ಅಗ್ನಿಶಾಮಕ ದಳ ಕಟ್ಟಡ ಕಾರ್ಯಾರಂಭ ಯಾವಾಗ?

KannadaprabhaNewsNetwork | Published : Oct 26, 2024 1:06 AM

ಸಾರಾಂಶ

ಹನಗಂಡಿ ಸರ್ವೆ ನಂ.೧೩/ಅ ನಲ್ಲಿ ತೇರದಾಳ ಅಗ್ನಿಶಾಮಕ ದಳಕ್ಕೆ ಹಿಂದಿನ ಸರ್ಕಾರ ಎರಡು ಎಕರೆ ಜಾಗ ನೀಡಿದ್ದು, ಕಟ್ಟಡ ಮಂಜುರಾತಿ ಇಲ್ಲದೆ ಅನಾಥವಾಗಿ ನಿಂತಿರುವ ಇಲಾಖೆ ನಾಮಫಲಕ.

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ

ತೇರದಾಳ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ನಾಲ್ಕು ವರ್ಷದ ಬಳಿಕ ಅಗ್ನಿಶಾಮಕ ದಳ ಮಂಜೂರಾಗಿದೆ. ಕಟ್ಟಡ ನಿರ್ಮಿಸಲು ಸ್ಥಳ ಮಂಜೂರಾತಿಗೆ ಎರಡು ವರ್ಷಗಳನ್ನು ತೆಗೆದುಕೊಂಡರೂ, ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಪೂರ್ಣಗೊಳಿಸಲು ಸರ್ಕಾರ ಮನಸು ಮಾಡದೇ ಇರುವುದರಿಂದ ಅಗ್ನಿಶಾಮಕ ದಳದ ಕಾರ್ಯಾರಂಭ ಯಾವಾಗ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ತೇರದಾಳ ತಾಲೂಕು ಕೇಂದ್ರ ಎಂದು ಘೋಷಣೆಗೊಂಡ ಬಳಿಕ ಮೊದಲು ಅಗ್ನಿಶಾಮಕ ದಳ ಮಂಜೂರಾಯಿತು. ತಾತ್ಕಾಲಿಕವಾಗಿ ಅಗ್ನಿಶಾಮಕ ದಳ ಪ್ರಾರಂಭಿಸಲು ಇಲಾಖೆ ಮೇಲಾಧಿಕಾರಿಗಳಿಗೆ ಪಟ್ಟಣದ ಮುಖಂಡರು ಪಟ್ಟಣದಲ್ಲಿನ ಹಲವು ಜಾಗ ತೋರಿಸಿದರು. ಆದರೆ ಅಧಿಕಾರಿಗಳು ಜಾಗ ಚಿಕ್ಕದಾಗುತ್ತದೆ ಎಂದು ಕೈ ಬಿಟ್ಟರು. ಮೊದಲು ಸರ್ಕಾರದಿಂದ ಜಾಗ ಮಂಜೂರಾತಿ ಮಾಡಿಸಿ ಬಳಿಕ ಕಟ್ಟಡಕ್ಕೆ ಅನುದಾನ ಬರುತ್ತದೆ ಎಂದು ಸಲಹೆ ನೀಡಿದ್ದರಿಂದ ಪಟ್ಟಣದ ಬಿಜೆಪಿ ಮುಖಂಡರು ಶಾಸಕ ಸಿದ್ದು ಸವದಿಗೆ ದುಂಬಾಲು ಬಿದ್ದು ಅಗ್ನಿಶಾಮಕ ದಳಕ್ಕೆ ಜಾಗ ನೀಡಬೇಕೆಂದು ಹಠ ಹಿಡಿದರು. ಶಾಸಕರು ಕೂಡ ಸರ್ಕಾರದ ಮೇಲೆ ಒತ್ತಡ ಹೇರಿ ಹನಗಂಡಿ ಗ್ರಾಮದ ಸರ್ವೆ ನಂ.೧೩/ಅ ನಲ್ಲಿ ಎರಡು ಎಕರೆ ಜಾಗವನ್ನು ೨೦೨೨ರ ಅಕ್ಟೋಬರ್‌ ೨೭ರಂದು ಮಂಜೂರಾತಿ ಮಾಡಿಸಿದ್ದಾರೆ.

ನಾಮಫಲಕ ಅನಾಥ:

ಭದ್ರಗಿರಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಉರ್ದು ಪ್ರೌಢಶಾಲೆ ಕಟ್ಟಡ ಬಳಿಯೇ ಅಗ್ನಿಶಾಮಕ ದಳಕ್ಕೆ ಜಾಗ ನೀಡಲಾಗಿದೆ. ಇಲಾಖೆಯವರು ಈ ಜಾಗದಲ್ಲಿ ಇಲಾಖೆಯ ನಾಮಫಲಕ ಅಳವಡಿಸಿದ್ದು, ದಿಕ್ಕು ದಿಸೆ ಇಲ್ಲದೆ ನಾಮಫಲಕ ಅನಾಥವಾಗಿ ನಿಂತಿದೆ. ಜಾಗ ಮಂಜೂರಾತಿ ಆಗುವ ಮೊದಲು ಕಟ್ಟಡಕ್ಕೆ ಸರ್ಕಾರ ಅನುದಾನ ಮಂಜೂರಾತಿ ಮಾಡಿತ್ತು. ಆದರೆ ಜಾಗ ಇಲ್ಲದ ಕಾರಣ ಅನುದಾನ ಸದ್ಬಳಕೆ ಆಗಲಿಲ್ಲ. ಈಗ ಜಾಗ ಮಂಜೂರಾತಿಯಾಗಿ ಎಂಟು ತಿಂಗಳಿಗೂ ಅಧಿಕವಾಗಿದ್ದು, ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ.

