ಎಲ್ಲಿ ನೋಡಿದರು ಗೂಳೆ, ತಾಂಡಾಗಳು ಭಣ ಭಣ

KannadaprabhaNewsNetwork |  
Published : Mar 02, 2024, 01:52 AM IST
ತಾಂಡಾಗಳಿಂದ ಕುಟುಂಬ ಸಮೇತ ಕಾರ್ಮಿಕರು ಟ್ರ್ಯಾಕ್ಟರ್ ನಲ್ಲಿ ಗುಳೆ ಹೊರಟಿರುವುದು | Kannada Prabha

ಸಾರಾಂಶ

ನೋಡೋಕೆ ಊರು, ಬಹುತೇಕ ಮನೆಗಳಿಗೆ ಬೀಗ ಬಿದ್ದಿದೆ. ಮಾತಾಡೋಕೆ ಯಾರೂ ಇಲ್ಲ. ಎಲ್ಲಿ ನೋಡಿದರೂ ಬಿಕೋ ಎನ್ನುವ ವಾತಾವರಣ. ಇದು, ವಿಜಯಪುರ ಜಿಲ್ಲೆಯ ಯಾವುದೇ ತಾಂಡಾಕ್ಕೆ ಭೇಟಿ ನೀಡಿದರೂ ಕಾಣುವ ಸಾಮಾನ್ಯ ದೃಶ್ಯ. ಜಮೀನಿಲ್ಲದೆ, ಉದ್ಯೋಗವೂ ಇಲ್ಲದೆ ಕೂಲಿನಾಲಿ ಮಾಡುವ ಜನರು ಪ್ರತಿವರ್ಷ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದಾರೆ.

ಬ್ಲರ್ಬ್:

ಒಂದು ಕಾಲದಲ್ಲಿ ಪಂಚ ನದಿಗಳ ಬೀಡು, ವಿಜಯಪುರ ಜಿಲ್ಲೆ ಇದೀಗ ಬರದಿಂದ ತತ್ತರಿಸಿದೆ. ಬರದ ಭೀಕರತೆಯಿಂದಾಗಿ ಜಿಲ್ಲೆಯ ಜನರು, ತಾಂಡಾ ನಿವಾಸಿಗಳು ಗುಳೆ ಹೋಗಿದ್ದಾರೆ. ತಲೆ ತಲಾಂತರದಿಂದ ದುಡಿಯಲು ಊರು ಬಿಟ್ಟು ಹೋಗುತ್ತಿರುವ ತಾಂಡಾ ಜನರ ಸಮಸ್ಯೆ ಹೆಚ್ಚಾಗಿದೆ. ಈ ಬಾರಿ ಮತ್ತೆ ಆವರಿಸಿದ ಭೀಕರ ಬರ ಜಿಲ್ಲೆಯ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಇದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ಬಿತ್ತಿದ್ದ ಬೆಳೆಯೂ ಕೈ ಕೊಟ್ಟಿದ್ದು, ಮಾಡಿದ ಸಾಲ ತೀರಿಸಲು ಜನತೆ ಮಂಗಳೂರು, ಗೋವಾ, ಮಹಾರಾಷ್ಟ್ರದತ್ತ ಗೂಳೆ ಹೋಗಿದ್ದು, ತಾಂಡಾಗಳಲ್ಲಿ ಜನರಿಲ್ಲದೇ ಭಣಗುಡುತ್ತಿವೆ.

------------

ಶಶಿಕಾಂತ ಮೆಂಡೆಗಾರ

ನೋಡೋಕೆ ಊರು, ಬಹುತೇಕ ಮನೆಗಳಿಗೆ ಬೀಗ ಬಿದ್ದಿದೆ. ಮಾತಾಡೋಕೆ ಯಾರೂ ಇಲ್ಲ. ಎಲ್ಲಿ ನೋಡಿದರೂ ಬಿಕೋ ಎನ್ನುವ ವಾತಾವರಣ. ಇದು, ವಿಜಯಪುರ ಜಿಲ್ಲೆಯ ಯಾವುದೇ ತಾಂಡಾಕ್ಕೆ ಭೇಟಿ ನೀಡಿದರೂ ಕಾಣುವ ಸಾಮಾನ್ಯ ದೃಶ್ಯ. ಜಮೀನಿಲ್ಲದೆ, ಉದ್ಯೋಗವೂ ಇಲ್ಲದೆ ಕೂಲಿನಾಲಿ ಮಾಡುವ ಜನರು ಪ್ರತಿವರ್ಷ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದಾರೆ.

