ಕರಡಿ ಮಾನವ ಸಂಘರ್ಷ ನಿಲ್ಲುವುದು ಯಾವಾಗ ?

KannadaprabhaNewsNetwork |  
Published : Mar 01, 2026, 02:30 AM IST
ಬಜೆಟ್ ನಿರೀಕ್ಷೆ ಕುರಿತ ವರದಿಗೆ ಫೋಟೋಗಳು  | Kannada Prabha

ಸಾರಾಂಶ

ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದ್ದರೂ ಇನ್ನೂ ಕೆರೆಗಳಿಗೆ ನೀರುಣಿಸುವ ಕಾರ್ಯ ತುರ್ತಾಗಿ ಬರುವ ಮಳೆಗಾಲದಲ್ಲಿ ಮಾಡಬೇಕಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕು ಬರಪೀಡಿತ ಪ್ರದೇಶವಾಗಿದ್ದರೂ ಸಹ ಈ ನೆಲದ ಇತಿಹಾಸ, ಚರಿತ್ರೆಯಿಂದಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಕೂಡ್ಲಿಗಿ ತಾಲೂಕು ಶಿಲಾಪದರವು ಧಾರವಾಡ ಶಿಲಾಸ್ತೋಮ ಮಾದರಿ ಹೊಂದಿದೆ. ವಾರ್ಷಿಕ ಸರಾಸರಿ 600 ಮಿ.ಮೀ. ಮಳೆ ಬೀಳುವ ಪ್ರದೇಶವಾಗಿದೆ. ಇದಲ್ಲದೇ ಏಷ್ಯಾಖಂಡದಲ್ಲಿಯೇ 2ನೇ ಅತೀ ದೊಡ್ಡ ಕರಡಿಧಾಮ ಗುಡೇಕೋಟೆಯಲ್ಲಿದ್ದು, ಅತೀ ಹೆಚ್ಚು ಕಪ್ಪು ಕರಡಿಗಳನ್ನು ಹೊಂದಿರುವ ಪ್ರದೇಶವೂ ಇದಾಗಿದೆ.

ತಾಲೂಕಿನ ಗುಡೇಕೋಟೆಯ ವಿಶಾಲ ಅರಣ್ಯದಲ್ಲಿ ಕರಡಿಗಳೇ ಹೆಚ್ಚು ವಾಸಿಸುತ್ತಿದ್ದರಿಂದ ರಾಜ್ಯ ಅರಣ್ಯ ಇಲಾಖೆ ೨೦೧೩ ರಂದು ಗುಡೇಕೋಟೆಯ ೪೭೬೧ ಹೆಕ್ಟೇರ್ ಅರಣ್ಯವನ್ನು ಏಷ್ಯಾ ಖಂಡದ ೨ನೇ ಕರಡಿಧಾಮ ಎಂದು ಘೋಷಿಸಲಾಯಿತು. ನಂತರ ೨೦೧೯-೨೦ರಲ್ಲಿ ೧೨ ಸಾವಿರ ಹೆಕ್ಟೇರ್ ಪ್ರದೇಶವನ್ನು ಹೆಚ್ಚುವರಿಯಾಗಿ ಕರಡಿಧಾಮಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ ಕರಡಿಗಳ ಶಂಕಿತ ಸಾವು, ಕರಡಿ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆದುಕೊಂಡು ಬಂದರೂ ಯಾರೂ ಕರಡಿಗಳ, ರೈತರ ರಕ್ಷಣೆಗೆ ಮುಂದೆ ಬರುತ್ತಿಲ್ಲ. ಶಿಲಾಯುಗ ಕಾಲಮಾನದಲ್ಲಿ ಮಾನವನು ವಾಸಿಸುವ ಕುರುಹುಗಳನ್ನು ಕೂಡ್ಲಿಗಿ ತಾಲೂಕಿನ ಕುಮತಿ ಮತ್ತು ಹುಲಿಕುಂಟೆ ಗ್ರಾಮಗಳ ಹೊರವಲಯದಲ್ಲಿ ಕಾಣಬಹುದು. ಇದು ಶಿಲಾಯುಗ ಕಾಲದ ಭಾರತ ಇತಿಹಾಸವನ್ನು ಸಾಕ್ಷೀಕರಿಸುವ ಪ್ರಬಲ ಐತಿಹಾಸಿಕ ಆಧಾರಗಳಾಗಿವೆ. ಇವುಗಳನ್ನು ಸ್ಥಳೀಯರ ನಿಲುವುಗಲ್ಲುಗಳು ರಕ್ಕಸಗಲ್ಲುಗಳು ಎಂದು ಕರೆಯುತ್ತಾರೆ. ಈ ನಿಲುವುಗಲ್ಲುಗಳು ಮಾತ್ರ ಕುರಿ, ದನಗಾಹಿಗಳು ಆಟವಾಡುವ ಬೊಂಬೆಗಳಾಗಿ ಒಂದೊಂದಾಗಿ ಅಳಿಯತ್ತಾ ಬರುತ್ತಿದ್ದು, ಈ ಸ್ಮಾರಕಗಳಿಗೆ ರಕ್ಷಣೆ ನೀಡಲು ಈ ಬಜೆಟ್ ನಲ್ಲಿ ಸೇರಿಸಲು ಸ್ಥಳೀಯ ಶಾಸಕರು ಮುಂದಾಗಬೇಕಿದೆ.

