇನ್ನಾರೋ ಬಂದು ಎಲ್ಇಡಿ ಲೈಟ್ ಅಳವಡಿಸುತ್ತಾರೆ ಎನ್ನುವ ಧೋರಣೆ ಇದ್ದಂತೆ ಕಾಣುತ್ತದೆ. ಇಡೀ ನಗರ ಕತ್ತಲೆಯಲ್ಲಿ ಇಟ್ಟಿದ್ದಾರೆ. ವ್ಯಾಪಕ ಪ್ರಮಾಣದ ಕಳ್ಳತನ ಪ್ರಕರಣಗಳು ವರದಿಯಾಗಿದ್ದರೂ ಬೀದಿದೀಪ ಅಳವಡಿಕೆಗೆ ನಗರಸಭೆ ಆಸಕ್ತಿ ತೋರುತ್ತಿಲ್ಲವಂತೆ.

ಬೀದಿದೀಪಗಳಿಗೆ ಬೇಕಾಗುವ ಲೈಟ್ ಖರೀದಿ ವಿಷಯದಲ್ಲಿ ನಗರಸಭೆಯ ಅಧಿಕಾರಿಗಳು ತೀವ್ರ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಅನುದಾನ ಲಭ್ಯವಿದ್ದರೂ ಗಮನ ಹರಿಸುತ್ತಿಲ್ಲ. ಬದಲಾಗಿ ಸಾರ್ವಜನಿಕರಿಂದ ವ್ಯಾಪಕವಾದ ದೂರುಗಳು ಕೇಳಿ ಬಂದ ನಂತರದಲ್ಲಿ ಇದಕ್ಕಾಗಿಯೇ ವಿಶೇಷ ಪ್ರಸ್ತಾವನೆ ಸಿದ್ಧಪಡಿಸಿ, ಅನುಮೋದನೆ ಪಡೆದು, ಹೊಸ ಟ್ಯೂಬ್‌ಲೈಟ್‌ ಅಳವಡಿಸುವ ಚಿಂತನೆಯಲ್ಲಿದ್ದಾರೆ.

ಸಿಸಿಎಂಎಸ್ ಹೆಸರಿನಲ್ಲಿ ವಿಳಂಬ: 2019ರಲ್ಲಿಯೇ ಗದಗ ಅವಳಿ ನಗರದಲ್ಲಿ ಕೇಂದ್ರೀಕೃತ ಎಲ್ಇಡಿ ಬಲ್ಬ್ ಅಳವಡಿಕೆ ಯೋಜನೆ ರೂಪಿಸಲಾಗಿದೆ. ಇದೇ ನೆಪದಲ್ಲಿ ನಗರಸಭೆಯ ಅಧಿಕಾರಿಗಳು ಇದುವರೆಗೂ ಅವಳಿ ನಗರದಲ್ಲಿಯೂ ಯಾವುದೇ ಹೊಸ ಬೀದಿದೀಪಗಳನ್ನು ಅಳವಡಿಸಿಲ್ಲ. ಇನ್ನು ಇರುವ ಹಳೆಯ ಟ್ಯೂಬ್‌ಲೈಟ್‌ಗಳು ಹಾಳಾದಲ್ಲಿ ಬದಲಾಯಿಸಲು ಹೊಸ ಟ್ಯೂಬ್‌ಲೈಟ್ ಖರೀದಿಯನ್ನೇ ಮಾಡಿಲ್ಲ. ಈ ಬಗ್ಗೆ ಕೇಳಿದರೆ ಸದ್ಯದಲ್ಲಿಯೇ ಸಿಸಿಎಂಎಸ್ ಆಗುತ್ತದೆ, ಹೊಸ ಎಲ್ಇಡಿ ಬಲ್ಬ್‌ಗಳ ಬರುತ್ತವೆ ಎಂದು ಹೇಳುತ್ತಲೇ ಇದ್ದಾರೆ. ಜನರಿಗೆ 5 ವರ್ಷಗಳಿಂದ ಇದೇ ಉತ್ತರ ಸಿಗುತ್ತಿದೆ.

ನಿರ್ವಹಣೆ ಮಾತ್ರ ಇದೆ: ಸಧ್ಯ ಅವಳಿ ನಗರದಲ್ಲಿರುವ ಎಲ್ಲ ಬೀದಿದೀಪಗಳ ನಿರ್ವಹಣೆ ಗುತ್ತಿಗೆ ಬೇರೆ ಜಿಲ್ಲೆಯ ಕಂಪನಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಕಂಪನಿ ಕೇವಲ ರಿಪೇರಿ ಮಾತ್ರ ಮಾಡುತ್ತಿದ್ದು, ಒಂದೊಮ್ಮೆ ಟ್ಯೂಬ್‌ಲೈಟ್ ಕೆಟ್ಟು ಹೋದಲ್ಲಿ ಹೊಸದು ಹಾಕಲು ನಮಗೆ ಅವಕಾಶವಿಲ್ಲ ಎಂದು ಹೇಳಿ, ಸಂಪೂರ್ಣ ಕೆಟ್ಟು ಹೋಗಿರುವ ಟ್ಯೂಬ್‌ಲೈಟ್ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಬಂದ್ ಆದ ಲೈಟ್‌ಗಳನ್ನು ಹೊಸದಾಗಿ ಹಾಕಿಯೇ ಇಲ್ಲ. ಹಾಗಾಗಿ ಅವಳಿ ನಗರದ ಹೊರವಲಯದಲ್ಲಿ ಇರುವ ಹಲವಾರು ಬಡಾವಣೆಗಳಲ್ಲಿ ಸಂಪೂರ್ಣ ಕತ್ತಲು ಉಂಟಾಗಿ ರಾತ್ರಿಯಾಗುತ್ತಿದಂತೆ ಮನೆಯಿಂದ ಆಚೆ ಬರಲು ಸಾರ್ವಜನಿಕರು ಹೆದರುವಂತಾಗಿದೆ.

