ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದುಗಡೆ ಸಾರ್ವಜನಿಕರ ಅನುಕೂಲಕ್ಕಾಗಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಶೌಚಾಲಯ ಸಾರ್ವಜನಿಕ ಬಳಕೆಗೆ ಲಭ್ಯವಾಗದೇ ಇರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ದೋಟಿಹಾಳ ಗ್ರಾಮದಲ್ಲಿ ಹೈಟೆಕ್ ಶೌಚಾಲಯದ ಕಾಮಗಾರಿ ಸಂಪೂರ್ಣಗೊಂಡಿದ್ದು, ಗ್ರಾಪಂಗೆ ಹಸ್ತಾಂತರ ಮಾಡಲಾಗಿದ್ದು, ಗ್ರಾಪಂ ನಿರ್ವಹಣೆ ಮಾಡಲಿದೆ ಎಂದು ಕೆಆರ್‌ಐಡಿಎಲ್ ಇಂಜಿನಿಯರ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಈ ಶೌಚಾಲಯ ಬಳಕೆಗೆ ಸಿಗದ ಕಾರಣ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಬಯಲೇ ಗತಿಯಾಗಿದೆ. ಪರಿಸರ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳ ಭೀತಿ ಹೆಚ್ಚಾಗಿದೆ. ತಕ್ಷಣ ಶೌಚಾಲಯ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.ಇನ್ನೆಷ್ಟು ದಿನ ಬೇಕು?: ದೋಟಿಹಾಳ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನಿರ್ಮಾಣ ಆಗುತ್ತಿರುವ ಹೈಟೆಕ್ ಶೌಚಾಲಯದ ಕಾಮಗಾರಿ ಮುಕ್ತಾಯಗೊಂಡು ಎರಡು ತಿಂಗಳ ಕಳೆದರೂ ಸಹಿತ ಇದುವರೆಗೂ ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ, ಇನ್ನೆಷ್ಟು ದಿನ ಬೇಕು ಶೌಚಾಲಯ ಬಳಕೆ ಮಾಡಲು ಎಂಬುದು ಇಲ್ಲಿಯ ನಿವಾಸಿಗಳ ಪ್ರಶ್ನೆಯಾಗಿದೆ.
ದೋಟಿಹಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಶೌಚಾಲಯದ ಉದ್ಘಾಟನೆ ಮತ್ತು ಸಾರ್ವಜನಿಕರಿಗೆ ಬಳಕೆಗೆ ನೀಡುವ ಕುರಿತು ಪಿಡಿಒ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ದೋಟಿಹಾಳ ಗ್ರಾಪಂ ಆಡಳಿತಾಧಿಕಾರಿ ನಾಗರಾಜ ಕಾತರಕಿ ತಿಳಿಸಿದ್ದಾರೆ.