ಸಮಸ್ಯೆ ಇರುವೆಡೆ ಖಾಸಗಿ ಬೋರ್‌ ವೆಲ್‌ಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ

KannadaprabhaNewsNetwork | Published : Mar 1, 2024 2:17 AM

ಸಾರಾಂಶ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸೆಲೆ ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ ವೆಲ್‌ಗಳಿಂದ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್‌ ಕುಮಾರ್ ಪಿಡಿಓ ಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸೆಲೆ ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ ವೆಲ್‌ಗಳಿಂದ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್‌ ಕುಮಾರ್ ಪಿಡಿಓ ಗಳಿಗೆ ಸೂಚನೆ ನೀಡಿದರು.

ಗುರುವಾರ ತಾಪಂ ಸಾಮಾರ್ಥ್ಯ ಸೌಧದಲ್ಲಿ ನಡೆದ ಬರ ನಿರ್ವಹಣೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಮುಂದಿನ ಒಂದು ವಾರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲೂ ಬರ ನಿರ್ವಹಣೆ ಬಗ್ಗೆ ಸಭೆ ನಡೆಸಲಾಗುವುದು. ಇಂದು ತುರ್ತು ಸಭೆ ಕರೆಯಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓ ಹಾಗೂ ಕಾರ್ಯದರ್ಶಿಗಳು ಜಾಗೃ ತರಾಗಬೇಕು. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ಗಮನ ಹರಿಸಬೇಕು. ಈಗಿನ ಮಾಹಿತಿ ಪ್ರಕಾರ ಬಹುತೇಕ ಬೋರ್‌ ವೆಲ್‌ ಗಳಲ್ಲಿ ಅಂತರ್ಜಲ ಕ್ಷೀಣಿಸಿದೆ. ಎಲ್ಲರೂ ಪಂಪ್‌ ಸೆಟ್‌ ಆನ್ ಮಾಡುವುದರಿಂದ ವಿದ್ಯುತ್ ಟಿಸಿಗಳಿಗೆ ಲೋಡ್‌ ಹೆಚ್ಚಿ ಟ್ರಿಪ್ ಆಗುತ್ತಿದೆ ಎಂಬ ದೂರುಗಳು ಬರುತ್ತಿದೆ ಎಂದರು. ಮುತ್ತಿನಕೊಪ್ಪದ ಮರಾಠಿ ಕ್ಯಾಂಪಿನಲ್ಲಿ ಕಳೆದ 9 ದಿನದಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ತಕ್ಷಣ ಕುಡಿವ ನೀರಿನ ವ್ಯವಸ್ಥೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಪಿಡಿಓ ಗಳು ತಮ್ಮ ಗ್ರಾಪಂ ವಾಟರ್‌ ಮ್ಯಾನ್‌, ಕಾರ್ಯದರ್ಶಿ, ಸದಸ್ಯರ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಇರುವಲ್ಲಿಗೆ ಭೇಟಿ ನೀಡಿ ಬಗೆ ಹರಿಸಬೇಕು ಎಂದು ಸೂಚಿಸಿದರು. ಖಾಸಗಿ ಕೊಳವೆ ಬಾವಿಗೆ ಮೊದಲ ಆದ್ಯತೆ: ಜಿಲ್ಲಾಧಿಕಾರಿಗಳ ಆದೇಶದಂತೆ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಮೊದಲಿಗೆ ಅಕ್ಕ, ಪಕ್ಕದ ಖಾಸಗಿ ಕೊಳವೆ ಬಾವಿ ಮಾಲೀಕರರೊಂದಿಗೆ ಒಪ್ಪಂದ ಮಾಡಿಕೊಂಡು ಆ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಸಬೇಕು. ಅವರು ಉಚಿತವಾಗಿ ನೀರು ಕೊಡಬಹುದು ಅಥವಾ ಅವರಿಗೆ ಸರ್ಕಾರದಿಂದ ಹಣ ಸಹ ನೀಡುತ್ತೇವೆ. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಗುರುತು ಮಾಡಿ ಅಂತಹ ಗ್ರಾಮಗಳ ಖಾಸಗಿ ಕೊಳವೆ ಬಾವಿ ಮಾಲೀಕರನ್ನು ಈಗಲೇ ಸಂಪರ್ಕಿಸಿ ಒಪ್ಪಂದ ಮಾಡಿಕೊಳ್ಳುವಂತೆ ಅವರು ಪಿಡಿಓಗಳಿಗೆ ತಾಕೀತು ಮಾಡಿದರು. ಟ್ಯಾಂಕರ್ ನೀರು: ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿಯವರ ಕೊಳವೆ ಬಾವಿ ಇಲ್ಲದಿದ್ದರೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಕೊಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಕೆಲವು ನಿಬಂಧನೆಗಳಿವೆ. ಟ್ಯಾಂಕರ್‌ ನೀರು ಕೊಡುವ ಸಂದರ್ಭ ಬಂದರೆ ಮುಂಚಿತವಾಗಿ ಸಭೆ ನಡೆಸಿ ಟೆಂಡರ್‌ ಕರೆದು ನಂತರ ಟ್ಯಾಂಕರ್‌ ಮೂಲಕ ನೀರು ಕೊಡುತ್ತೇವೆ. ಇದು 2ನೇ ಆದ್ಯತೆ ಆಗಬೇಕು. ಟ್ಯಾಂಕರ್ ಮೂಲಕವೂ ನೀರು ಕೊಡಲು ಸಾಧ್ಯವಾಗದಿದ್ದರೆ ಕೊನೆ ಹಂತದಲ್ಲಿ ಮಾತ್ರ ಹೊಸ ಕೊಳವೆ ಬಾಯಿ ಕೊರೆಯಲಾಗುತ್ತದೆ. ನರಸಿಂಹರಾಜಪುರ ತಾಲೂಕಿಗೆ ಟಾಸ್ಕ್‌ ಪೋರ್ಸ್ಲ್ ನಲ್ಲಿ 12 ಬೋರ್ ವೆಲ್ ತೆಗೆಯಲು ಅ‍ವಕಾಶವಿದ್ದು ಈಗಾಗಲೇ 4 ರಿಂದ 5 ಬೋರ್‌ ವೆಲ್‌ ತೆಗೆಯಲಾಗಿದೆ ಎಂದರು. ಮುತ್ತಿನಕೊಪ್ಪ ಗ್ರಾಪಂ ನ ಬೈರಾಪುರ, ಹೊನ್ನೇಕೊಡಿಗೆ ಗ್ರಾಪಂ ನ ಹಂತುವಾನಿ, ಬಿದಿರಮನೆ, ಬನ್ನೂರು ಗ್ರಾಪಂ ನ ಹಲಸೂರು, ಮಾಗುಂಡಿ ಗ್ರಾಪಂ ನ ಶಾಂತಿನಗರ, ಮಾಗುಂಡಿ, ಕಾನೂರು ಗ್ರಾಪಂನ ಬಿ.ಎಚ್‌.ಕೈಮರ, ಹಳೇ ಸಿನಿಮಾ ರಸ್ತೆ, ಕಡಹಿನಬೈಲು ಗ್ರಾಪಂ ನ ನವ ಗ್ರಾಮ, ಗಾಂಧಿ ಗ್ರಾಮ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಆಯಾ ಗ್ರಾಪಂ ಪಿಡಿಓಗಳ ಸಭೆ ಗಮನಕ್ಕೆ ತಂದರು. ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 6 ಜನರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಇವರಲ್ಲಿ 4 ಜನ ಗುಣಮುಖರಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರಪ್ಪ ಉಪಸ್ಥಿತರಿದ್ದರು. --- ಬಾಕ್ಸ್--

3ರಂದು ಗ್ಯಾರಂಟಿ ಸಮಾವೇಶ ಮಾರ್ಚ್ 3 ರಂದು ಚಿಕ್ಕಮಗಳೂರಿನಲ್ಲಿ ಗ್ಯಾರಂಟಿ ಸಮಾವೇಶ ನಡೆಯಲಿದೆ. ಅದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಯಿಂದ 50 ರಿಂದ 60 ಗ್ಯಾರಂಟಿ ಫಲಾನುಭವಿಗಳನ್ನು ಕಳಿಸುವ ವ್ಯವಸ್ಥೆ ಮಾಡಬೇಕು. ತಾಲೂಕಿನಿಂದ 14 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಪಂನ ಪಿಡಿಓಗಳು ನೋಡಲ್‌ ಅಧಿಕಾರಿಗಳಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

Share this article