ಬೀದಿದೀಪ ಅಳವಡಿಸಿ: ಗದಗ ನಗರದ ಸಂಭಾಪುರ ರಸ್ತೆಯಲ್ಲಿರುವ ಪುಟ್ಟರಾಜ ನಗರದಲ್ಲಿ ಕಳೆದ ವಾರ ಕಳ್ಳರ ನಾಲ್ಕೈದು ಮನೆಗಳನ್ನು ಕಳ್ಳತನ ಮಾಡಿದ್ದಾರೆ. ಯಾವ ಮನೆಗಳ ಮುಂದೆ ಬೀದಿದೀಪಗಳು ಇಲ್ಲವೋ ಅದೇ ಮನೆಗಳನ್ನೇ ಕಳ್ಳತನ ಮಾಡಿದ್ದಾರೆ. ಕಳ್ಳರ ಓಡಾಡುವ ದೃಶ್ಯ ಹಲವಾರು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿದೆ. ನಗರಸಭೆಯ ಅಧಿಕಾರಿಗಳು ಕೂಡಲೇ ಸಮರ್ಪಕ ಬೀದಿಗಳನ್ನು ಅಳವಡಿಸಬೇಕಿದೆ ಎಂದು ಪುಟ್ಟರಾಜ ನಗರ ನಿವಾಸಿಗಳಾದ ಅಂದಪ್ಪ ಬಿಂಗಿ, ಎಸ್.ಎಂ. ಮುಧೋಳ ಹೇಳುತ್ತಾರೆ.

ಪ್ರಸ್ತುತ ಅವಳಿ ನಗರದ ಬೀದಿದೀಪಗಳ ನಿರ್ವಹಣೆ ಮಾಡಲಾಗುತ್ತಿದೆ. ಕೆಲವೆಡೆ ಸಮಸ್ಯೆಯಾಗಿರುವುದು ಗೊತ್ತಾಗಿದೆ. ಈ ಕುರಿತು ನಮ್ಮ ಬೀದಿದೀಪ ನಿರ್ವಹಣಾ ವಿಭಾಗದ ಸಿಬ್ಬಂದಿ ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗದಗ ನಗರಸಭೆ ಅಭಿಯಂತರ ಲಕ್ಷ್ಮಣ ಎಂ.ಜೆ. ಹೇಳಿದರು.

ಲೈಟ್‌ಗಳ ವಿವರ: ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 20ರಿಂದ 40 ವ್ಯಾಟ್‌ನ 7353 ಟ್ಯೂಬ್‌ಲೈಟ್‌ಗಳಿವೆ. 150 ವ್ಯಾಟ್ (ಎಸ್ಎಲ್ವಿ) 459 ಇವೆ. 250 ವ್ಯಾಟ್ (ಎಸ್ಎಲ್ವಿ) 2453 ಇವೆ. 250 ವ್ಯಾಟ್ (ಮರ್ಕ್ಯೂರಿ) 796 ಇವೆ. 400 ವ್ಯಾಟ್‌ನ ಮರ್ಕ್ಯೂರಿ 534 ಹೊಂದಿದೆ. ಎಲ್ಇಡಿ 25 ವ್ಯಾಟ್ ಸಾಮರ್ಥ್ಯದ 1154, ಎಲ್ಇಡಿ 40ರಿಂದ 50 ವ್ಯಾಟ್ 1219, ಎಲ್ಇಡಿ 65ರಿಂದ 75 ವ್ಯಾಟ್‌ನ 427 ಹಾಗೂ 150 ವ್ಯಾಟ್ ಹೈ ಮಾಸ್ಟ್ 391 ಬೀದಿದೀಪಗಳು ಸೇರಿದಂತೆ ಅವಳಿ ನಗರಾದ್ಯಂತ ಒಟ್ಟು 14,786 ವಿದ್ಯುತ್ ದೀಪಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಂಡ್ ಪವರ್ ಕಾಟಕ್ಕೆ ಬೇಸತ್ತು ಹೈಟೆನ್ಷನ್ ಕಂಬ ಏರಿದ ರೈತ
ತುಂಗಭದ್ರಾ ಒಡಲು ಬಗೆದು, ಮರಳು ದಂಧೆ