ಆದ್ರೆ ಈ ಬಾರಿ ಸರಿಯಾಗಿ ಮಳೆ ಬಾರದ್ದರಿಂದ ಹಿಂದೆಂದಿಗಿಂತಲೂ ಬರದ ತೀವ್ರತೆ ಹೆಚ್ಚಿದೆ. ತಾಂಡಾಗಳಲ್ಲಿ ಶೇ.60 ಜನ ಗುಳೆ ಹೋಗಿದ್ದಾರೆ. ಅದರಲ್ಲೂ ಜಮೀನಿನಲ್ಲಿ ಬಿತ್ತಿದ ಬೆಳೆ ಬಾರದ್ದರಿಂದ ಸಾಲ ಮಾಡಿಕೊಂಡಿರುವ ಮಧ್ಯಮ ವರ್ಗದ ಜನರು ಕೂಡ ಈ ಬಾರಿ ದುಡಿಯಲು ನೆರೆಯ ರಾಜ್ಯದತ್ತ ಮುಖ ಮಾಡಿದ್ದಾರೆ. ಉದ್ಯೋಗ ಖಾತ್ರಿಯೂ ಕೈ ಹಿಡಿಯದ್ದರಿಂದ ಒಂದೂ ಜಮೀನು ಮಾರಿ ಸಾಲ ತೀರಿಸಬೇಕು. ಅಥವಾ ಗುಳೆ ಹೋಗಿ ದುಡಿದು ಸಾಲ ಮುಟ್ಟಿಸಬೇಕಾದ ಸ್ಥಿತಿ ಬಂದೊದಗಿದೆ.

ಮುಂದುವರಿದಿರುವ ಗುಳೆ:

ಸಾಕಷ್ಟು ಕುಟುಂಬಗಳು ಕಳೆದ ಎರಡು ತಿಂಗಳ ಹಿಂದೆಯೇ ಗುಳೆ ಹೋಗಿವೆ. ಈ ಭಾಗದಲ್ಲಿ ಕೆಲಸ ಸಿಗದಿರುವುದರಿಂದ ಫೆಬ್ರುವರಿ ಕೊನೆಯ ವಾರದಲ್ಲೂ ಮಹಾರಾಷ್ಟ್ರಕ್ಕೆ ಒಂದೊಂದು ತಾಂಡಾಗಳಿಂದ ಒಂದೊಂದು ಟ್ರ್ಯಾಕ್ಟರ್ ಮಾಡಿಕೊಂಡು ಗುಳೆ ಹೊರಟಿದ್ದಾರೆ. ಎಲ್ಲ ಸಾಮಾನುಗಳನ್ನು ಟ್ರಾಲಿಯಲ್ಲಿ ಹಾಕಿಕೊಂಡು, ಹೆಂಡತಿ-ಮಕ್ಕಳನ್ನು ಕಟ್ಟಿಕೊಂಡು ಗುಳೆ ಹೋಗುವ ಬಡವರ ಪರಿಸ್ಥಿತಿ ನೋಡಿದ್ರೆ ಮರುಕ ಬರದೆ ಇರದು.

ಯಾವಾಗ, ಎಲ್ಲೆಲ್ಲಿ ಗುಳೆ?:

ಮದಭಾವಿ ತಾಂಡಾ, ಹಡಗಲಿ ತಾಂಡಾ, ಆಹೇರಿ ತಾಂಡಾ, ಮಹಲ ತಾಂಡಾ, ಕೂಡಗಿ ತಾಂಡಾ, ಹತ್ತರಕಿ ತಾಂಡಾ, ಹೀಗೆ ಜಿಲ್ಲೆಯಲ್ಲಿ 232 ತಾಂಡಾಗಳಿದ್ದು, ಅಂದಾಜು 8ಲಕ್ಷ ಲಂಬಾಣಿ ಜನಸಂಖ್ಯೆ ಇದೆ. ಅದರಲ್ಲಿ ಬಹುತೇಕ ತಾಂಡಾಗಳ ಜನ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚು ಗುಳೆ ಹೋಗಿದ್ದಾರೆ. ಕಬ್ಬಿನ ತೋಡಿ, ಗಾರೆ ಕೆಲಸ, ಕಟ್ಟಡ ನಿರ್ಮಾಣ ಇತ್ಯಾದಿ ಕೆಲಸಗಳು ನಿರಂತರವಾಗಿ ಸಿಗುತ್ತವೆ. ಜೊತೆಗೆ ಎಜೆಂಟರು ಇವರಿಗೆ ಮುಂಗಡ ಹಣ ಕೊಟ್ಟು ಕರೆದುಕೊಂಡು ಹೋಗ್ತಾರೆ. ಇಲ್ಲಿ ದಿನಕ್ಕೆ ಇಲ್ಲಿ ₹300 ರಿಂದ ₹400 ಸಿಗುತ್ತದೆ. ಅಲ್ಲಿ, ಪ್ರತಿದಿನ ₹800 ರಿಂದ ₹1000 ವರೆಗೂ ಆದಾಯವಿದೆ. ಹೀಗಾಗಿ ದೀಪಾವಳಿ ಹಬ್ಬ ಮುಗಿಸಿಕೊಂಡು ಗುಳೆ ಹೋದರೆ ಮತ್ತೆ ಮೇ-ಜೂನ್ ಗೆಯೇ ವಾಪಸ್ ಬರೋದು.