ಪಟ್ಟಣದಲ್ಲಿರುವ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಅಭಿವೃದ್ಧಿಯಾದರೂ ಪ್ರವಾಸಿತಾಣವಾಗಿಲ್ಲ. ಕೂಡ್ಲಿಗಿ ತಾಲೂಕಿನಲ್ಲಿ ಜರ್ಮಲಿ, ಗುಡೇಕೋಟೆ, ಹಾಗೂ ವೀರನದುರ್ಗ ಪಾಳೇಗಾರರು ಆಳಿದ ಕುರುಹುಗಳು, ಕೋಟೆ ಕೊತ್ತಲಗಳಲ್ಲಿ ನಿಧಿಗಾಗಿ ಅಗೆತ ನಿರಂತರವಾಗಿದ್ದು ರಕ್ಷಣೆ ನೀಡಿದರೆ ಮಾತ್ರ ಇವುಗಳ ಉಳಿವು ಸಾಧ್ಯ. ಕಲ್ಲುಸೀಮೆಯ ಕಾಶಿ ಎಂದೇ ಜನಪ್ರಿಯವಾಗಿರುವ ತಾಲೂಕಿನ ಗಡಿಗ್ರಾಮ ಕಾನಾಮಡಗು ಶರಣಬಸವೇಶ್ವರ ಸ್ವಾಮಿಯ ಮಠದಲ್ಲಿ ಇಂದಿಗೂ ಸರಿಹೊತ್ತಿನಲ್ಲೂ ಹಸಿದು ಬಂದವರಿಗೆ ಅನ್ನಹಾಕುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದು ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಕಾಶಿಯೂ ಆಗಿದೆ. ಆದರೆ ಇವಾವು ಪ್ರವಾಸಿತಾಣವಾಗದಿರುವುದು ವಿಪರ್ಯಾಸ.

