ಫ್ಲೈಓವರ್‌ ಕಾಮಗಾರಿ ಪುನರಾರಂಭ ಯಾವಾಗ?

KannadaprabhaNewsNetwork | Updated : Oct 17 2024, 12:02 AM IST

ಸಾರಾಂಶ

ಸೆ. 10ರಂದು ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಉಪನಗರ ಠಾಣೆಯ ಎಎಸ್‌ಐ ನಾಭಿರಾಜ ದಾಯಣ್ಣವರ ಎಂಬುವವರ ಮೇಲೆ ಮೇಲಿಂದ ಕಬ್ಬಿಣದ ರಾಡ್‌ ಬಿದ್ದು ಕೊನೆಯುಸಿರೆಳೆದಿದ್ದರು. ಹೀಗಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ನಗರದಲ್ಲಿ ಎಎಸ್ಐ ಬಲಿ ಪಡೆದ ಫ್ಲೈಓವರ್‌ ಕಾಮಗಾರಿ ಈ ವರೆಗೂ ಪುನರಾರಂಭವಾಗಿಲ್ಲ. ಕಾರ್ಮಿಕರು, ಎಂಜಿನಿಯರ್‌ಗಳೆಲ್ಲ ನಾಪತ್ತೆಯಾಗಿದ್ದು, ಮತ್ತೆ ಯಾವಾಗ ಕಾಮಗಾರಿ ಶುರುವಾಗುತ್ತದೆಯೆಂಬುದು ಗೊತ್ತಾಗುತ್ತಿಲ್ಲ. ಅರ್ಧ ಆಗಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ಸಾರ್ವಜನಿಕರನ್ನು ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಚೆನ್ನಮ್ಮ ಸರ್ಕಲ್‌ನಿಂದ ವಿವಿಧೆಡೆ ಸಂಪರ್ಕಿಸುವ ರಸ್ತೆಗಳಿಗೆ ಫ್ಲೈಓವರ್‌ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದ ₹ 312 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯ ಜವಾಬ್ದಾರಿ ರಾಜ್ಯಸರ್ಕಾರದ್ದು.

ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಹೊಸೂರು, ಗದಗ ರಸ್ತೆ, ನವಲಗುಂದ ರಸ್ತೆ ಹೀಗೆ ಯೋಜನೆ ಸಿದ್ಧಪಡಿಸಿ ನಿರ್ಮಿಸಲಾಗುತ್ತಿದೆ. ಝಂಡೂ ಕಂಪನಿಯೂ ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದೆ.

ಹಾಗೆ ನೋಡಿದರೆ ಕಾಮಗಾರಿಯ ವೇಗವೂ ತೀವ್ರಗತಿಯಲ್ಲೇ ಸಾಗಿತ್ತು. ಆದರೆ ಸೆ. 10ರಂದು ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಉಪನಗರ ಠಾಣೆಯ ಎಎಸ್‌ಐ ನಾಭಿರಾಜ ದಾಯಣ್ಣವರ ಎಂಬುವವರ ಮೇಲೆ ಮೇಲಿಂದ ಕಬ್ಬಿಣದ ರಾಡ್‌ ಬಿದ್ದಿತ್ತು. ಬಳಿಕ ನಾಲ್ಕೈದು ದಿನ ಜೀವನ್ಮರಣದ ನಡುವೆ ಹೋರಾಟ ನಡೆಸಿ ಕೊನೆಗೆ ನಾಭಿರಾಜ ಕೊನೆಯುಸಿರೆಳೆದಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 19 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೇ ಕಾಮಗಾರಿ ಕೈಗೊಂಡಿದ್ದರ ಪರಿಣಾಮವಾಗಿಯೇ ಈ ದುರ್ಘಟನೆ ನಡೆದಿತ್ತು ಎಂಬುದು ಸಾರ್ವಜನಿಕರ ಆರೋಪ.

ನಾಪತ್ತೆ:

ಈ ಘಟನೆಯಾದ ಬಳಿಕ ಜಿಲ್ಲಾಡಳಿತ ಫ್ಲೈಓವರ್‌ ಕಾಮಗಾರಿ ಕೈಗೊಳ್ಳುವ ಮುನ್ನ ಏನೇನು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂಬುದರ ವರದಿ ಕೊಡಬೇಕು. ತದನಂತರವಷ್ಟೇ ಕಾಮಗಾರಿ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿ) ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೆ ಸೆ. 10ರಂದು ನಡೆದ ಘಟನೆ ಬಳಿಕ ಝಂಡೂ ಕಂಪನಿಯ ಎಂಜಿನಿಯರ್‌ಗಳು, ಕಾರ್ಮಿಕರು ಸೇರಿದಂತೆ ಎಲ್ಲರೂ ನಾಪತ್ತೆಯಾಗಿದ್ದಾರೆ. ಹೀಗಾಗಿ ಕಾಮಗಾರಿಯೇ ಸ್ಥಗಿತಗೊಂಡಿದೆ. ಆ ಅವಘಡ ಆದ ಮೇಲೆ ಇಲ್ಲಿ ಕೆಲಸ ಮಾಡಲು ಕಾರ್ಮಿಕರು, ಎಂಜಿನಿಯರ್‌ಗಳು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವೊಂದಿಷ್ಟು ಕಾರ್ಮಿಕರು, ಎಂಜಿನಿಯರ್‌ಗಳು ಊರಿಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋಗಿದ್ದರೆ, ಕೆಲವರಂತೂ ಹೇಳದೇ ಕೇಳದೇ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಬೇಕಿದೆ. ಅದಕ್ಕಿಂತ ಮೊದಲು ಇದೀಗ ಸೆ. 10ರ ಘಟನೆಯಲ್ಲಿ ಬಂಧಿತರಾಗಿರುವ 12 ಜನ ಸಿಬ್ಬಂದಿಗಳನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕಿದೆ. ಅವರನ್ನು ಬಿಡಿಸಿಕೊಂಡು ಬಂದ ಮೇಲೆ ಇಲ್ಲಿ ಕೆಲಸ ಶುರು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಟ್ರಾಫಿಕ್‌ ಕಿರಿಕಿರಿ:

ಇದೀಗ ಅರ್ಧಂಮರ್ಧ ಕಾಮಗಾರಿ ಆಗಿ ಅಲ್ಲಲ್ಲಿ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ. ಕನಿಷ್ಠ ಪಕ್ಷ ಕಾಮಗಾರಿಯಾದರೂ ಶುರುವಿದ್ದರೆ ಟ್ರಾಫಿಕ್‌ ಕಿರಿಕಿರಿ ಆದರೂ ಅಷ್ಟೊಂದು ತೊಂದರೆಯೆನಿಸುವುದಿಲ್ಲ. ಅರ್ಧಂಮರ್ಧ ಕಾಮಗಾರಿಯಿಂದ ಆಗುತ್ತಿರುವ ಟ್ರಾಫಿಕ್‌ ಜಾಮ್‌ನಿಂದಾಗಿ ಯಾವಾಗ ಈ ಕಾಮಗಾರಿ ಶುರುವಾಗುತ್ತದೆಯೋ ಯಾವಾಗ ಮುಗಿಯುತ್ತದೆಯೋ ಎಂದು ನಿಟ್ಟಿಸಿರು ಬಿಡುತ್ತಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಸಾಗುವುದು ಮಾಮೂಲಿ ಎಂಬಂತಾಗಿದೆ.

ವರದಿ ಕೊಟ್ಟಿಲ್ಲ:

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿರುವುದರ ಬಗ್ಗೆ ವರದಿ ಕೇಳಿತ್ತು. ಆದರೆ ಝಂಡೂ ಕಂಪನಿ ಸದ್ಯ ಕಾಮಗಾರಿ ಸ್ಥಗಿತಗೊಳಿಸಿರುವುದರಿಂದ ವರದಿ ನೀಡಿಲ್ಲ. ಕಂಪನಿ ಜತೆ ಮಾತನಾಡಿದ್ದೇವೆ. ಶೀಘ್ರದಲ್ಲೇ ಅದು ಕಾಮಗಾರಿ ಪುನರಾರಂಭಿಸಲಿದೆ. ಅದಾದ ಬಳಿಕ ಸಭೆ ನಡೆಸಿ ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಒಟ್ಟಿನಲ್ಲಿ ಅವಘಡದಿಂದ ಸ್ಥಗಿತಗೊಂಡಿರುವ ಫ್ಲೈಓವರ್‌ ಕಾಮಗಾರಿ ಪುನರಾರಂಭವಾಗುವುದು ಯಾವಾಗ? ಕಾಮಗಾರಿ ಪೂರ್ಣವಾಗುವುದು ಎಂದು? ಎಂಬುದು ಸಾರ್ವಜನಿಕರ ಪ್ರಶ್ನೆ. ಆದರೆ ಇವುಗಳ ಉತ್ತರಕ್ಕೆ ಇನ್ನು ಕೆಲಕಾಲ ಕಾಯುವುದು ಅನಿವಾರ್ಯ ಎಂಬುದು ಮಾತ್ರ ಸತ್ಯ.ಅವಘಡ ಸಂಭವಿಸಿದ ಮೇಲೆ ಝಂಡೂ ಕಂಪನಿಯೂ ಕಾಮಗಾರಿ ಸ್ಥಗಿತಗೊಳಿಸಿದೆ. ಈ ಬಗ್ಗೆ ಕಂಪನಿಯೊಂದಿಗೆ ಮಾತನಾಡಿದ್ದೇವೆ. ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದೆ. ಕಾಮಗಾರಿ ಪ್ರಾರಂಭಿಸುವ ಮುನ್ನ ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಭೆನಡೆಸಿ ಕಾಮಗಾರಿ ಕುರಿತು ಆ್ಯಕ್ಷನ್‌ ಪ್ಲ್ಯಾನ್‌ ಸಿದ್ಧಪಡಿಸಿ ವರದಿ ಸಲ್ಲಿಸಲಾಗುವುದು. ಬಳಿಕವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎಚ್‌.ಜಿ. ಗುಂಡಳ್ಳಿ ಹೇಳಿದ್ದಾರೆ.

Share this article