ನನೆಗುದಿಗೆ ಬಿದ್ದ ಪೈಲಟ್ ಪ್ರಾಜೆಕ್ಟ್‌: ಗೂಳೆ ಹೋಗುವುದನ್ನು ತಡೆಯಲು ಕುಮಾರಸ್ವಾಮಿ ಅವರು ಪೈಲಟ್ ಪ್ರಾಜೆಕ್ಟ್‌ಗೆ ಪ್ಲಾನ್ ಮಾಡಿದ್ದರು. ಮೊದಲ ಹಂತದಲ್ಲಿ ₹50ಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ರೂಪಿಸಿ ಗೂಳೆ ಹೋಗುವ ಜನರಿಗೆ ಅವರು ಇರುವ ಸ್ಥಳದಲ್ಲಿಯೇ ಉದ್ಯೋಗ ನೀಡುವುದು, ಸ್ವಯಂ ಉದ್ಯೋಗಕ್ಕಾಗಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಆದರೆ ಮುಂದೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಆ ಯೋಜನೆ ಮರೆತೆ ಹೋದಂತಾಗಿದೆ.

ಬಾಕ್ಸ್

ಗುಳೆ ಹೋಗಿ ಜೀವ ಕಳೆದುಕೊಂಡಿದ್ರು

ಈ ಹಿಂದೆ ಮಹಾರಾಷ್ಟ್ರಕ್ಕೆ ಗೂಳೆ ಹೊರಟಿದ್ದ ವಾಹನ ಅಪಘಾತವಾಗಿ ಮದಭಾವಿ ತಾಂಡಾ 1ರಲ್ಲಿ 16 ಜನ ಪ್ರಾಣ ಕಳೆದುಕೊಂಡಿದ್ದು, ಹಲವರಿಗೆ ಗಾಯಗಳಾಗಿದ್ದವು. ಈ ಸಮಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮದಭಾವಿ ತಾಂಡಾ 1ಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ತಲಾ ₹2ಲಕ್ಷ ಪರಿಹಾರ ಹಾಗೂ ಗಾಯಾಳುಗಳ ಆಸ್ಪತ್ರೆ ಖರ್ಚು ಭರಿಸಿದ್ದರು. ನಂತರದಲ್ಲಿ ಮತ್ತೊಮ್ಮೆ ಗುಳೆ ಹೋದ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ಅಪಘಾತಕ್ಕೊಳಗಾಗಿ ಕೂಡಗಿ ತಾಂಡಾದ ನಾಲ್ವರು ಮೃತಪಟ್ಟಿದ್ದರು. ಹೀಗೆ ಗುಳೆ ಹೋದವರಲ್ಲಿ ಅಪಘಾತ, ಅನಾರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಹಲವರು ಜೀವನ ಕಳೆದುಕೊಂಡಿದ್ದಾರೆ.

---------

ಕೋಟ್.....

ದುಸಗಾಳ ಬೀಸಿದ್ದರಿಂದ ಇದ್ದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆ ಬರಲಿಲ್ಲ. ಹೀಗಾಗಿ ಸಾಲ ಮಾಡಿಕೊಂಡೆವು. ಮಾಡಿದ ಸಾಲ ತೀರಿಸುವ ಸಲುವಾಗಿ ಜಮೀನು ಬಿಟ್ಟು, ಮೂವರು ಮೊಮ್ಮೊಕ್ಕಳನ್ನೂ ನನ್ನ ಜೊತೆಗೆ ಬಿಟ್ಟು ನನ್ನ ಮಗ-ಸೊಸೆ ಇಬ್ಬರೂ ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದಾರೆ. ದೀಪಾವಳಿ ಮುಗಿಸಿಕೊಂಡು ಗುಳೆ ಹೋದವರು ಮಳೆಗಾಲದ ಸಮಯಕ್ಕೆ ವಾಪಸ್ ಬರ್ತಾರೆ.

- ಕಸ್ತೂರಿಬಾಯಿ ರಾಠೋಡ, ಮದಭಾವಿ ತಾಂಡಾ ನಿವಾಸಿ.-----

ಸ್ವಾತಂತ್ರ್ಯ ಅನುಕೂಲವಾಗಿದ್ದರೂ ತಾಂಡಾಗಳ ನಿವಾಸಿಗಳಿಗೆ ಸೌಲಭ್ಯಗಳೇ ಸಿಕ್ಕಿಲ್ಲ. ಹೀಗಾಗಿ ಗುಳೆ ಹೋಗುವ ಜನರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಬೇರೆ ಬೇರೆ ಫ್ಯಾಕ್ಟರಿಗಳಾಗಬೇಕು, ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಜೊತೆಗೆ ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಪೈಲಟ್ ಪ್ರಾಜೆಕ್ಟ್ ಸ್ಥಾಪನೆ ಆಗಿದ್ದೇ ಆದರೆ ಶೇ.90ರಷ್ಟು ಗೂಳೆ ಹೋಗುವುದು ತಪ್ಪಲಿದೆ.

- ದೇವಾನಂದ ಚವ್ಹಾಣ, ಮಾಜಿ ಶಾಸಕ

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