ತಾಲೂಕಿನ ಮನೆ ಮಗಳಾದ ಒನಕೆ ಓಬವ್ವೆಯ ಉತ್ಸವವನ್ನು ಇತ್ತೀಚೆಗೆ ಕೂಡ್ಲಿಗಿ ಶಾಸಕರು ಮಾಡಲು ಮುಂದಾಗಿದ್ದರೂ ಮತ್ತಷ್ಟು ಅರ್ಥಪೂರ್ಣವಾಗಿ ಮಾಡಬೇಕಿದೆ. ಗುಡೇಕೋಟೆಯಲ್ಲಿ ಏಷ್ಯಾದ 2ನೇ ಅತೀ ದೊಡ್ಡ ಕರಡಿಧಾಮವಾಗಿದ್ದರೂ ಇಲ್ಲಿವರೆಗೂ ಈ ಕರಡಿಧಾಮದಲ್ಲಿ ಕರಡಿಗಳಿಗೇ ರಕ್ಷಣೆ ಸಿಗುತ್ತಿಲ್ಲ. ಪ್ರವಾಸಿಗರು ಈ ಕರಡಿಧಾಮ ನೋಡಲು ಆಗುತ್ತಿಲ್ಲ. ಗುಣಸಾಗರದಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಾಣವಾದಂತ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕೖಷ್ಣ ಕೊಳಲನೂದುತ್ತ ನಿಂತಿರುವ ಸುಂದರ ಮೂರ್ತಿ ಇದೆ. ಚಿಕ್ಕಜೋಗಿಹಳ್ಳಿ ಇಡೀ ರಾಜ್ಯದ ಮೊದಲ ಮಾದರಿ ಗ್ರಾಮವಾಗಿದೆ. ಗಜಾಪುರ ಬಳಿ ವಿಜಯನಗರ ಕಾಲದ ವಸಂತ ಮಲ್ಲಿಕಾರ್ಜುನ ದೇವಾಲಯ ಮೇಲುಕೋಟೆ ಮುಖಮಂಟಪ ನಾಚಿಸುವ ರೀತಿಯಲ್ಲಿದೆ. ಆದರೆ ಇವೆಲ್ಲವೂ ರಕ್ಷಣೆ ಇಲ್ಲದೇ ಅನಾಥವಾಗಿದೆ. ತಾಲೂಕಿನಲ್ಲಿ ಶೇಂಗಾ, ಮೆಕ್ಕೆಜೋಳ ಮುಖ್ಯ ವಾಣಿಜ್ಯ ಬೆಳೆಗಳಾಗಿದ್ದು ಉಳಿದಂತೆ ರಾಗಿ, ಜೋಳ, ತೊಗರಿ, ಹತ್ತಿ, ದ್ವಿದಳ ಧಾನ್ಯಗಳ್ನು ಬೆಳೆಯುತ್ತಾರೆ. ಆದರೆ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಚಿನ್ನಹಗರಿ ಉಪನದಿ ಹರಿಯುತ್ತಿದೆ. ಈ ನದಿ ಪಾತ್ರದಲ್ಲಿ ಆದಿ ಮಾನವರ ವಾಸದ ಯೋಗ್ಯ ನೆಲೆಯಾಗಿತ್ತು. ಅಲ್ಲದೆ, ಹಳೆ ಶಿಲಾಯುಗ, ಸೂಕ್ಷ್ಮ ಶಿಲಾಯುಗ, ಬೃಹತ್ ಶಿಲಾಯುಗ ಕಾಲಘಟ್ಟದ ಜನರು ಈ ಭಾಗದಲ್ಲಿ ವಾಸಿಸಿ ಬಿಟ್ಟುಹೋದ ಕುರುಹುಗಳನ್ನು ಪ್ರಾಗೈತಿಹಾಸಿಕ ಪಿತಾಮಹ ರಾಬರ್ಟ್ ಭ್ರೂಸ್‌ಪುಟ್ ಈ ಭಾಗದಲ್ಲಿ ಬಂದು ಅಧ್ಯಯನ ಮಾಡಿದ್ದಾರೆ. ಕೂಡ್ಲಿಗಿಯಲ್ಲಿ ಹಂಪಿಯ ಕಲ್ಲಿನ ರಥದಂತೆ ಮತ್ತೊಂದು ಪುಟ್ಟ ರಥ ಕೂಡ್ಲಿಗಿಯ ಊರಮ್ಮ ದೇವಸ್ಥಾನದ ಹತ್ತಿರ ಇದೆ. ಇವೆಲ್ಲವಕ್ಕೂ ಬಜೆಟ್ ನಲ್ಲಿ ರಕ್ಷಣೆ ನೀಡಲು ಮುಂದಾಗಬೇಕಿದೆ.

ನಾಲ್ಕೈದು ತಲೆಮಾರಿನಿಂದ ನೂರಾರು ರಂಗ ನಟಿಯರು ಕೂಡ್ಲಿಗಿ ಪಟ್ಟಣ ಮತ್ತು ವಿರುಪಾಪುರ ಗ್ರಾಮದಲ್ಲಿದ್ದಾರೆ. ಇಡೀ ರಾಜ್ಯದಲ್ಲಿಯೇ ರಂಗನಟಿಯರ ತವರೂರು ಎಂದು ಕೂಡ್ಲಿಗಿಯನ್ನು ಕರೆಯುತ್ತಾರೆ. ಆದರೆ ಇಲ್ಲಿಯ ರಂಗನಟಿಯರ ಬದುಕು ಅತಂತ್ರವಾಗಿದ್ದು, ಇವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದ್ದರೂ ಇನ್ನೂ ಕೆರೆಗಳಿಗೆ ನೀರುಣಿಸುವ ಕಾರ್ಯ ತುರ್ತಾಗಿ ಬರುವ ಮಳೆಗಾಲದಲ್ಲಿ ಮಾಡಬೇಕಿದೆ.

ಕೂಡ್ಲಿಗಿ ತಾಲೂಕಿನ ಮನೆಮಗಳು ಒನಕೆ ಓಬವ್ವ ಉತ್ಸವ ಮಾಡುವುದರ ಮೂಲಕ ಇತಿಹಾಸ ಪುನರ್ ನಿರ್ಮಾಣ ಮಾಡಲಾಗಿದೆ. 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಳಿಸಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದೇನೆ. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಹಂತ ಹಂತವಾಗಿ ಕೂಡ್ಲಿಗಿ ತಾಲೂಕಿನ ಇತಿಸಾಸ ಉಳಿಸುವ ಕಾರ್ಯ ಮಾಡಲಾಗುವುದು ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