ಇಂದು ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮತ್ತೆ ಪ್ರಸ್ತಾಪ ಸಾಧ್ಯತೆ
ಜಿ. ಸೋಮಶೇಖರಕನ್ನಡಪ್ರಭ ವಾರ್ತೆ ಕೊಟ್ಟೂರು
ಪಂಚಪೀಠಗಳಲ್ಲಿ ಎರಡನೆಯದಾದ ತಾಲೂಕಿನ ಉಜ್ಜಯನಿ ಗ್ರಾಮ ಹೋಬಳಿ ಕೇಂದ್ರವಾಗಬೇಕೆಂಬ ದಶಕಗಳ ಒತ್ತಾಯ ಇದೀಗ ಒಮ್ಮೆಲೇ ಹಿಂದೆ ಸರಿದಿದೆ. ಆದರೂ ಜನತೆಯಲ್ಲಿ ಉಜ್ಜಯನಿ ಹೋಬಳಿ ಕೇಂದ್ರ ಆಗಲೇಬೇಕೆಂಬ ಕಾತುರ ಇದ್ದೇ ಇದೆ.ಆದರೆ ಸರ್ಕಾರ ಮಾತ್ರ ಇದುವರೆಗೂ ಈ ಉಜ್ಜಯನಿಯನ್ನು ಹೋಬಳಿ ಕೇಂದ್ರ ಮಾಡಲು ಯಾವುದೇ ಯೋಜನೆ ಮಾಡದಿರುವುದು ಗ್ರಾಮದ ಮತ್ತು ಸುತ್ತಲಿನ ಗ್ರಾಮದ ಜನತೆಯಲ್ಲಿ ಬೇಸರ ತರಿಸಿದೆ.
ಉಜ್ಜಯನಿ ಗ್ರಾಮದಲ್ಲಿ ಜು.29ರಂದು ನಡೆಯಲಿರುವ ಕೊಟ್ಟೂರು ಹೋಬಳಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಜ್ಜಯನಿ ಹೋಬಳಿ ಮಾಡುವ ಕುರಿತು ಜಿಲ್ಲಾಧಿಕಾರಿ ಮತ್ತು ಶಾಶಕರಿಗೆ ಮನವಿ ಸಲ್ಲಿಸಲು ಸ್ಥಳೀಯರು ತಯಾರಾಗಿದ್ದಾರೆ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇದುವರೆಗೆ ಏಕೆ ಕ್ರಮವಾಗಿಲ್ಲ?ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.ಉಜ್ಜಯನಿ ಗ್ರಾಮ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿದೆ. ಅಲ್ಲದೇ ಆರಾಧ್ಯ ದೈವಶ್ರೀ ಮರಳು ಸಿದ್ದೇಶ್ವರ ಸ್ವಾಮಿಯ ಬೃಹತ್ ಮಠ ಮತ್ತು ಶಿಖರ ಭಕ್ತರ ಮೆಚ್ಚಿನ ತಾಣವಾಗಿದೆ. ಭಕ್ತರು ನಿರಂತರ ಈ ಕ್ಷೇತ್ರದ ದರ್ಶನ ಮತ್ತು ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶ್ರೀ ಸ್ವಾಮಿಯ ರಥೋತ್ಸವ ಮತ್ತು ಶಿಖರ ತೈಲಾಭಿಷೇಕ ವಿಶಿಷ್ಟಾಚರಣೆಯಾಗಿದ್ದು, ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಪ್ರತಿ ವರ್ಷ ನಾಡಿನೆಲ್ಲೆಡೆಯಿಂದ ಆಗಮಿಸುತ್ತಾರೆ.
ಸದ್ಯ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಉಜ್ಜಯನಿ ಗ್ರಾಮ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೇ ಸುತ್ತಮುತ್ತಲಿನ 5 ಕಂದಾಯ ಗ್ರಾಮಗಳು ಸೇರಿ 22 ಹಳ್ಳಿಗಳಿಗೆ ಕೇಂದ್ರವಾಗಿದೆ. ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಉಜ್ಜಯನಿಯನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಬೇಡಿಕೆಗೆ ಸರ್ಕಾರ ಇದುವರೆಗೂ ಸ್ಪಂದನೆ ನೀಡಿಲ್ಲ.ಕೊಟ್ಟೂರು ತಾಲೂಕು ರಚನೆಗೊಂಡ ಅವಧಿಯಲ್ಲಿ ಉಜ್ಜಯನಿಯನ್ನು ಹೋಬಳಿ ಕೇಂದ್ರವನ್ನಾಗಿಸುವ ಪ್ರಸ್ತಾಪವಿತ್ತು. ಆದರೆ ದುರದೃಷ್ಟವಶಾತ್ ಈ ಪ್ರಸ್ತಾಪ ಈಗ ಹಿಂದೆ ಸರಿದಿರುವುದು ಜನತೆಯಲ್ಲಿ ನಿರಾಸೆ ತಂದಿದೆ.
ಗ್ರಾಮದಲ್ಲಿ ಗ್ರಾಪಂ ಆಡಳಿತ ಮತ್ತು ಗ್ರಾಮ ಆಡಳಿತ ಅಧಿಕಾರಿ ಸೇವೆ ಮಾತ್ರ ಈ ಭಾಗದ ಜನರಿಗೆ ಸದ್ಯಕ್ಕೆ ಸಿಗುತ್ತಿದ್ದು, ಹೋಬಳಿ ಕೇಂದ್ರವಾದರೆ ಹೆಚ್ಚಿನ ಸೌಲಭ್ಯಗಳು ದೊರಕಲಿವೆ ಎನ್ನುವುದು ಜನರ ಕನಸಾಗಿದೆ. ಉತ್ತಮ ಆಡಳಿತ ಸಾಮಾನ್ಯ ಜನತೆಗೂ ದೊರಕುವಂತಾಗಲು ಹೋಬಳಿಯ ಅವಶ್ಯ ತುರ್ತು ಇದ್ದು ಸರ್ಕಾರ ಉಜ್ಜಯನಿಯನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬುದು ಇಲ್ಲಿನ ಜನರ ಒತ್ತಾಸೆಯಾಗಿದೆ. ಇದಕ್ಕೆ ಶಾಸಕರು ಕೂಡಲೇ ಸರ್ಕಾರದ ಮೇಲೆ ಈ ನಿಟ್ಟಿನಲ್ಲಿ ಒತ್ತಡ ತರಬೇಕು ಸ್ಥಳೀಯರು ಆಗ್ರಹಿಸಿದ್ದಾರೆ.