ತೇರದಾಳ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ತೇರದಾಳ ತಾಲೂಕು ರಚನೆಗೊಂಡು ಹಳ್ಳಿಗಳ ವಿಂಗಡನೆಯೂ ಆಗಿದೆ. ಆದರೆ ಇದುವರೆಗೆ ತಾಲೂಕಿಗೆ ಸಿಗಬೇಕಾದ ಮಾನ್ಯತೆ ಯಾವುದೂ ದೊರೆತಿಲ್ಲ. ಸರ್ಕಾರಿ ಕಚೇರಿ ಬಿಡಿ. ತೇರದಾಳ ತಾಲೂಕಿಗೆ ಸಂಬಂಧಿಸಿದ ಸರ್ಕಾರಿ ಕಾರ‍್ಯಕ್ರಮ, ಅಧಿಕಾರಿಗಳ ಸಭೆ ಕೂಡ ತೇರದಾಳದಲ್ಲಿ ನಡೆಯುತ್ತಿಲ್ಲ. ಬದಲಾಗಿ ನೆರೆಯ ತಾಲೂಕಿನಲ್ಲಿಯೇ ನಡೆಯುತ್ತಿವೆ. ಅಗ್ನಿಶಾಮಕ ದಳದ ಜತೆಗೆ ತಾಪಂ ಕೂಡ ಮಂಜೂರಾತಿ ಆಗಿದ್ದು, ಇದರ ಬಗ್ಗೆಯೂ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಇದರಿಂದ ತೇರದಾಳ ತಾಲೂಕು ಹೆಸರಿಗಷ್ಟೇ ಆದಂತಾಗಿದೆ. ಎಲ್ಲ ಕೆಲಸ ಕಾರ್ಯಗಳಿಗೂ ರಬಕವಿ-ಬನಹಟ್ಟಿ ತಹಸೀಲ್ದಾರ್‌ ಕಚೇರಿಗೆ ತೇರದಾಳ ಜನತೆ ಅಲೆದಾಟ ಇನ್ನೂ ತಪ್ಪಿಲ್ಲ. ಆದ್ದರಿಂದ ತೇರದಾಳ ಪೂರ್ಣ ಪ್ರಮಾಣದ ತಾಲೂಕು ಎನಿಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿಯ ಅವಶ್ಯಕತೆ ಇದೆ.

ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದ್ದರಿಂದ ಅವರ ಮೇಲೆ ಇವರು ಇವರ ಮೇಲೆ ಅವರು ಹಾಕದೆ ಪಟ್ಟಣದಲ್ಲಿನ ಕಾಂಗ್ರೆಸ್ ಬಿಜೆಪಿ ಸೇರಿದಂತೆ ರಾಜಕೀಯ ಮುಖಂಡರುಗಳು ಪಟ್ಟಣದ ಅಭಿವೃದ್ಧಿಗೆ ಮುಂದಾಗಬೇಕಿದೆ. ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕಾಮಗಾರಿಗಳು, ತಾಲೂಕು ಕಚೇರಿಗಳು, ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ನೌಕರರು ಸೇರಿದಂತೆ ಪಟ್ಟಣದ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಉಭಯ ಪಕ್ಷಗಳಲ್ಲಿ ಯುವಕರೇ ಹೆಚ್ಚಾಗಿ ಮುಂಚೂಣಿಯಲ್ಲಿದ್ದು, ತೇರದಾಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವ ಮೂಲಕ ಮಾದರಿ ತಾಲೂಕಾಗಿಸಲು ಸಂಕಲ್ಪ ಮಾಡಬೇಕಿದೆ ಎಂಬುದು ಜನತೆಯ ಆಶಯವಾಗಿದೆ.

ತೇರದಾಳ ತಾಲೂಕು ರಚನೆಯಿಂದ ಹಳ್ಳಿಗಳ ವಿಂಗಡೆ ವರೆಗೆ ಪ್ರತಿಯೊಂದು ರಾಜಕೀಯ ಪಕ್ಷಗಳು ತೇರದಾಳಕ್ಕೆ ಅನ್ಯಾಯ ಮಾಡುತ್ತ ಬಂದಿವೆ. ತಾಲೂಕಿಗೆ ಹಿಂದಿನ ಸರ್ಕಾರ ಹಳ್ಳಿಗಳ ವಿಂಗಡನೆ ಮಾಡಿ ಆದೇಶ ಹೊರಡಿಸಿದೆ. ಆದರೆ ಅದು ನಿಯಮಾನುಸಾರ ಇಲ್ಲ. ಅದಕ್ಕೂ ಮೊದಲು ತೇರದಾಳದಲ್ಲಿ ತಾಲೂಕು ಕೇಂದ್ರ ಪ್ರಾರಂಭಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವು (ಕಾಂಗ್ರೆಸ್ ಕಾರ‍್ಯಕರ್ತರು) ಚರ್ಚೆ ನಡೆಸಿದ್ದೇವೆ. ತೇರದಾಳ ಅಭಿವೃದ್ಧಿಗೆ ಅಗತ್ಯ ಇರುವ ಕೆಲಸಗಳಿಗೆ ಸರ್ಕಾರದ ಮೇಲೆ ಒತ್ತಡೆ ಹೇರುವ ಕೆಲಸ ಮಾಡಲಾಗುವುದು.

ಪ್ರವೀಣ ನಾಡಗೌಡ. ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ತೇರದಾಳ

Share this article